ವಿಶೇಷ ವರದಿ
ಆಲೋಚನೆ ಮತ್ತು ಯೋಚನಾ ಶಕ್ತಿ ನಮ್ಮ ಆಡಳಿತ ಕಾರ್ಯವ್ಯಾಪ್ತಿಯನ್ನು ಸಮರ್ಪಕವಾಗಿ ಮತ್ತು ಸಮರ್ಥವಾಗಿ ಕೊಂಡೊಯ್ಯುತ್ತದೆ. ಕೇವಲ ಅಧಿಕಾರವೊಂದಿದ್ದರೆ ಸಾಲದು. ಅದಕ್ಕೆ ಜೀವಕಳೆ ಇರಬೇಕು ಎಂಬ ಮಾತಿದೆ. ಅದರಂತೆ ಬೈಲಹೊಂಗಲದ ತಹಸೀಲ್ದಾರ ಕಚೇರಿ ಈಗ ಹೊಸ ಹಸಿರು ವಲಯವಾಗಿ ಪರಿಸರಪ್ರೇಮಿಗಳನ್ನು ಮಾತ್ರವಲ್ಲ, ಜನರನ್ನು ಕೂಡ ಆಕರ್ಷಿಸುತ್ತಿದೆ. ಅದಕ್ಕೆ ಕಾರಣ ತಹಸೀಲ್ದಾರರು ಒಬ್ಬರೇ ಎಂದರೆ ಆಭಾಸವಾದೀತು. ಆದರೆ, ಇದಕ್ಕೆ ಮುನ್ನುಡಿ ಬರೆದವರು ಎಂದು ಹೇಳಬಹುದು.
ಹೌದು. ಬೈಲಹೊಂಗಲ ತಹಸೀಲ್ದಾರ ಕಚೇರಿಯ ಈ ಹಸಿರು ತೋರಣಕ್ಕೆ ತಹಸೀಲ್ದಾರ ಸದಾಶಿವ ಮಕ್ಕೋಜಿ ಅವರ ಕಾಳಜಿ ಕೂಡ ಇದೆ. ಅದರಂತೆ ತಹಸೀಲ್ದಾರ ಕಚೇರಿಯ ಸಿಬ್ಬಂದಿ ಕೂಡ ಪಾಲೂ ಇದೆ. ಮೊದಲು ತಮ್ಮ ಕಚೇರಿಯ ಸುತ್ತಮುತ್ತ ಪರಿಸರ ಕಾಳಜಿ ವಹಿಸಿ ಉತ್ತಮವಾಗಿ ಗಿಡ ಬೆಳೆಸಿ ಪರಿಸರ ಪ್ರೇಮ ಮೆರೆಯಬೇಕು ಎಂಬ ಮಹತ್ವಾಕಾಂಕ್ಷೆ ತಹಸೀಲ್ದಾರ ಮಕ್ಕೋಜಿಯವರದ್ದಾಗಿತ್ತು. ಅದನ್ನು ತಾವೊಬ್ಬರೇ ಮಾಡಲಿಲ್ಲ. ಎಲ್ಲರನ್ನು ಜತೆಯಾಗಿ ಕರೆದುಕೊಂಡು ಹೋಗಿ ಆರಂಭದಲ್ಲಿ ತಮ್ಮ ಕಚೇರಿ ಆವರಣವನ್ನೇ ಹಸಿರು ವಲಯಕ್ಕೆ ಆಯ್ಕೆ ಮಾಡಿಕೊಂಡರು. ಮಾತ್ರವಲ್ಲ, ಅದಕ್ಕೆ ಸಿಬ್ಬಂದಿಯನ್ನು ಕೂಡ ಸಮರ್ಪಕವಾಗಿ ಹಾಗೂ ಸಮರ್ಥವಾಗಿ ಬಳಸಿಕೊಂಡರು. ಇದು ಮತ್ತೊಬ್ಬರಿಗೆ ಪ್ರೇರಣೆ ಮಾತ್ರವಲ್ಲ, ಸ್ಫೂರ್ತಿ ಕೂಡ ಆಗಿದೆ ಎಂದು ಅಧಿಕಾರಿಗಳನ್ನು ಭೇಟಿ ಮಾಡಲು ಬಂದಿರುವ ಜನರು ಕೂಡ ಮುಕ್ತಕಂಠದಿಂದ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.ಹಾಗಾದರೆ ತಹಸೀಲ್ದಾರರು ಮಾಡಿದ್ದಾದರೂ ಏನು?:
ತಾವೊಬ್ಬರೇ ಗಿಡಗಳನ್ನು ಬೆಳೆಸಲು ಮುಂದಾಗಲಿಲ್ಲ. ಬದಲಾಗಿ ಸಿಬ್ಬಂದಿಗೂ ಗಿಡಗಳನ್ನು ಬೆಳೆಸುವ ಹೊಣೆಗಾರಿಕೆ ನೀಡಿದರು. ಜತೆಗೆ ಸ್ವಚ್ಛಂದ ಪರಿಸರ ಪ್ರೇಮ ಮೆರೆದರು. ತಹಶಿಲ್ದಾರರು ಸೇರಿದಂತೆ ಕಚೇರಿಯಲ್ಲಿ ಗ್ರೇಡ್ -2 ತಹಸೀಲ್ದಾರ, ಉಪತಹಸೀಲ್ದಾರ, ಸಿರಸ್ತೆದಾರರು, ಪ್ರಥಮ ಮತ್ತು ದ್ವಿತೀಯ ದರ್ಜೆ ಸಹಾಯಕರು, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು, ಗ್ರಾಮ ಸಹಾಯಕರು, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಆಹಾರ ನಿರೀಕ್ಷಕರು ಹಾಗೂ ಸಿಬ್ಬಂದಿ ಸೇರಿದಂತೆ ಸುಮಾರು 90ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿಯೊಬ್ಬರಿಗೂ ಒಂದೊಂದು ಗಿಡ ನೆಡುವ ಕುಂಡವನ್ನು ನೀಡಲಾಗಿದೆ. ಪ್ರತಿಯೊಂದು ಕುಂಡದ ಮೇಲೆ ಪ್ರತಿಯೊಂದು ಸಿಬ್ಬಂದಿ ಹೆಸರು ಹಾಗೂ ಹುದ್ದೆಯನ್ನು ಬರೆಸಲಾಗಿದೆ. ವಿವಿಧ ಬಗೆಯ ಗಿಡಗಳನ್ನು ನೆಡಲಾಗಿದ್ದು, ಅವರ ಹೆಸರಿರುವ ಗಿಡವನ್ನು ನೀರುಣಿಸುವುದರ ಜತೆಗೆ ಪೋಷಣೆ ಮಾಡುವ ಜವಾಬ್ದಾರಿಯನ್ನು ಸಿಬ್ಬಂದಿಗೆ ವಹಿಸಲಾಗಿದೆ. ಈ ಮೂಲಕ ಪರಿಸರ ಜಾಗೃತಿ ಜತೆಗೆ ಪ್ರೇಮವನ್ನು ಮೆರೆದಿದ್ದಾರೆ.
------------- ಕೋಟ್....
- ಸದಾಶಿವ ಮಕ್ಕೋಜಿ, ತಹಸೀಲ್ದಾರ, ಬೈಲಹೊಂಗಲ
ನಮ್ಮ ಸುತ್ತಲಿನ ಪರಿಸರ ಹಸಿರುಮಯವಾಗಿರಬೇಕು ಎಂಬ ತಹಸೀಲ್ದಾರ ಸದಾಶಿವ ಮಕ್ಕೋಜಿ ಅವರ ಆಶಯ ನಿಜಕ್ಕೂ ಶ್ಲಾಘನೀಯ. ಕಚೇರಿಗೆ ಬರುವವರು ಕೂಡ ಇದನ್ನು ನೋಡಿ ಸ್ಫೂರ್ತಿ ಪಡೆದು ತಮ್ಮ ಸುತ್ತಲಿನ ಪರಿಸರವನ್ನು ಕಾಳಜಿ ಮಾಡಿದರೆ, ಇದರ ಸಾರ್ಥಕತೆ ಬರುತ್ತದೆ.
---------
- ಶ್ರೀಶೈಲ ಗಾಟನಿ, ಆಹಾರ ನಿರೀಕ್ಷಕರು