ಜಿಗಳಿಕೊಪ್ಪದ ಶ್ರೀ ಆಂಜನೇಯ ದೇವಸ್ಥಾನದ ಲೋಕಾರ್ಪಣೆ ಹಿನ್ನೆಲೆ ವೇದಿಕೆ ನಿರ್ಮಾಣಕ್ಕೆ ಭೂಮಿ ಪೂಜೆ
ಆಧುನಿಕ ದಿನಗಳಲ್ಲಿ ಅಜ್ಞಾನ ಮಡುವಿನಲ್ಲಿ ಬಿದ್ದು, ಸಂಕುಚಿತ ಮನೋಭಾವನೆ ರೂಢಿಸಿಕೊಂಡಿರುವ ಮನುಷ್ಯ ಜಾಗೃತನಾಗಿ ಧರ್ಮದ ಹಾದಿಯಲ್ಲಿ ನಡೆಯಬೇಕಾದರೇ ಗುರುವಿನ ಮಾರ್ಗದರ್ಶನ ಅಗತ್ಯವಾಗಿದೆ ಎಂದು ವಿರಕ್ತಮಠದ ಶಿವಬಸವ ಶ್ರೀಗಳು ಹೇಳಿದರು.
ಪಟ್ಟಣದಲ್ಲಿ ಫೆ.೧೨ರಿಂದ ಫೆ.೨೨ರವರೆಗೆ ಅದ್ಧೂರಿಯಾಗಿ ನಡೆಯಲಿರುವ ಜಿಗಳಿಕೊಪ್ಪದ ಶ್ರೀ ಆಂಜನೇಯ ದೇವಸ್ಥಾನದ ಲೋಕಾರ್ಪಣೆ ಹಿನ್ನೆಲೆ ವೇದಿಕೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಆಶೀರ್ವಚನ ನೀಡಿದರು. ಜಗತ್ತಿನ ಕಲ್ಯಾಣಕ್ಕಾಗಿ ಜನ್ಮ ತಳೆದ ಸನಾತನ ಹಿಂದೂ ಧರ್ಮ ಮನುಕುಲದ ಉದ್ಧಾರಕ್ಕಾಗಿ ಶ್ರಮಿಸುತ್ತಿದ್ದು, ಧರ್ಮದ ಆಚರಣೆಗಳು ಪ್ರತಿಯೊಬ್ಬ ವ್ಯಕ್ತಿಗೂ ಶಾಶ್ಚತ ನೆಮ್ಮದಿಯನ್ನು ಕಂಡುಕೊಳ್ಳುವಲ್ಲಿ ಸಹಕಾರಿಯಾಗಿವೆ. ಕಾಲಕ್ರಮೇಣ ಆಚರಣೆಗಳಲ್ಲಿ ವ್ಯತ್ಯಾಸವಾಗುತ್ತಿರುವುದು, ಯುವಸಮೂಹದ ಧರ್ಮದ ಬಗೆಗಿನ ನಿಷ್ಕಾಳಜಿ ಇದಕ್ಕೆ ಪ್ರಮುಖ ಕಾರಣವಾಗಿದೆ. ವಿಶ್ವಕ್ಕೆ ಗುರು ಪರಂಪರೆ ಪರಿಚಯಿಸಿಕೊಟ್ಟ ಶ್ರೇಷ್ಠ ಧರ್ಮ ಸಾರ್ವಭೌಮತ್ವ ಸಾಧಿಸಬೇಕಾದರೇ ನಮ್ಮೆಲ್ಲರ ಪರಿಶ್ರಮ ಅಗತ್ಯ ಎಂದರು.ದೇವಸ್ಥಾನದ ಸಮಿತಿಯ ಸದಾಶಿವ ಬೆಲ್ಲದ ಮಾತನಾಡಿ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಆಚರಣೆಗಳಿಂದಾಗಿ ವಿಶ್ವದ ದೇವರ ಮನೆ ಎನಿಸಿಕೊಂಡಿರುವ ದೇಶದಲ್ಲಿಂದು ಧರ್ಮಾಚರಣೆಗಳು ಮರೆಯಾಗುತ್ತಿರುವುದು ವಿಷಾದನೀಯ. ಮನುಕುಲದ ಉದ್ಧಾರಕ್ಕೆ ಶ್ರೇಷ್ಠ ಚಿಂತನೆಗಳ ಅಗತ್ಯತೆ ಇದ್ದು, ಹಿಂದೂ ಧರ್ಮದಲ್ಲಿ ಇವೆಲ್ಲ ಅಡಗಿವೆ ಎಂದರು.