ಸಂಪರ್ಕ ಕೊಂಡಿ ಕಳಚಿ ಬೀಳುವ ಕಾಲ ಸನ್ನಿಹಿತ!

KannadaprabhaNewsNetwork |  
Published : Jul 16, 2025, 12:45 AM IST
ಹೂವಿನಹಡಗಲಿ ತಾಲೂಕಿನ ಮೈಲಾರ ಬಳಿ ಇರುವ ತುಂಗಭದ್ರ ಸೇತುವೆ. ರಕ್ಷಣಾ ಗೋಡೆ ಕಿತ್ತು ಹೋಗಿರುವುದು. | Kannada Prabha

ಸಾರಾಂಶ

ದೇಶದ ನಾನಾ ಕಡೆಗಳಲ್ಲಿ ಸೇತುವೆಗಳು ನಿರ್ವಹಣೆ ಕೊರತೆ, ಕಳಪೆ ಕಾಮಗಾರಿ ಸೇರಿದಂತೆ ಇತರ ಕಾರಣಗಳಿಗಾಗಿ ಕಳಚಿ ಬೀಳುತ್ತಿವೆ. ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ ಬಳಿ ನಿರ್ಮಾಣಗೊಂಡಿರುವ ಸೇತುವೆ ಸ್ಥಿತಿ ಕೂಡಾ ಭಿನ್ನವಾಗಿಲ್ಲ.

ದುರಸ್ತಿಗೆ ಅನುದಾನ ಇಲ್ಲದೇ ಅವಸಾನದತ್ತ ಮೈಲಾರ ಬಳಿಯ ತುಂಗಭದ್ರಾ ಸೇತುವೆಚಂದ್ರು ಕೊಂಚಿಗೇರಿ

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ದೇಶದ ನಾನಾ ಕಡೆಗಳಲ್ಲಿ ಸೇತುವೆಗಳು ನಿರ್ವಹಣೆ ಕೊರತೆ, ಕಳಪೆ ಕಾಮಗಾರಿ ಸೇರಿದಂತೆ ಇತರ ಕಾರಣಗಳಿಗಾಗಿ ಕಳಚಿ ಬೀಳುತ್ತಿವೆ. ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ ಬಳಿ ನಿರ್ಮಾಣಗೊಂಡಿರುವ ಸೇತುವೆ ಸ್ಥಿತಿ ಕೂಡಾ ಭಿನ್ನವಾಗಿಲ್ಲ.

ಹೌದು, ಮಧ್ಯ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಜಿಲ್ಲೆಗಳ ಸಂಪರ್ಕ ಕೊಂಡಿಯಾಗಿರುವ, ಮೈಲಾರ-ಕಂಚರಗಟ್ಟಿ ಬಳಿಯ ತುಂಗಭದ್ರಾ ಸೇತುವೆ ನಿರ್ಮಾಣಗೊಂಡು ಬರೊಬ್ಬರಿ 52 ವರ್ಷವಾಗಿದೆ. ಈ ಸೇತುವೆ ಇತ್ತ ವಿಜಯನಗರ, ಬಳ್ಳಾರಿ, ದಾವಣಗೆರೆ, ಅತ್ತ ಹಾವೇರಿ, ಹುಬ್ಬಳ್ಳಿ, ಧಾರವಾಡ ಸೇರಿದಂತೆ ಇತರ ಅಕ್ಕಪಕ್ಕದ ಜಿಲ್ಲೆಗಳಿಗೆ ಸಂಪರ್ಕ ಕೊಂಡಿಯಾಗಿದೆ. ಆದರೆ ದುರಸ್ತಿಗೆ ಅಗತ್ಯ ಅನುದಾನ ಇಲ್ಲದೇ ಅವಸಾನದತ್ತ ಸಾಗಿದೆ.

1960ರಲ್ಲಿ ಈ ತುಂಗಭದ್ರಾ ಸೇತುವೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿತ್ತು. 1972 ರಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರಿಂದ ಲೋಕಾರ್ಪಣೆಯಾಗಿದೆ. ಈ ಸೇತುವೆಗೆ ನಿರ್ವಹಣೆ ಕೊರತೆಯಿಂದ ಸೇತುವೆ ಮೇಲಿನ ಇಕ್ಕೆಲಗಳ ರಕ್ಷಣಾ ಗೋಡೆಗಳು ಕಳಚಿ ಬಿದ್ದಿವೆ, ಇದಕ್ಕೆ ಬಳಸಲಾಗಿರುವ ಕಬ್ಬಿಣ ಸಂಪೂರ್ಣ ತುಕ್ಕು ಹಿಡಿದಿದೆ. ಸಿಮೆಂಟ್‌ ಕೂಡಾ ಉದುರಿ ಬೀಳುತ್ತಿದೆ, ಸೇತುವೆ ಮೇಲಿನ ಮಳೆ ನೀರು ಸರಾಗವಾಗಿ ಹರಿದು ಹೋಗಲು ಇದ್ದ ರಂಧ್ರಗಳು ಸಂಪೂರ್ಣ ಮುಚ್ಚಿ ಹೋಗಿವೆ ಮಳೆ ನೀರು ಸೇತುವೆ ಮೇಲೆ ನಿಲ್ಲುತ್ತದೆ. ವಾಹನ ಸವಾರರು ಈ ಸೇತುವೆ ಮೇಲೆ ಓಡಾಡಲು ಭಯ ಪಡುತ್ತಿದ್ದಾರೆ.

ಹಾವೇರಿ ಮಹಾನಗರಕ್ಕೆ ನೀರು ಪೂರೈಕೆ ಮಾಡುವ ಪಂಪ್‌ಹೌಸ್‌ ಸೇತುವೆ ಪಕ್ಕದಲ್ಲೇ ಇದೆ. ಬೇಸಿಗೆಯ ಸಂದರ್ಭದಲ್ಲಿ ನೀರು ನಿಲ್ಲಿಸಲು, ನಗರಸಭೆಯಿಂದ ಮರಳಿನ ಚೀಲ, ಮಣ್ಣಿನ ತಡೆಗೋಡೆ ನಿರ್ಮಾಣ ಮಾಡುವಾಗ, ಸೇತುವೆ ಬುಡದಲ್ಲೇ ಜೆಸಿಬಿ ಬಳಸಿದ್ದಾರೆ, ಆಗ ಬುನಾದಿಯ ಕಲ್ಲುಗಳನ್ನು ಕಿತ್ತು ಹಾಕಿದ್ದಾರೆ, ಇದರಿಂದ ಸೇತುವೆಯ ಕಲ್ಲಿನ ಗೋಡೆಯ ಕಲ್ಲು ಬೀಳುತ್ತಿವೆ. ಜತೆಗೆ ಸೇತುವೆ ಮೇಲೆ ಭಾರಿ ಪ್ರಮಾಣದ ವಾಹನಗಳು ಓಡಾಡುತ್ತಿವೆ. ಮರಳು ಅಕ್ರಮ ದಂಧೆಕೋರರು ಇಡೀ ರಾತ್ರಿಯೆಲ್ಲಾ ವಾಹನಗಳ ಸಾಮರ್ಥ್ಯಕ್ಕಿಂತ ಹೆಚ್ಚು ಮರಳು ಸಾಗಣೆಯಿಂದ, ಸೇತುವೆ ಮೇಲಿನ ರಸ್ತೆ ಕಿತ್ತು ದೊಡ್ಡ ಪ್ರಮಾಣದ ಗುಂಡಿಗಳು ನಿರ್ಮಾಣವಾಗಿವೆ.

2008ಕ್ಕಿಂತ ಮುಂಚೆ ತುಂಗಭದ್ರಾ ಸೇತುವೆ ಹಾವೇರಿ ಜಿಲ್ಲೆ ವ್ಯಾಪ್ತಿಗೆ ಒಳಪಟ್ಟಿತ್ತು. ನಂತರದಲ್ಲಿ ಬಳ್ಳಾರಿ ಜಿಲ್ಲೆಯ ತೆಕ್ಕೆಗೆ ಬಂದಿತ್ತು. ಸದ್ಯ ವಿಜಯನಗರ ಜಿಲ್ಲೆಯ ವ್ಯಾಪ್ತಿಗೆ ಒಳಪಟ್ಟಿದೆ. ಇದರ ನಿರ್ವಹಣೆಯ ಹೊಣೆಯನ್ನು ಲೋಕೋಪಯೋಗಿ ಇಲಾಖೆಯೇ ಹೊತ್ತಿದೆ. ಈ ಸೇತುವೆಯ ಸದ್ಯದ ಸ್ಥಿತಿ ನೋಡಿದರೇ ಭಾರಿ ಪ್ರಮಾಣದ ವಾಹನ ಸಂಚಾರಕ್ಕೆ ಸೇತುವೆಯೇ ಅಲುಗಾಡುತ್ತಿದೆ. ಆಯ ತಪ್ಪಿದರೆ ವಾಹನ ಸವಾರರು ನದಿ ಪಾಲಾಗುವ ಅಪಾಯವಿದೆ.

ತುಂಗಭದ್ರಾ ಸೇತುವೆಯ ನಿರ್ವಹಣೆಗಾಗಿ ಸರ್ಕಾರದಿಂದ ಅನುದಾನ ಬಂದಿಲ್ಲ. ರಕ್ಷಣಾ ಗೋಡೆ ಸೇರಿದಂತೆ ಇತರ ದುರಸ್ತಿಗಾಗಿ ₹50 ಲಕ್ಷದ ಕ್ರಿಯಾ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅನುದಾನ ಬಂದ ಕೂಡಲೇ ದುರಸ್ತಿ ಮಾಡುತ್ತೇವೆ ಎನ್ನುತ್ತಾರೆ ಲೋಕೋಪಯೋಗಿ ಇಲಾಖೆಯ ಎಇಇ ರಾಜಪ್ಪ.

PREV

Latest Stories

ಧರ್ಮಸ್ಥಳ ಕೇಸ್‌ ಎನ್‌ಐಎಗೆ ವಹಿಸಿ : ಶಾಗೆ ಕೇರಳ ಸಂಸದ
ಲಾಸ್ಟ್‌ ಬೆಂಚ್‌ ಇಲ್ಲದ ರಾಜ್ಯದ ಮೊದಲ ಶಾಲೆ ಯಲ್ಬುರ್ಗಾದಲ್ಲಿ
ರೈತರು ಜನಸಾಮಾನ್ಯರೊಂದಿಗೆ ಸ್ಪಂದಿಸಿ ಸರ್ವೇ ಕಾರ್ಯ ನಡೆಸಲು ಮನವಿ