ಮೂರು ದಿನಗಳ ಧಾರವಾಡ ಹಬ್ಬಕ್ಕೆ ಸಂಭ್ರಮದ ತೆರೆ

KannadaprabhaNewsNetwork |  
Published : Jan 29, 2024, 01:36 AM IST
28ಡಿಡಬ್ಲೂಡಿ9ಹು-ಧಾ ಟ್ವಿನ್‌ ಸಿಟಿ ಐಡಲ್‌ ಅಂತಿಮ ಸ್ಪರ್ಧೆಯಲ್ಲಿ ವಿಜೇತ ಗಾಯಕರಿಗೆ ಸಂಗೀತ ನಿರ್ದೇಶಕರಾದ ವಿ. ಮನೋಹರ, ವಿ. ನಾಗೇಂದ್ರ ಪ್ರಸಾದ ಬಹುಮಾನ ವಿತರಣೆ ಮಾಡಿದರು.  | Kannada Prabha

ಸಾರಾಂಶ

ಭಾನುವಾರ ರಾತ್ರಿ ಅನನ್ಯಾ ಭಟ್‌ ಅವರ ಸಂಗೀತ ಧಾರವಾಡದ ಮಂದಿಯನ್ನು ಮಂತ್ರಮುಗ್ದರನ್ನಾಗಿಸಿತು. ಇದಕ್ಕೂ ಮುಂಚೆ ಕಳೆದ ಬಾರಿಯ ಟ್ವಿನ್‌ ಸಿಟಿ ಐಡಲ್‌ ವಿಜೇತೆ ಪ್ರಣತಿ ಚಿತ್ರಗೀತೆಗಳನ್ನು ಪ್ರಸ್ತುತಪಡಿಸಿದರೆ, ವಿಠ್ಠಲ ಡ್ಯಾನ್ಸ್‌ ತಂಡದಿಂದ ನೃತ್ಯ, ಸಂಜನಾ ಹೆಗಡೆ ಅವರಿಂದ ಡ್ಯಾನ್ಸ್‌, ಸಯ್ಯದ ತಂಡದಿಂದ ನೃತ್ಯ ಕಾರ್ಯಕ್ರಮಗಳು ನಡೆದವು

ಧಾರವಾಡ: ಇಲ್ಲಿಯ ಕರ್ನಾಟಕ ಕಾಲೇಜು ಮೈದಾನದಲ್ಲಿ ಕಳೆದ ಮೂರು ದಿನಗಳಿಂದ ಹೆಗಡೆ ಗ್ರುಪ್‌, ವಿಶನ್‌ ಫೌಂಡೇಶನ್‌ ಹಾಗೂ ನ್ಯೂಸ್‌ ಟೈಮ್‌ ಆಯೋಜಿಸಿದ್ದ ಧಾರವಾಡ ಹಬ್ಬ ಯಶಸ್ವಿಯಾಗಿ ಸಮಾರೋಪಗೊಂಡಿದ್ದು, ಕೊನೆ ದಿನ ಭಾನುವಾರ ಸಾವಿರಾರು ಜನರು ಈ ಸಂಭ್ರಮಕ್ಕೆ ಸಾಕ್ಷಿಯಾದರು.

ನಿತ್ಯ ಸಂಜೆಯಾದರೆ ಇಲ್ಲಿಯ ಕಾಲೇಜು ಆವರಣದಲ್ಲಿ ಸಂಗೀತದ ಆಲಾಪ. ನಂತರ ಹಾಡು, ನೃತ್ಯ, ಹಾಸ್ಯ, ಸಿನಿಮಾ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳ ಗುಚ್ಛವೇ ಇರುತ್ತಿತ್ತು. ಕಾಲೇಜು ಎಡ ಬದಿಯಲ್ಲಿ ಹತ್ತಾರು ಆಟಗಳು ಮಕ್ಕಳನ್ನು ಸೆಳೆದರೆ, ಚುರುಮರಿ, ಗಿರರ್ಮಿಟ್‌, ಬಜ್ಜಿ ಸೇರಿದಂತೆ ತರಹೇವಾರಿ ಆಹಾರ ಖಾದ್ಯಗಳು ಎಲ್ಲ ಜನರನ್ನು ಸೆಳೆಯುತ್ತಿತ್ತು. ಬಲ ಬದಿಯ ಬೃಹತ್‌ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಇಡೀ ಧಾರವಾಡ ಜನತೆಯನ್ನು ಸೆಳೆಯಿತು. ಖ್ಯಾತನಾಮ ಸಂಗೀತ ನಿರ್ದೇಶಕರಿಂದ ಹಿಡಿದು ಚಿತ್ರನಟರು, ಕಲಾವಿದರು, ಸಂಗೀತಗಾರರು ಭಾಗವಹಿಸಿ ಧಾರವಾಡ ಜನತೆಗೆ ಸಾಂಸ್ಕೃತಿಕ ರಸದೌತಣ ಉಣಬಡಿಸಿದರು. ಜಿ ಕನ್ನಡ ಕಾಮಿಡಿ ಕಲಾವಿದರಿಂದ ಹಾಸ್ಯವೂ ನಡೆಯಿತು.

ಭಾನುವಾರ ರಾತ್ರಿ ಅನನ್ಯಾ ಭಟ್‌ ಅವರ ಸಂಗೀತ ಧಾರವಾಡದ ಮಂದಿಯನ್ನು ಮಂತ್ರಮುಗ್ದರನ್ನಾಗಿಸಿತು. ಇದಕ್ಕೂ ಮುಂಚೆ ಕಳೆದ ಬಾರಿಯ ಟ್ವಿನ್‌ ಸಿಟಿ ಐಡಲ್‌ ವಿಜೇತೆ ಪ್ರಣತಿ ಚಿತ್ರಗೀತೆಗಳನ್ನು ಪ್ರಸ್ತುತಪಡಿಸಿದರೆ, ವಿಠ್ಠಲ ಡ್ಯಾನ್ಸ್‌ ತಂಡದಿಂದ ನೃತ್ಯ, ಸಂಜನಾ ಹೆಗಡೆ ಅವರಿಂದ ಡ್ಯಾನ್ಸ್‌, ಸಯ್ಯದ ತಂಡದಿಂದ ನೃತ್ಯ ಕಾರ್ಯಕ್ರಮಗಳು ನಡೆದವು. ಎರಡನೇ ಹಂತದ ರಾಜಕೀಯ ಯುವ ನಾಯಕರು ಕೊನೆ ದಿನದ ಆಕರ್ಷಣೀಯವಾಗಿದ್ದರು.

ಟ್ವಿನ ಸಿಟಿ ವಿಜೇತರಿವರು..

ಧಾರವಾಡ ಹಬ್ಬದಲ್ಲಿ ಶನಿವಾರ ತಡರಾತ್ರಿ ಮುಕ್ತಾಯಗೊಂಡ ಟ್ವಿನ್‌ ಸಿಟಿ ಐಡಲ್‌ ಗ್ರ್ಯಾಂಡ್‌ ಫಿನಾಲೆಯಲ್ಲಿ ಎಂಟೂ ಜನ ಗಾಯಕರು ತಮ್ಮ ಕಂಠವನ್ನು ಸ್ಪರ್ಧೆಳಿಸಿದರು. ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ, ಡಾ. ನಾಗೇಂದ್ರ ಪ್ರಸಾದ ಹಾಗೂ ಶೃತಿ ಪ್ರಹ್ಲಾದ ಗಾಯಕರ ಹಾಡುಗಳನ್ನು ಕೇಳಿ ಅಂತಿಮ ಸುತ್ತಿನಲ್ಲಿ ವಿಜೇತರನ್ನು ಆಯ್ಕೆ ಮಾಡಿದರು. ಹುಬ್ಬಳ್ಳಿಯ ಸಂಜನಾ ಎಸ್‌., ಪ್ರಥಮ (30 ಸಾವಿರ ನಗದು ಬಹುಮಾನ), ಧಾರವಾಡದ ಗಗನ ಓದುಸುಮಠ ದ್ವಿತೀಯ (₹ 20 ಸಾವಿರ ನಗದು), ಹುಬ್ಬಳ್ಳಿಯ ವೃಂದಾ ಚಿವುಟದ ತೃತೀಯ (₹10 ಸಾವಿರ) ಹಾಗೂ ಚಿಕ್ಕೋಡಿಯ ಸೌಂದರ್ಯ ಕಂಬಳ ಸಮಾಧಾನಕರ ಬಹುಮಾನ ಪಡೆದರು. ಹಾವೇರಿಯ ದೇವೇಂದ್ರ ಕೊಪ್ಪದ, ಕೆಲಗೇರಿಯ ಮಹೇಶ್ವರಿ ಕಲ್ಯಾಣಮಠ, ಹುಬ್ಬಳ್ಳಿ ಸಮನ್ವೀತ ಮಠದ ಸ್ಪರ್ಧೆಯಲ್ಲಿದ್ದರು. ಇದಕ್ಕೂ ಮುಂಚೆ ಹಿಂದಿ ಭಾಷೆಯ ಡಾಕ್‌ ಚಿತ್ರದ ಪ್ರಮೋಶನ್‌ ಇದೇ ವೇದಿಕೆ ಮೇಲೆ ನಡೆಯಿತು. ಮೇಘನಾ ಹಳಿಯಾಳ ಅವರ ಸಂಗೀತ, ಕಾಮಿಡಿ ಕಿಲಾಡಿಗಳಾದ ಪ್ರವೀಣ ಕುಮಾರ, ಬಾ ಮಲಿಕೋ, ಸುಶ್ಮಿತಾ ಮಜಾಭಾರತ ಜನರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸಿದರು.

ಮೂರು ದಿನಗಳ ಕಾಲ ಧಾರವಾಡ ಹಬ್ಬವನ್ನು ಹೆಗಡೆ ಗ್ರುಪ್‌ನ ಗಿರೀಶ ಹೆಗಡೆ, ಸತೀಶ ಹೆಗಡೆ, ಮುಸ್ತಫಾ ಕುನ್ನಿಬಾವಿ, ಅಂಬರೀಶ ರಾಠೋಡ, ಬಾಸ್ಕೋ ಸೊಲೋಮನ್‌, ಸುನೀಲ ಜಾ ಸೇರಿದಂತೆ ಹಲವು ಸಂಯೋಜಿಸಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ