ವಿದ್ಯಾರ್ಥಿ ಉನ್ನತ ಸ್ಥಾನ ತಲುಪಿದಾಗ ಗುರುವಿಗೆ ಸಾರ್ಥಕ ಭಾವ: ನಿವೃತ್ತ ಪ್ರಾಂಶುಪಾಲ ಕೆ.ಟಿ. ತಿಮ್ಮಯ್ಯ

KannadaprabhaNewsNetwork |  
Published : Feb 13, 2026, 02:00 AM IST
2004-2005ನೇ ಸಾಲಿನ 10 ನೇಯ ತರಗತಿ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ  | Kannada Prabha

ಸಾರಾಂಶ

20 ವರ್ಷಗಳ ನಂತರ ಎಲ್ಲರೂ ಒಟ್ಟಿಗೆ ಸೇರಬೇಕು, ಗುರುಗಳಿಗೆ ವಂದನೆ ಸಮರ್ಪಿಸಬೇಕು ಎಂಬ ಆಲೋಚನೆ ತುಂಬಾ ಅಭಿನಂದನೀಯ ಎಂದು ತಿಳಿಸಿದರು.

ಶಿಕ್ಷಕರಿಗೆ ಗುರುವಂದನಾ ಕಾರ್ಯಕ್ರಮದಲ್ಲಿ

ಕನ್ನಡಪ್ರಭ ವಾರ್ತೆ ಗೌರಿಬಿದನೂರು ವಿದ್ಯಾರ್ಥಿಗಳು ಕಲಿಸಿದ ಗುರುಗಳಿಗಿಂತ ಉನ್ನತ ಸ್ಥಾನ ತಲುಪಬೇಕು. ಆಗ ಮಾತ್ರ ವಿದ್ಯೆ ಕಲಿಸಿದ ಗುರುಗಳಲ್ಲಿ ಸಾರ್ಥಕ ಭಾವ ಮೂಡುತ್ತದೆ ಎಂದು ನಿವೃತ್ತ ಪ್ರಾಂಶುಪಾಲರಾದ ಕೆ.ಟಿ. ತಿಮ್ಮಯ್ಯ ಹೇಳಿದರು.

ನಗರದ ಆಚಾರ್ಯ ಪ್ರೌಢಶಾಲೆ ಆವರಣದಲ್ಲಿ 2004- 2005ನೇ ಸಾಲಿನ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯುವಜನರು ಪಾಶ್ಚಿಮಾತ್ಯ ಸಂಸ್ಕೃತಿಗೆ ಅಂಟಿಕೊಳ್ಳದೇ ನಮ್ಮ ದೇಶದ ಸಂಸ್ಕೃತಿ ಅರಿತು ಆಚರಿಸಬೇಕು. ಪ್ರಪಂಚದಲ್ಲಿ ಗುರುವಿಗೆ ಇರುವ ಸ್ಥಾನ ಅತ್ಯಂತ ಅಮೂಲ್ಯವಾದದ್ದು. ದೇವರು, ತಾಯಿ ನಂತರದ ಸ್ಥಾನ ಇರುವುದೇ ಗುರುವಿಗೆ. ಆ ಕಾಯಕವನ್ನು ಪ್ರತಿಯೊಬ್ಬ ಶಿಕ್ಷಕರು ತಮ್ಮದೇ ಆದ ರೀತಿಯಲ್ಲಿ ಈ ಸಮಾಜದಲ್ಲಿ ನಿರ್ವಹಿಸಿಕೊಂಡು ಬರುತ್ತಿದ್ದಾರೆ ಎಂದರು.

ಶಿಕ್ಷಕ ಎನ್. ಎಸ್. ನಾಗರಾಜರಾವ್ ಗುರುವಂದನೆ ಸ್ವೀಕರಿಸಿ ಮಾತನಾಡಿ, ಸಮಾಜದಲ್ಲಿ ಏಳ್ಗೆ ಸಾಧಿಸಲು ವಿದ್ಯೆ ಪಡೆಯಬೇಕು. ನನ್ನ ಶಿಕ್ಷಕ ವೃತ್ತಿ ಆರಂಭಿಸಿದ ದಿನದಿಂದ ಇಲ್ಲಿಯವರೆಗೂ ನಾನು ಕಂಡಂತೆ ಇಲ್ಲಿ ವಿದ್ಯಾರ್ಥಿಗಳು ಹಠವಾದಿಗಳು. ವಿದ್ಯೆ ಕಲಿತು ತಾವು ಏನಾದರೂ ಸಾಧಿಸಲೇ ಬೇಕು ಎಂಬ ಛಲ ಹೊಂದಿರುವ ವ್ಯಕ್ತಿಗಳಾಗಿರುವ ಕಾರಣದಿಂದಲೇ ಬರಪೀಡಿತ ಪ್ರದೇಶದಲ್ಲಿ ವ್ಯಾಸಂಗ ಮಾಡಿರುವ ಅದೆಷ್ಟೋ ಜನರು ಇಂದು ದೇಶದ ನಾನಾ ಭಾಗಗಳಲ್ಲಿ ಉನ್ನತ ಸ್ಥಾನಮಾನ ಅಲಂಕರಿಸಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

20 ವರ್ಷಗಳ ನಂತರ ಎಲ್ಲರೂ ಒಟ್ಟಿಗೆ ಸೇರಬೇಕು, ಗುರುಗಳಿಗೆ ವಂದನೆ ಸಮರ್ಪಿಸಬೇಕು ಎಂಬ ಆಲೋಚನೆ ತುಂಬಾ ಅಭಿನಂದನೀಯ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಲ್ಪನಾ ಮಾತನಾಡಿ, ನೀವು ಓದುವಾಗ ಮಾಡುತ್ತಿದ್ದ ಚೇಷ್ಟೆಗಳು, ಕೀಟಲೆಗಳು, ಆಡುತ್ತಿದ್ದ ಆಟಗಳು ಅಷ್ಟೇ ಅಲ್ಲದೇ, ವಿದ್ಯೆಗೂ ಸಹ ಮಹತ್ವ ನೀಡಿ ತಾವು ಪ್ರಸ್ತುತ ಸಮಾಜದಲ್ಲಿ ಪಡೆದಿರುವ ಸ್ಥಾನಮಾನ, ನಿರ್ವಹಿಸುತ್ತಿರುವ ಹುದ್ದೆಗಳ ಬಗ್ಗೆ ಪ್ರತಿಯೊಬ್ಬರೂ ವಿಭಿನ್ನವಾದ ಶೈಲಿಯಲ್ಲಿ ಹೇಳುತ್ತಿರುವುದನ್ನು ನೋಡಿ ನನಗೆ ಸಂತಸವಾಯಿತು, ಏಕೆಂದರೆ ನಾವುಗಳೆಲ್ಲಾ ಒಂದೇ ಕಡೆ ಇದ್ದು, ವ್ಯಾಸಂಗ ಮಾಡಿದ ವ್ಯಕ್ತಿಗಳು. ಇಂದು ಒಬ್ಬೊಬ್ಬರು ಒಂದೊಂದು ಕಡೆ ವಿಭಿನ್ನವಾದ ಸಂಸ್ಥೆಗಳು, ವಿಭಿನ್ನ ಶೈಲಿಯ ವ್ಯವಹಾರಗಳು, ವಿಭಿನ್ನ ವೃತ್ತಿಗಳನ್ನು ಆಯ್ಕೆ ಮಾಡಿಕೊಂಡು ಇಂದು ಸಕಾರಾತ್ಮಕ ಜೀವನ ನಡೆಸುತ್ತಿರುವ ಬಗ್ಗೆ ಹೇಳಿಕೊಂಡಿದ್ದಲ್ಲದೇ ತಮ್ಮ ಹಿಂದಿನ ದಿನಗಳ ನೆನಪುಗಳನ್ನು ಮೆಲುಕು ಹಾಕಿಕೊಳ್ಳುವ ಒಂದು ಸನ್ನಿವೇಶಕ್ಕೆ ಸಾಕ್ಷಿಗಳಾಗಿ ಎಲ್ಲರೂ ಒಟ್ಟಿಗೆ ಸೇರುವ ಸದಾವಕಾಶವನ್ನು ಕಲ್ಪಿಸಿಕೊಂಡಿದ್ದಕ್ಕೆ ತುಂಬಾ ಸಂತಸವಾಗುತ್ತಿದೆ ಎಂದರು.

ಶಾಲೆಯ ಶಿಕ್ಷಕರಾದ ವಿ.ಚಂದ್ರಶೇಖರ್, ಆರ್.ಡಿ.ರಂಗಧಾಮಯ್ಯ, ಎನ್.ಎಸ್.ಗಿರಿಜಮ್ಮ, ಎನ್.ಎ.ಚನ್ನಕೇಶವರೆಡ್ಡಿ, ಎನ್.ಗಂಗಾಧರಪ್ಪ,ಎಚ್.ಎಸ್.ರವಿಕುಮಾರ್, ಕೆ.ಟಿ.ಶೀಲಾಕುಮಾರಿ, ಎ.ನಟರಾಜ್ ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಧಾರ್ಮಿಕವಾಗಿ ಕಡೂರು ಶ್ರೀಮಂತ: ಫಾದರ್ ಮೋಸೆಸ್ ಎಂ.ಜೆ.
ಶ್ರವಣಬೆಳಗೊಳಕ್ಕೆ ವಿದ್ಯುತ್ ಯುಜಿ ಕೇಬಲ್ ಅಳವಡಿಕೆಗೆ ಅನುಮೋದನೆ