ಜ್ಞಾನದ ತುತ್ತು, ಅನುಭವದ ಬುತ್ತಿ ನೀಡುವವನೇ ಶಿಕ್ಷಕ: ಪ್ರೊ. ಮಾಲತಿ ಪಟ್ಟಣಶೆಟ್ಟಿ

KannadaprabhaNewsNetwork |  
Published : Sep 16, 2024, 01:47 AM IST
15ಡಿಡಬ್ಲೂಡಿ7ಕರ್ನಾಟಕ ವಿದ್ಯಾವರ್ಧಕ ಸಂಘವು ಶಿವಗಂಗಾ ಮತ್ತು ವೀರಪ್ಪ ರಾಮಾಪೂರ ದತ್ತಿ ಅಂಗವಾಗಿ `ಆದರ್ಶ ಶಿಕ್ಷಕ ದಂಪತಿ ಪುರಸ್ಕಾರವನ್ನು ಎಸ್‌.ಎಂ. ಹುಡೇದಮನಿ ದಂಪತಿಗೆ ಪ್ರದಾನ ಮಾಡಲಾಯಿತು.  | Kannada Prabha

ಸಾರಾಂಶ

ನಿವೃತ್ತರಾದವರನ್ನು ಕಡೆಗಣಿಸುವುದು ಸಲ್ಲದು. ನಿವೃತ್ತರಲ್ಲಿ ಅಪಾರ ಅನುಭವಗಳಿರುತ್ತವೆ. ನಮ್ಮ ಆಡಳಿತ ವಲಯಗಳಲ್ಲಿ ನಿವೃತ್ತ ಶಿಕ್ಷಕರ ಪ್ರತಿನಿಧಿಗಳು ಇರಬೇಕು ಎಂದು ಹಿರಿಯ ಸಾಹಿತಿ ಪ್ರೊ. ಮಾಲತಿ ಪಟ್ಟಣಶೆಟ್ಟಿ ಹೇಳಿದರು.

ಧಾರವಾಡ: ಎಲ್ಲಿ ಶಿಕ್ಷಕರನ್ನು ಗೌರವಿಸಲಾಗುತ್ತದೆಯೋ ಆ ನಾಡಿಗೆ ಭವಿಷ್ಯವಿದೆ. ಒಬ್ಬ ಶಿಕ್ಷಕ ವಿದ್ಯಾರ್ಥಿಗಳಿಗೆ, ಸಮಾಜಕ್ಕೆ ಜ್ಞಾನದ ತುತ್ತು, ಅನುಭವದ ಬುತ್ತಿ ನೀಡುತ್ತಾನೆ. ಜ್ಞಾನ ಕವಚವಾದರೆ, ಅನುಭವ ಹೂರಣ ಎಂದು ಹಿರಿಯ ಸಾಹಿತಿ ಪ್ರೊ. ಮಾಲತಿ ಪಟ್ಟಣಶೆಟ್ಟಿ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘ ಶಿವಗಂಗಾ ಮತ್ತು ವೀರಪ್ಪ ರಾಮಾಪೂರ ದತ್ತಿ ಅಂಗವಾಗಿ ಆದರ್ಶ ಶಿಕ್ಷಕ ದಂಪತಿ ಪುರಸ್ಕಾರ ಪ್ರದಾನ ಹಾಗೂ ಹೊಸ ಪರಿಪಾಠ ಮತ್ತು ನೇಹಾರಾಣಿ ಕಥೆಗಳು ಕೃತಿಗಳ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಿವೃತ್ತರಾದವರನ್ನು ಕಡೆಗಣಿಸುವುದು ಸಲ್ಲದು. ನಿವೃತ್ತರಲ್ಲಿ ಅಪಾರ ಅನುಭವಗಳಿರುತ್ತವೆ. ನಮ್ಮ ಆಡಳಿತ ವಲಯಗಳಲ್ಲಿ ನಿವೃತ್ತ ಶಿಕ್ಷಕರ ಪ್ರತಿನಿಧಿಗಳು ಇರಬೇಕು. ಅವರ ಸಲಹೆಗಳನ್ನು ಪಡೆಯಬೇಕು. ಎಲ್ಲ ಸೇವಾ ವಲಯಗಳ ಸಲಹಾ ಸಮಿತಿಗಳಲ್ಲಿ ನಿವೃತ್ತ ಶಿಕ್ಷಕರನ್ನು ಬಳಸಿಕೊಳ್ಳಬೇಕು. ಮನೆಯಲ್ಲಿ ಅಜ್ಜ, ಅಜ್ಜಿ ಇದ್ದರೆ ಅದೇ ಅನುಭವ ಮಂಟಪ ಇದ್ದಂತೆ. ಅವರು ಮನೆಯಲ್ಲಿ ಬದುಕಿನ ಅನುಭವಗಳನ್ನು ಮುಂದಿನ ಪೀಳಿಗೆಗೆ ಹರಿಯಬಿಡುತ್ತಾರೆ ಎಂದರು.

ಆದರ್ಶ ಶಿಕ್ಷಕ ದಂಪತಿ ಪುರಸ್ಕಾರ ಪ್ರದಾನ ಮಾಡಿದ ಆಕಾಶವಾಣಿ ವಿಶ್ರಾಂತ ನಿರ್ದೇಶಕ ಡಾ. ಬಸು ಬೇವಿನಗಿಡದ, ನಮ್ಮ ದೇಶ ಬಹುತ್ವ ದೇಶ. ನಾವೆಲ್ಲ ಅಣ್ಣ-ತಮ್ಮಂದಿರ ರೀತಿ ಬಾಳಬೇಕು. ಇದು ವೈಚಾರಿಕ, ವೈಜ್ಞಾನಿಕ ಚಿಂತನೆಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಾಧ್ಯವಿದೆ. ಅದೇ ಅಜ್ಜ ಹಾಕಿದ ಆಲದ ಮರಕ್ಕೆ ಜೋತು ಬೀಳುವುದಲ್ಲ. ಇಂದಿನ ಮಕ್ಕಳು ಹೊಸ, ಹೊಸ ಸಂಗತಿಗಳಿಗೆ ಆಕರ್ಷಿತರಾಗುತ್ತಿದ್ದಾರೆ. ಅವರಿಗೆ ಬೇಕಾಗಿರುವುದು ಮತೀಯ ಚಿಂತನೆ ಅಲ್ಲ. ಹೊಸ ಪರಿಪಾಠ, ನೂತನ ಪರಂಪರೆಯನ್ನು ಹಿರಿಯರಾದ ನಾವು ಕಟ್ಟಿಕೊಡಬೇಕು ಎಂದು ಹೇಳಿದರು.

ಆದರ್ಶ ಶಿಕ್ಷಕ ದಂಪತಿ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಶಿಕ್ಷಣ ಇಲಾಖೆಯ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಎಸ್.ಎಂ. ಹುಡೇದಮನಿ ಈ ಪುರಸ್ಕಾರ ನನಗೆ ಪ್ರೇರಣೆ, ಧೈರ್ಯ ತುಂಬಿದೆ. ಇಲಾಖೆ ಕಾರ್ಯದಲ್ಲಿ ನನ್ನಲ್ಲಿ ಹೊಸ ಚೈತನ್ಯ ತುಂಬಿದ್ದೀರಿ ಎಂದರು.

ಶಿಕ್ಷಕಿ ತಹಮೀನಾ ಸೈಯದ್ ಮಾತನಾಡಿ, ಧಾರವಾಡದ ನೆಲದಲ್ಲಿ ದೊಡ್ಡ ಶಕ್ತಿ ಇದೆ. ಅದು ನನ್ನ ವ್ಯಕ್ತಿತ್ವವನ್ನು ರೂಪಿಸಿದೆ ಎಂದರು.

ಶಿಕ್ಷಕ ಸಾಹಿತಿ ಶ್ರೀಧರ ಗಸ್ತಿ, ಶಿಕ್ಷಕ ಸಾಹಿತಿ ಡಾ. ಲಿಂಗರಾಜ ರಾಮಾಪೂರ ಅವರ ಹೊಸ ಪರಿಪಾಠ ಹಾಗೂ ಅವರ ಮಗಳಾದ ನೇಹಾ ರಾಮಾಪೂರ ಅವರ ನೇಹಾರಾಣಿ ಕಥೆಗಳು ಪುಸ್ತಕ ಪರಿಚಯ ಮಾಡಿದರು. ವೀರಣ್ಣ ಒಡ್ಡೀನ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವೇಶ್ವರಿ ಹಿರೇಮಠ ನಿರೂಪಿಸಿದರು. ನಂದೀಶ ವಚನ ಗಾಯನ ನೆರವೇರಿಸಿದರು. ದತ್ತಿ ದಾನಿ ಡಾ. ಲಿಂಗರಾಜ ರಾಮಾಪೂರ ವಂದಿಸಿದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ