ಕೊರಟಗೆರೆ: ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಲ್ಲಿ ಫಲಾನುಭವಿಗಳ ಆಯ್ಕೆ ಮಾಡಲಾಗುತ್ತಿದೆ. ಇನ್ನು ಚುರುಕುಗೊಳಿಸಿ ಅಕ್ಟೋಬರ್ ಒಳಗೆ ಆಯ್ಕೆ ಪ್ರಕಿಯೆ ಮುಗಿಸಿ ಡಿಸೆಂಬರ್ ಒಳಗಾಗಿ ಸವಲತ್ತುಗಳನ್ನು ಸಂಪೂರ್ಣವಾಗಿ ವಿತರಿಸುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದರು. ಜಿಲ್ಲೆಯಲ್ಲಿ ಅಂಗವಾಡಿಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಪಡೆದಿದ್ದು, ಈ ತಿಂಗಳ ಅಂತ್ಯದೊಳಗೆ ಅವುಗಳನ್ನು ತುಂಬಲಾಗುವುದು ಈ ಸಂಬಂಧ ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳುತ್ತಾರೆ ಎಂದರು.ತುಮಕೂರು ಜಿಲ್ಲೆಯಲ್ಲಿ ಪ್ರತಿ ತಾಲೂಕಿನಲ್ಲೂ 2000 ನಿವೇಶನಗಳನ್ನು ಗುರುತಿಸಿ ಹಂಚುವ ಗುರಿ ಹೊಂದಿದ್ದು, ಕೆಲವು ಕಡೆ ಕಲ್ಲು ಬಂಡೆಗಳಿದ್ದು ನಿವೇಶನ ಗುರುತಿಸಲು ವಿಳಂಬವಾಗುತ್ತಿದ್ದು, ಸೂಕ್ತ ಜಾಗಗಳನ್ನು ಗುರುತಿಸಲಾಗುತ್ತದೆ. ಇದರೊಂದಿಗೆ ಪಹಣಿದಾರರ ಹೆಸರನ್ನು ಆಧಾರ್ ಜೋಡಣೆ ಮಾಡುವುದನ್ನು ಮತಷ್ಟು ಚುರುಕುಗೊಳಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸಿದ್ದು ಪ್ರಸೂತಿ ಹೆಚ್ಚು ಮಹಿಳೆಯರು ಬರುತ್ತಿದ್ದು, ಗ್ರಾಮೀಣ ಮಹಿಳೆಯರಿಗೆ ಅನುಕೂಲವಾಗುವ ದೃಷ್ಟಿಯಿಂದ ಅಗತ್ಯತೆಯನ್ನು ತಿಳಿದು ಸ್ಯಾನಿಂಗ್ ಮಿಷನ್‌ನ್ನು ಒದಗಿಸುವ ಮತ್ತು ಅದನ್ನು ನಿರ್ವಹಿಸುವ ರೇಡಿಯೋಲಜಿ ತಜ್ಞರನ್ನು ನೇಮಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.ಡೆಂಘೀ ರೋಗವನ್ನು ಪರಿಶೀಲನೆ ಮಾಡಿದ್ದು, ತಾಲೂಕಿನಲ್ಲಿ ೬ ಪ್ರಕರಣಗಳು ಇದ್ದು ಡೆಂಘೀ ನಿಯಂತ್ರಣಕ್ಕೆ ಇಲಾಖೆಯೊಂದಿಗೆ ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ. ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ದಿನಕ್ಕೆ ಸರಾಸರಿ 500 ಓಪಿಡಿ ರೋಗಿಗಳು ಬರುತ್ತಿದ್ದು, ನೂತನ ಆಸ್ಪತ್ರೆಗೆ ಜಾಗ ಮಂಜೂರು ಆಗಿರುವ ಬಗ್ಗೆ ಗಮನಕ್ಕೆ ತಂದಿದ್ದು ಅದನ್ನು ಪರಿಶೀಲಿಸಲಾಗುವುದು ಎಂದರು.
ಔಷಧ ದಾಸ್ತಾನು ಸಿಬ್ಬಂದಿಗೆ ನೋಟಿಸ್
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಔಷಧಿ ಕೇಂದ್ರದಲ್ಲಿ ಸಿಬ್ಬಂದಿ ಆಸ್ಪತ್ರೆಯ ಒಳರೋಗಿಗಳ ವಿವರವನ್ನು ರಿಜಿಸ್ಟಾರ್‌ನಲ್ಲಿ 14 ಎಂದು ನಮೂದಿಸಿದ್ದು, ನಂತರ ಇಲಾಖೆಗೆ ಕಂಪ್ಯೂಟರ್‌ನಲ್ಲಿ ವರದಿ ಸಲ್ಲಿಸುವಾಗ 114 ಎಂದು ವರದಿ ನೀಡಲಾಗಿತ್ತು, ಈ ಬಗ್ಗೆ ವಿಚಾರಿಸಿದಾಗ ಎಂಟ್ರಿಯಲ್ಲಿ ಲೋಪವಾಗಿದೆ ಎಂದು ಸಬೂಬು ಹೇಳಿದ ಔಷಧ ದಾಸ್ತಾನು ಸಿಬ್ಬಂದಿಗೆ ನೊಟೀಸ್ ನೀಡಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ ಸೂಚಿಸಿದರು.