ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಬಸವೇಶ್ವರರರು ಕಟ್ಟಬಯಸಿದ ಜಾತ್ಯಾತೀತ ಸಮಾಜ ನಿರ್ಮಾಣದ ಕನಸು ನನಸಾಗಿಸುವ ಉದ್ದೇಶದಿಂದ ಮಠಾಧೀಶರರ ಒಕ್ಕೂಟ ಸೆ.೧ರಿಂದ ಅ.೧ರವರೆಗೆ ನಾಡಿನಲ್ಲಿ ಬಸವ ಸಂಸ್ಕೃತಿ ಅಭಿಯಾನ ಹಮ್ಮಿಕೊಂಡಿರುವುದು ಜಾತ್ಯಾತೀತ ಸಮಾಜ ನಿರ್ಮಾಣಕ್ಕೆ. ಆ ಕನಸು ನನಸಾಗುವ ಕಾಲ ಹತ್ತಿರವಾಗುತ್ತಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.ಪಟ್ಟಣದ ಬಸವ ಜನ್ಮಸ್ಮಾರಕದ ಮುಂಭಾಗ ಬಸವ ಸಂಸ್ಕೃತಿ ಅಭಿಯಾನದ ಉದ್ಘಾಟನೆ ಅಂಗವಾಗಿ ಸೋಮವಾರ ಬೆಳಗ್ಗೆ ಷಟದಲ್ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಸವೇಶ್ವರರ ಸಂದೇಶಗಳು ಬಹುಉತ್ಕೃಷ್ಟತೆಯಿಂದ ಕೂಡುವ ಜೊತೆಗೆ ಸದಾ ಅನುಕರಣೀಯವಾಗಿವೆ. ಇವರು ಕಾಯಕ, ದಾಸೋಹ, ಸಮಾನತೆ ಸಂದೇಶಗಳನ್ನು ಜಗತ್ತಿಗೆ ನೀಡಿದ್ದಾರೆ. ಪರಮಪೂಜ್ಯರು ಈ ಅಭಿಯಾನವನ್ನು ಬಸವ ಜನಿಸಿದ ನೆಲದಿಂದ ಆರಂಭಿಸಲು ನಿರ್ಣಯಿಸಿರುವದು ಸ್ವಾಗತಾರ್ಹ. ಈ ಅಭಿಯಾನದ ಮೂಲಕ ಬಸವೇಶ್ವರರ ಸಂದೇಶ ಇಡೀ ಜಗತ್ತಿಗೆ ಪಸರಿಸುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯರು ಮಾತನಾಡಿ, ಬಸವಣ್ಣ ಎಲ್ಲ ಜನರಿಗೂ ಬೇಕು. ಬಸವ ತತ್ವ ಅಳವಡಿಸಿಕೊಂಡವರು ತಲೆ ಎತ್ತಿ ಬಾಳಬಹುದು. ಬಸವ ಸಂಸ್ಕೃತಿ ಅಭಿಯಾನದ ಉದ್ಘಾಟನೆ ಮೊದಲ ಹೆಜ್ಜೆಯಾಗಿದೆ. ಇದು ಯಶಸ್ವಿಯಾದರೆ ಕೊನೆಯ ಹೆಜ್ಜೆಯು ಯಶಸ್ವಿಯಾಗುವಲ್ಲಿ ಸಂದೇಹವಿಲ್ಲ ಎಂದರು.ಗದಗದ ಡಾ.ತೋಂಟದ ಸಿದ್ದರಾಮ ಸ್ವಾಮೀಜಿ ಮಾತನಾಡಿ, ಬಸವಣ್ಣನವರು ಆತ್ಮಕಲ್ಯಾಣದ ಜೊತೆಗೆ ಸಮಾಜ ಕಲ್ಯಾಣವು ಮುಖ್ಯ ಎಂದು ಸಾರಿದ್ದಾರೆ. ಅವರು ಶೋಷಣೆ ಮುಕ್ತ, ಮೂಢನಂಬಿಕೆ ಮುಕ್ತ, ವ್ಯಸನಮುಕ್ತ ಸಮಾಜದ ನಿರ್ಮಾಣದ ಕನಸು ಕಂಡಿದ್ದರು. ಇಂತಹ ಸಮಾಜದ ನಿರ್ಮಾಣದ ಅಗತ್ಯವಿದೆ. ಇವರ ತತ್ವ ಸಂದೇಶಗಳನ್ನು ಜನಮಾನಸಕ್ಕೆ ಮುಟ್ಟಿಸುವ ಉದ್ದೇಶದಿಂದ ಮಠಾಧೀಶರು ಬಸವ ಸಂಸ್ಕೃತಿ ಅಭಿಯಾನ ಹಮ್ಮಿಕೊಂಡಿದ್ದಾರೆ ಎಂದು ತಿಳಿಸಿದರು.ಬೈಲೂರಿನ ನಿಜಗುಣಾನಂದ ಸ್ವಾಮೀಜಿ ಮಾತನಾಡಿ, ನಾವೆಲ್ಲರೂ ಬಸವಣ್ಣನವರ ಮಕ್ಕಳೆಂದು ಎದೆ ತಟ್ಟಿ ಹೇಳಬೇಕು. ಬಸವ ಜನಿಸಿದ ಈ ನೆಲ ಪವಿತ್ರವಾಗಿದೆ. ಈ ನೆಲದ ಬಗ್ಗೆ ಪ್ರತಿಯೊಬ್ಬರೂ ಗೌರವ ಹೊಂದುವಂತಾಗಿ ಎಲ್ಲರೂ ಬಸವಜನ್ಮ ಸ್ಮಾರಕಕ್ಕೆ ಬರುವಂತಾಗಬೇಕು. ಈ ನೆಲವು ಮಾನವ ಹಕ್ಕುಗಳ ಪ್ರತಿಪಾದನೆ ಮಾಡಿದ ಮಹಾತ್ಮನಿಗೆ ಜನ್ಮನೀಡಿದ ಸ್ಥಳವಾಗಿದೆ. ಇದು ನಮಗೆ ಬದುಕು ನೀಡಿದ ಸ್ಥಳ, ಅಜ್ಞಾನದಿಂದ ಜ್ಞಾನದ ಕಡೆಗೆ ತೆಗೆದುಕೊಂಡು ಬಂದ ಸ್ಥಳವಾಗಿದೆ. ನಾವೆಲ್ಲರೂ ಅನುಭಾವದ ಕಡೆಗೆ ಬರುವಂತಾಗಬೇಕು. ಜೀವಿತಾವಧಿಯಲ್ಲಿ ನಾವೆಲ್ಲರೂ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂಬ ಸಂದೇಶ ನೀಡಿದರು.ಷಟ್‌ದಲ ಧ್ವಜಾರೋಹಣವನ್ನು ೯೮ ವರ್ಷದ ಇಂಗಳೇಶ್ವರದ ಚನ್ನಬಸವ ಸ್ವಾಮೀಜಿ ನೆರವೇರಿಸಿದರು. ಈ ಸಂದರ್ಭದಲ್ಲಿ ಹುಲಸೂರಿನ ಶಿವಾನಂದ ಸ್ವಾಮೀಜಿ, ಮೋಟಗಿಯ ಪ್ರಭು ಚನ್ನಬಸವ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ, ಶೇಗುಣಶಿ ಶ್ರೀ, ಮಸಬಿನಾಳ ಶ್ರೀ ಸೇರಿದಂತೆ ಅನೇಕ ಪರಮಪೂಜ್ಯರು, ಮುಖಂಡರಾದ ಈರಣ್ಣ ಪಟ್ಟಣಶೆಟ್ಟಿ, ಬಸವರಾಜ ಗೊಳಸಂಗಿ, ಬಸವರಾಜ ಹಾರಿವಾಳ, ಶೇಖರಗೌಡ ಪಾಟೀಲ, ಎಂ.ಜಿ.ಆದಿಗೊಂಡ, ಲ.ರು.ಗೊಳಸಂಗಿ, ಶೇಖರ ಗೊಳಸಂಗಿ, ಶಿವನಗೌಡ ಬಿರಾದಾರ, ಸಂಗಮೇಶ ಓಲೇಕಾರ ಸೇರಿ ವಿವಿಧ ಅಕ್ಕನ ಬಳಗದ ಸದಸ್ಯರು, ಮಾಜಿ ಸೈನಿಕರು, ಶರಣರ ಬಳಗದ ಸದಸ್ಯರು, ಸೇವಾದಳದ ಶಿಕ್ಷಕರು, ವಿವಿಧ ಶಾಲಾ ಶಿಕ್ಷಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಜನರು ಭಾಗವಹಿಸಿದ್ದರು.