ಫೈನಲ್ ಪ್ರವೇಶಿಸಿದ ಕುಪ್ಪಂಡ, ಚೇಂದಿರ ತಂಡ

KannadaprabhaNewsNetwork |  
Published : Dec 25, 2025, 02:45 AM IST
ತಂಡ | Kannada Prabha

ಸಾರಾಂಶ

ಹೈಪ್ಲೈಯರ್ಸ್ ಕಪ್-2025ರ ಸೆಮಿ ಫೈನಲ್ ನಲ್ಲಿ ಕುಪ್ಪಂಡ ಮತ್ತು ಚೇಂದಿರ ತಂಡಗಳು ಫೈನಲ್ ಪ್ರವೇಶಿಸಿವೆ.

ಕನ್ನಡಪ್ರಭ ವಾರ್ತೆ ಮಡಿಕೇರಿಬಿಟ್ಟಂಗಾಲ ಸಮೀಪದ ವಿ. ಬಾಡಗದ ಹೈ ಪ್ಲೈಯರ್ಸ್ ತಂಡದ ವತಿಯಿಂದ ವಿಯೋಮನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಅವರ ಸಹ ಪ್ರಾಯೋಜಕತ್ವದಲ್ಲಿ ವಿ. ಬಾಡಗದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ 4ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಹೈಪ್ಲೈಯರ್ಸ್ ಕಪ್-2025ರ ಸೆಮಿ ಫೈನಲ್ ನಲ್ಲಿ ಕುಪ್ಪಂಡ ಮತ್ತು ಚೇಂದಿರ ತಂಡಗಳು ಫೈನಲ್ ಪ್ರವೇಶಿಸಿವೆ.

ಹಿಂದೆ 2 ವರ್ಷ ನಿರಂತರವಾಗಿ ವಿನ್ನರ್ಸ್ ಪ್ರಶಸ್ತಿ ಪಡೆದು ಚಾಂಪಿಯನ್ ಪಟ್ಟಕೇರಿದ್ದ ಚೇಂದಿರ ತಂಡ ಇದೀಗ 3ನೇ ಬಾರಿಗೆ ಚಾಂಪಿಯನ್ ಕನಸು ಹೊತ್ತು ಹೋರಾಟ ನಡೆಸುವಂತಾಗಿದೆ

ಬಿಟ್ಟಂಗಾಲ, ಬಿ.ಶೆಟ್ಟಿಗೇರಿ ಮತ್ತು ಹಾತೂರು ಗ್ರಾ. ಪಂ. ವ್ಯಾಪ್ತಿಯಲ್ಲಿ ಐನ್ ಮನೆ ಹೊಂದಿರುವ ಕೊಡವ ಕುಟುಂಬ ತಂಡಗಳಿಗಾಗಿ ನಡೆಯುತ್ತಿರುವ ಈ ಕೌಟುಂಬಿಕ ಹಾಕಿ ಕ್ರೀಡೆಯ ಸೆಮಿ ಫೈನಲ್ಸ್ ಹಣಾಹಣಿ ನೆರೆದಿದ್ದ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿತು. ಬಹುತೇಕ ಯುವ ಆಟಗಾರರನ್ನೇ ಹೊಂದಿರುವ ಈ ಎರಡೂ ತಂಡಗಳು ಸಮಬಲದ ಹೋರಾಟ ನಡೆಸಿ ಗಮನ ಸೆಳೆದವು. 3ನೇ ಬಾರಿಗೆ ಫೈನಲ್ ಪ್ರವೇಶಿಸಿರುವ ಚೇಂದಿರ ಮತ್ತು ಇದೇ ಮೊದಲ ಬಾರಿಗೆ ಫೈನಲ್ ಗೆ ಅರ್ಹತೆ ಪಡೆದಿರುವ ಕುಪ್ಪಂಡ ತಂಡಗಳು ಗುರುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಚಾಂಪಿಯನ್ ಪಟ್ಟಕ್ಕಾಗಿ ಹೋರಾಟ ನಡೆಸಲಿದೆ.

ಪ್ರಥಮ ಸೆಮಿ ಫೈನಲ್ ಪಂದ್ಯದಲ್ಲಿ ಕುಪ್ಪಂಡ ತಂಡವು ಕೊಂಗಂಡ ತಂಡವನ್ನು ಶೂಟೌಟಿನಲ್ಲಿ 5-2 ಗೋಲುಗಳ ಮೂಲಕ ಸೋಲಿಸಿತು. ಆರಂಭದಲ್ಲೇ ಬಿರುಸಿನ ಆಟಕ್ಕೆ ಒತ್ತು ನೀಡಿದ ಉಭಯ ತಂಡದ ಆಟಗಾರರು ಎದುರಾಳಿಯ ''''''''ಡಿ'''''''' ಆವರಣದೊಳಗೆ ನಿರಂತರವಾಗಿ ಲಗ್ಗೆ ಇಡುತ್ತಿತ್ತು. ಈ ವೇಳೆ ಕೊಂಗಂಡ ತಂಡಕ್ಕೆ ದೊರೆತ ಉತ್ತಮ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಅತಿಥಿ ಆಟಗಾರ ಸುಬ್ರಮಣಿ 14ನೇ ನಿಮಿಷದಲ್ಲಿ ಮಿಂಚಿನ ಗೋಲೊoದನ್ನು ಬಾರಿಸಿ ತಂಡದ ಖಾತೆ ತೆರೆದರು. ಇದೇ ಉತ್ಸಾಹದಲ್ಲಿ ಕೊಂಗಂಡ ತಂಡ ಮುನ್ನುಗುತ್ತಿದ್ದಂತೆ ಕುಪ್ಪಂಡ ತಂಡಕ್ಕೆ ದೊರೆತ ಉತ್ತಮ ಪಾಸ್ ಅನ್ನು ಬಳಸಿಕೊಂಡ ಅತಿಥಿ ಆಟಗಾರ ಅಯ್ಯಪ್ಪ ಗೋಲು ಬಾರಿಸಿ ಅಂತರವನ್ನು ಸಮನಾಗಿಸಿದರು. ಮತ್ತೆ ಸಮಬಲದ ಹೋರಾಟ ಕಂಡು ಬಂದ ಈ ಪಂದ್ಯದಲ್ಲಿ ಕೊಂಗಂಡ ತಂಡದ ಅತಿಥಿ ಆಟಗಾರ ಮೋಕ್ಷಿತ್ 33ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಇದರಿಂದ ಬಿರುಸಿನ ಆಟಕ್ಕೆ ಒತ್ತು ನೀಡಿದ ಕುಪ್ಪಂಡ ತಂಡ ಸೇಡು ತೀರಿಸಿಕೊಳ್ಳಲು ಪ್ರಯತ್ನಗಳನ್ನು ನಡೆಸುತ್ತಲೇ ಇತ್ತು. ಈ ವೇಳೆ ವಿಜೇತ ತಂಡದ ಅತಿಥಿ ಆಟಗಾರ ಧ್ಯಾನ್ ಮಿಂಚಿನ ಗೋಲೊoದನ್ನು ಬಾರಿಸಿ ಅಂತರವನ್ನು ಸಮನಾಗಿಸಿದರಲ್ಲದೆ ಭರವಸೆ ಮೂಡಿಸಿದರು. ನಂತರ ಆಟದ ತೀವ್ರತೆಯನ್ನು ಎರಡು ತಂಡಗಳು ಹೆಚ್ಚಿಸಿದರೂ ದ್ವಿತೀಯಾರ್ಧ ಕೊನೆಗೊಳ್ಳುವವರೆಗೂ ಗೋಲುಗಳಿಸುವಲ್ಲಿ ಉಭಯ ತಂಡಗಳು ವಿಫಲವಾದವು. ಇದರಿಂದ ಶೂಟ್ ಔಟ್ ನಿಯಮ ಅಳವಡಿಸಲಾಯಿತು. ಈ ವೇಳೆ ವಿಜೇತ ತಂಡದ ಪರವಾಗಿ ಅತಿಥಿ ಆಟಗಾರರಾದ ಗೌರವ್, ದೇವಯ್ಯ ಮತ್ತು ಪ್ರತೀಕ್ ಪೂವಣ್ಣ ಗೋಲು ದಾಖಲಿಸಿದರು. ಎದುರಾಳಿ ತಂಡದ ಆಯ್ದ ಆಟಗಾರರು ಗೋಲು ಹೊಡೆಯಲು ಎಷ್ಟೇ ಪ್ರಯತ್ನಿಸಿದರೂ ಕುಪ್ಪಂಡ ತಂಡದ ಗೋಲ್ ಕೀಪರ್ ಅಯ್ಯಪ್ಪ ಎಲ್ಲಾ ಪ್ರಯತ್ನಗಳನ್ನು ವಿಫಲಗೊಳಿಸಿ ತಂಡದ ವಿಜಯದಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

2ನೇ ಸೆಮಿ ಫೈನಲ್ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಚೇಂದಿರ ತಂಡವು ತೀತಿಮಾಡ ತಂಡವನ್ನು 1-0 ಗೋಲಿನಿಂದ ಮಣಿಸಿ ಅಂತಿಮ ಹಣಾಹಣಿಗಾಗಿ ಹಾದಿ ಸುಗಮವಾಗಿಸಿತು. ಎರಡೂ ತಂಡಗಳು ಆರಂಭದಿಂದಲೇ ಚುರುಕಿನ ಆಟಕ್ಕೆ ವಿಶೇಷ ಒತ್ತು ನೀಡಿ ಮುನ್ಮುಗ್ಗುತ್ತ ಆಡಿದರೂ ಗೋಲುಗಳಿಸುವ ಗುರಿ ಮಾತ್ರ ಈಡೇರುತಿರಲಿಲ್ಲ. ಹೀಗಾಗಿ ಪ್ರಥಮಾರ್ಧದ ಅಂತ್ಯದವರೆಗೂ ಉಭಯ ತಂಡಗಳು ಯಾವುದೇ ಗೋಲು ದಾಖಲಿಸಲಿಲ್ಲ. ಪಂದ್ಯದ ದ್ವಿತೀಯಾರ್ಧ ಆರಂಭಗೊಂಡಾಗಲು ಅದೇ ಉತ್ಸಾಹಗಳನ್ನು ಕಾಯ್ದುಕೊಂಡಿದ್ದ ಎರಡೂ ತಂಡಗಳು ''''''''ಡಿ'''''''' ಆವರಣದೊಳಗೆ ಹೋರಾಟ ನಡೆಸಿದರು ಗೋಲ್ ಕೀಪರ್ ಮತ್ತು ರಕ್ಷಣಾ ಆಟಗಾರರು ತಡೆಗೋಡೆಗಳಂತೆ ನಿಂತು ಗೋಲಿನ ಯತ್ನವನ್ನು ಹುಸಿಗೊಳಿಸಿದರು. ಪಂದ್ಯ ಬಿರುಸಿನಿಂದ ನಡೆಯುತ್ತಿದ್ದಂತೆ ಚೇಂದಿರ ತಂಡಕ್ಕೆ ದೊರೆತ ಉತ್ತಮ ಪಾಸ್ ವೊoದನ್ನು ಸಮರ್ಪಕವಾಗಿ ಬಳಸಿಕೊಂಡ ತಂಡದ ಚಿಣ್ಣಪ್ಪ 47ನೇ ನಿಮಿಷದಲ್ಲಿ ಮಿಂಚಿನ ಗೋಲೊoದನ್ನು ಬಾರಿಸಿ ವಿಜಯದ ಪತಾಕೆ ಹಾರಿಸುವಲ್ಲಿ ಯಶಸ್ವಿಯಾದರು. ಹೀಗೆ ಕಳೆದ ವರ್ಷ ಫೈನಲ್ ಪ್ರವೇಶಿಸುವಲ್ಲಿ ವಂಚಿತರಾದ ಚೇಂದಿರ ತಂಡ ಈ ಬಾರಿ ಹೆಗ್ಗುರಿಯೊಂದಿಗೆ ಅಂತಿಮ ಹೋರಾಟಕ್ಕೆ ಅಣಿಯಾಯಿತು.

ಪಂದ್ಯಾವಳಿಗೆ ಇಂದು ತೆರೆಕಳೆದ ಭಾನುವಾರದಿಂದ ಆರಂಭಗೊಂಡ ವಿ.ಬಾಡಗ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಗೆ ಗುರುವಾರ (ಇಂದು) ತೆರೆ ಬೀಳಲಿದೆ. ಮಧ್ಯಾಹ್ನ 2.30ಕ್ಕೆ ಫೈನಲ್ ಪಂದ್ಯ ನಡೆಯಲಿದ್ದು, ಇದಕ್ಕೂ ಮೊದಲು ಬೆಳಿಗ್ಗೆ 11 ಗಂಟೆಗೆ ಪಂದ್ಯಾವಳಿಯ ತೃತೀಯ ಸ್ಥಾನದ ಪ್ರಶಸ್ತಿಗಾಗಿ 2 ಸೆಮಿ ಫೈನಲ್ಸ್ ಗಳಲ್ಲಿ ಪರಾಭವಗೊಂಡ ಕೊಂಗಂಡ ಮತ್ತು ತೀತಿಮಾಡ ಕುಟುಂಬ ತಂಡಗಳ ನಡುವೆ ಪಂದ್ಯ ಜರುಗಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಸಕ ಪೊನ್ನಣ್ಣರಿಗೆ ‘ಯುಕೊ’ ಅಭಿನಂದನೆ
ದೈವಜ್ಞ ದರ್ಶನ ಕಾರ್ಯಕ್ರಮ ಉದ್ಘಾಟನೆ