ಶಿವಾನಂದ ಗೊಂಬಿ
ಇದು ಹುಬ್ಬಳ್ಳಿ ತಾಲೂಕಿನ ಕಿರೇಸೂರು ಎಂಬ ಪುಟ್ಟ ಗ್ರಾಮದಲ್ಲಿನ ಸರ್ಕಾರಿ ಪ್ರೌಢಶಾಲೆಯ ಆಂಗ್ಲ ಭಾಷೆ ಶಿಕ್ಷಕ ಲಿಂಗರಾಜ ರಾಮಾಪುರ ಮಾಡಿರುವ ವಿನೂತನ ಪ್ರಯೋಗ. ಇದಕ್ಕೆ ಅಲ್ಲಿನ ಶಿಕ್ಷಕರು ಸಾಥ್ ನೀಡಿದ್ದಾರೆ.
26 ವರ್ಷದಿಂದ ಶಿಕ್ಷಕ ವೃತ್ತಿಯಲ್ಲಿರುವ ರಾಮಾಪುರ, ಕಳೆದ 6 ವರ್ಷದಿಂದ ಕಿರೇಸೂರ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಕೊಂಚ ವಿಭಿನ್ನವಾಗಿ ಯೋಚಿಸಿ ಶಾಲೆಯ ಚಿತ್ರಣವನ್ನೇ ಬದಲಿಸಿದ್ದಾರೆ.ಮಕ್ಕಳ ಪತ್ರಿಕೆಗೆ ಶಿಕ್ಷಕ ಸಂಪಾದಕ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಮೊಬೈಲ್ ಗೀಳು ಬಿಡಿಸಬೇಕು. ಸಾಹಿತ್ಯಾಭಿರುಚಿ ಬೆಳೆಸಬೇಕು ಎಂಬ ಉದ್ದೇಶದಿಂದ ಶಾಲೆಯಲ್ಲಿ "ಸಾಲಿಗುಡಿ " ಎಂಬ ಹೆಸರಿನ ದ್ವೈಮಾಸಿಕ ಪತ್ರಿಕೆಯನ್ನು ಹೊರತಂದಿದ್ದಾರೆ. ಇವರ ಯೋಚನೆಗೆ ಗ್ರಾಮಸ್ಥರು, ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಳೆದ 2 ವರ್ಷದಿಂದ ಈ ದ್ವೈಮಾಸಿಕ ಪತ್ರಿಕೆ ಹೊರತರಲಾಗುತ್ತಿದೆ. 8 ಪುಟದ ಈ ಪತ್ರಿಕೆಯು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮುದ್ರಣವಾಗುತ್ತದೆ. ನಮ್ಮೂರು ವಿಶೇಷ, ನಮ್ಮೂರ ಸಾಧಕರು, ಮಕ್ಕಳ ಕಥೆ, ಕವನ ಹೀಗೆ ಮಕ್ಕಳು, ಪಾಲಕರು, ಶಿಕ್ಷಕರು ಏನು ಬೇಕಾದರೂ ಬರೆಯಬಹುದು. ಪುಟವಿನ್ಯಾಸವನ್ನು ಪತ್ರಿಕೆಯ ಸಂಪಾದಕರೂ ಆಗಿರುವ ಶಿಕ್ಷಕ ರಾಮಾಪುರ ಅವರೇ ಮಾಡುತ್ತಾರೆ. ಅದನ್ನು ಹುಬ್ಬಳ್ಳಿಯಲ್ಲಿ ಎ3 ಸೈಜಿನಲ್ಲಿ ಝೆರಾಕ್ಸ್ ಮಾಡಿಸಿ ಎಂಟು ಪುಟಗಳ ಪತ್ರಿಕೆ ಸಿದ್ಧಪಡಿಸಿ ಮನೆ ಮನೆಗೆ ಹಂಚಲಾಗುತ್ತದೆ. ಇದಕ್ಕೆ ₹5500 ಖರ್ಚಾಗುತ್ತದೆ. ಊರಿನ ಯಾರಾದರೊಬ್ಬರು ಖರ್ಚನ್ನು ನಿಭಾಯಿಸುತ್ತಿದ್ದಾರೆ. ಈ ಮೂಲಕ ಶಿಕ್ಷಕ ರಾಮಾಪುರ ಕಾರ್ಯಕ್ಕೆ ಕೈಜೋಡಿಸುತ್ತಿದ್ದಾರೆ.
ಬಾಹ್ಯಾಕಾಶ ಪ್ರಯೋಗಾಲಯ: ರಾಮಾಪುರ ಇಂಗ್ಲಿಷ್ ಭಾಷೆಯ ಶಿಕ್ಷಕರಾದರೂ ವಿಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ. ಹೀಗಾಗಿ ಹಿಮಾಲಯನ ಸ್ಪೇಸ್ ಸೆಂಟರ್ ನೆರವಿನೊಂದಿಗೆ ಶಾಲೆಯಲ್ಲಿ ಬಾಹ್ಯಾಕಾಶ ಪ್ರಯೋಗಾಲಯ ತೆರೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹಿಮಾಲಯನ್ ಸ್ಪೇಸ್ ಸೆಂಟರ್ ಟೆಲಿಸ್ಕೋಪ್‌ನ್ನು ನೀಡಿದೆ. ಆ ಮೂಲಕ ಮಕ್ಕಳಿಗೆ ಬಾಹ್ಯಾಕಾಶದ ಬಗ್ಗೆ ಪ್ರಾತ್ಯೇಕ್ಷಿಕೆ ಮೂಲಕ ಪಾಠ ಹೇಳಿಕೊಡಲಾಗುತ್ತಿದೆ. ಗ್ರಹಣಗಳಾದಾಗ ಮಕ್ಕಳಿಗೆ ವೈಜ್ಞಾನಿಕವಾಗಿ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗುತ್ತದೆ.
ರಾಮಾಪುರ ವಿಭಿನ್ನರಲ್ಲಿ ವಿಭಿನ್ನ ಶಿಕ್ಷಕರಾಗಿ ನಿಲ್ಲುತ್ತಾರೆ. ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕರೆನಿಸಿಕೊಂಡಿರುವುದಂತೂ ಸತ್ಯ..!
ಮಕ್ಕಳಲ್ಲಿ ಪಠ್ಯೇತರ ಚಟುವಟಿಕೆಗಳಲ್ಲೂ ಹೆಚ್ಚು ಆಸಕ್ತಿ ಬರುವಂತೆ ಮಾಡಬೇಕು. ಮೊಬೈಲ್, ಟಿವಿ ಗೀಳು ಬಾರದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಣ್ಣ ಪ್ರಯತ್ನ ಮಾಡುತ್ತಿದ್ದೇನೆ. ಇದಕ್ಕೆ ಶಾಲೆಯಲ್ಲಿನ ನನ್ನ ಸಹದ್ಯೋಗಿಗಳು, ಮುಖ್ಯಶಿಕ್ಷಕರು, ಗ್ರಾಮಸ್ಥರು ಸಾಥ್ ನೀಡುತ್ತಿದ್ದಾರೆ. ಮಕ್ಕಳು ಆಸಕ್ತಿ ತೋರುತ್ತಿದ್ದಾರೆ ಎಂದು ಶಿಕ್ಷಕ ಲಿಂಗರಾಜ ರಾಮಾಪುರ ಸಂತಸ ಹಂಚಿಕೊಂಡರು.