ಲಕ್ಷ್ಮೇಶ್ವರ: ಶರಣಾಗತಿಯ ಭಾವ ಬರದೆ ಇದ್ದರೆ ಶರಣರಾಗುವುದು ಸಾಧ್ಯವಿಲ್ಲ. ಶರಣರು ಎಂದರೆ ಅರಿವು ಮತ್ತು ಆಚಾರ ಒಂದಾದವರು. ಅಂತಹ ಶರಣರ ಚಿಂತನೆಗಳು ಸದಾ ಕಾಲಕ್ಕೂ ಪ್ರಸ್ತುತವಾಗಿದ್ದು, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವದು ಅವಶ್ಯವಾಗಿದೆ ಎಂದು ಗಂಜಿಗಟ್ಟಿ ಚರಮೂರ್ತೆಶ್ವರಮಠದ ಡಾ. ವೈಜನಾಥ ಶಿವಲಿಂಗೇಶ್ವರ ಮಹಾಸ್ವಾಮಿಗಳು ನುಡಿದರು.
ನೇತೃತ್ವ ವಹಿಸಿದ್ದ ಬನ್ನಿಕೊಪ್ಪ ಜಪದಕಟ್ಟಿಮಠದ ಡಾ. ಸುಜ್ಞಾನದೇವ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಮನುಷ್ಯನ ಶಾಂತಿ, ನೆಮ್ಮದಿ ಬದುಕು, ಉನ್ನತಿಗೆ ಶರಣರ ತತ್ವ ಚಿಂತನೆಗಳು ಅವಶ್ಯವಾಗಿವೆ. ಈ ನಿಟ್ಟಿನಲ್ಲಿ ಮನೆ-ಮನಗಳಿಗೆ ಶರಣರ ಸಂದೇಶ ತಲುಪಬೇಕಿದೆ. ಶರಣರ ಚಿಂತನೆಗಳು ಒಂದೇ ಸಮಾಜಕ್ಕೆ ಸೀಮಿತವಾಗದೇ ಎಲ್ಲ ವರ್ಗವನ್ನು ಪ್ರತಿನಿಧಿಸುವಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತ ಬಂದಿವೆ. ಈ ನಿಟ್ಟಿನಲ್ಲಿ ಲಿಂ. ಶರಣ ಸಿದ್ದರಾಮದೇವರು ತಮ್ಮ ನಡೆನುಡಿಗಳ ಮೂಲಕ ನಾಡಿಗೆ ಒಳ್ಳೆಯ ಸಂದೇಶವನ್ನು ನೀಡುತ್ತಾ ಬರುತ್ತಿದ್ದರು. ಧಾರ್ಮಿಕ ಚಿಂತನೆಗಳ ಜತೆ ಮಠಾಧೀಶರನ್ನು, ಶಿವಾಚಾರ್ಯರ ಬಗ್ಗೆ ಸಮಾಜದಲ್ಲಿ ಉತ್ತಮ ಬಾಂಧವ್ಯ ಬೆಸೆಯುವಂತೆ ಮಾಡಿದ್ದರು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಮಾತನಾಡಿ, ಲಿಂ. ಸಿದ್ದರಾಮದೇವರು ಹಿರೇಮಠ ಅಪರೂಪದ ವ್ಯಕ್ತಿತ್ವ ಹೊಂದಿದ್ದ ಶರಣರಾಗಿದ್ದರು. ಕುಟುಂಬದ ನಿರ್ವಹಣೆಯ ಜತೆ ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದುವ ಕಾಯಕ ಮಾಡಿದ್ದರು ಎಂದರು. ಶರಣರ ಚಿಂತನೆಗಳು ಕುರಿತು ಪ್ರೊ. ಸೋಮಶೇಖರ ಕೆರಿಮನಿ ಉಪನ್ಯಾಸ ನೀಡಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎ. ಬಳಿಗೇರ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಬಾಳೇಶ್ವರಮಠ, ವಿಜಯಪುರ ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಡಾ. ಉಷಾದೇವಿ ಹಿರೇಮಠ, ತಾಲೂಕು ಶಸಾಪ ಅಧ್ಯಕ್ಷ ಎಲ್.ಎಸ್. ಅರಳಹಳ್ಳಿ, ಗದಗ ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ನಿರ್ಮಲಾ ಅರಳಿ, ದತ್ತಿದಾನಿಗಳಾದ ಚಿದಾನಂದಯ್ಯ ಹಿರೇಮಠ ಮತ್ತು ವಿಜಯಕುಮಾರ ಹಿರೇಮಠ ಮುಂತಾದವರಿದ್ದರು. ಬಸವರಾಜ ಸಂಗಪ್ಪಶೆಟ್ಟರ ಸ್ವಾಗತಿಸಿದರು. ಎಂ.ಕೆ. ಕಳ್ಳಿಮಠ ವಂದಿಸಿದರು. ರೇಖಾ ವಡಕಣ್ಣವರ ಕಾರ್ಯಕ್ರಮ ನಿರೂಪಿಸಿದರು.