ಲಕ್ಷ್ಮೇಶ್ವರ: ಮೇ ೩೧ರಂದು ಗದಗ ನಗರದಲ್ಲಿ ಕನ್ನೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಗಳ ನೇತೃತ್ವದಲ್ಲಿ ಬಸವಾದಿ ಶಿವಶರಣ ಬೃಹತ್ ಹಿಂದೂ ಸಮಾವೇಶ ಸಮಾಜಕ್ಕೆ ಒಂದು ದೊಡ್ಡ ಸಂದೇಶ ನೀಡಲಿದೆ. ಇಂತಹ ಅಭೂತಪೂರ್ವ ಹಿಂದೂ ಸಮಾವೇಶಕ್ಕೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ ಎಂದು ಹಿಂದೂ ಸಂಘಟನೆಗಳ ಮುಖಂಡ ರಾಜು ಖಾನಪ್ಪನವರ ತಿಳಿಸಿದರು.
ಕನ್ನೇರಿ ಶ್ರೀಗಳು ಹಿಂದೂ ಸಮಾಜವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಮುಂದಾಗುತ್ತಿದ್ದು, ಅವರನ್ನು ಸಮಾವೇಶದ ನೇತೃತ್ವ ವಹಿಸುವಂತೆ ವಿನಂತಿಸಲಾಗಿದೆ. ಬಸವಧರ್ಮ ಅಂತಾ ಹೇಳಿಕೊಂಡು ಸಮಾಜ ಒಡೆಯಲು ಹೊರಟಿರುವವರನ್ನು ತಡೆಯಲು ಬೃಹತ್ ಹಿಂದೂ ಸಮಾವೇಶ ಮಾಡಲಾಗುತ್ತಿದ್ದು, ಹಿಂದೂಗಳು ಒಗ್ಗಟ್ಟನ್ನು ಒಡೆಯುವ ಶಕ್ತಿಗಳನ್ನು ತಡೆಯುವ ಉದ್ದೇಶ ಸಮಾವೇಶದ್ದಾಗಿದೆ ಎಂದರು.
ಪ್ರತಿಯೊಬ್ಬ ಹಿಂದೂಗಳು ತನು, ಮನ ಧನದಿಂದ ಹಿಂದೂ ಸಮಾವೇಶ ಯಶಸ್ವಿಯಾಗಲು ಶ್ರಮ ವಹಿಸಿ ಸ್ವಯಂಪ್ರೇರಣೆಯಿಂದ ಭಾಗವಹಿಸಬೇಕು. ಯುವಕರು, ಹಿರಿಯರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಮನವಿ ಮಾಡಿದರು.ಹಿರಿಯ ಮುಖಂಡ ವೆಂಕಟೇಶ ಕುಲಕರ್ಣಿ ಮಾತನಾಡಿ, ಹಿಂದೂಗಳು ಎಲ್ಲರೂ ಒಂದೇ ಎಂಬ ಭಾವನೆ ಬರಬೇಕು. ಹಿಂದೂಗಳು ಒಗ್ಗೂಡಬೇಕು, ದೇಶ ಮೊದಲು ಭಾರತಮಾತೆ ನಮ್ಮ ತಾಯಿ, ನಾಡು ನುಡಿ ಜಲದ ರಕ್ಷಣೆಗೆ ಕಟಿಬದ್ದರಾಗಬೇಕು, ಎಲ್ಲರೂ ಜಾತಿಭೇದ ಎನ್ನದೆ ಹಿಂದೂ ಸಮಾವೇಶದಲ್ಲಿ ಒಂದಾಗಲು ಸೇರಿಸಲಾಗುತ್ತಿದೆ. ಇದ್ದಕ್ಕಾಗಿ ಜಿಲ್ಲೆಯ ಪ್ರತಿ ಹಳ್ಳಿ ಹಳ್ಳಿ ಹೋಗಿ ಸಂಘಟನೆ ಮಾಡುತ್ತಿದ್ದು, ಕಾರ್ಯಕ್ರಮಕ್ಕೆ ೫೦ ಸಾವಿರ ಜನ ಸೇರುವ ನಿರೀಕ್ಷೆ ಇದೆ. ೨೦೦ಕ್ಕಿಂತಲೂ ಹೆಚ್ಚಿನ ಮಠಾಧೀಶರು ಭಾಗವಹಿಸಲಿದ್ದಾರೆ. ೪೦೦೦ ಮುತ್ದೆತೈಯರಿಂದ ಕುಂಭ ಮೇಳದೊಂದಿಗೆ ಶೋಭಾಯಾತ್ರೆ ನಡೆಯಲಿದೆ ಎಂದರು.ಶ್ರೀಧರ ಕುಲಕರ್ಣಿ ಮಾತನಾಡಿ, ಹಿಂದೂ ಸಮಾಜ ಬಗ್ಗೆ ಮಾರ್ಗದರ್ಶನ ಮಾಡಲು ಶ್ರೀಗಳು ಸಿಕ್ಕಿದ್ದು, ಸಮಾಜದ ಜಾಗೃತಿ ಮೂಡಿಸುವ ಶ್ರೀಗಳಿಗೆ ಬೆಂಬಲಿಸೋಣ ಎಂದರು. ಸ್ಥಳೀಯ ಮುಖಂಡ ಚಂಬಣ್ಣ ಬಾಳಿಕಾಯಿ, ನಿಂಗಪ್ಪ ಬನ್ನಿ, ಹೊನ್ನಪ್ಪ ವಡ್ಡರ, ಮಂಜುನಾಥ ಹೊಗೆಸೊಪ್ಪಿನ, ಅನಿಲ ಮುಳಗುಂದ, ಗಂಗಾಧರ ಮೆಣಸಿನಕಾಯಿ ಮಾತನಾಡಿದರು.