ವಿಶ್ವವಿದ್ಯಾಲಯದ ಸ್ಥಳ ನಿಗದಿಯಾಗುವ ಕಾಲ ಸನ್ನಿಹಿತ

KannadaprabhaNewsNetwork |  
Published : Apr 17, 2026, 02:15 AM IST
೧೬ ವೈಎಲ್‌ಬಿ ೦೪ಯಲಬುರ್ಗಾದ ಸ್ನಾತಕೋತ್ತರ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಕೊಪ್ಪಳ ವಿವಿಯ ೩ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

ಬುದ್ಧ,ಬಸವ,ಅಂಬೇಡ್ಕರರ ಆಶಯದಂತೆ ಜ್ಞಾನ,ವಿಜ್ಞಾನ, ವಿಕಾಸ ಎಂಬ ವಿವಿಯ ಧ್ಯೇಯ ವಾಕ್ಯವಾಗಿದ್ದು, ಎಲ್ಲ ವಿದ್ಯಾರ್ಥಿಗಳ ಹೃದಯದಲ್ಲಿ ಬರೆಯಬೇಕು

ಯಲಬುರ್ಗಾ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಪ್ರವೇಶ ಪಡೆದು ಉನ್ನತ ಶಿಕ್ಷಣ ಪಡೆಯುವ ಮೂಲಕ ಸಮಗ್ರ ಅಭಿವೃದ್ಧಿ ಹೊಂದಬೇಕು ಎಂದು ಕೊಪ್ಪಳ ವಿವಿ ಕುಲಪತಿ ಪ್ರೊ. ಎಸ್.ವಿ.ಡಾಣಿ ಹೇಳಿದರು.

ಪಟ್ಟಣದ ಸ್ನಾತಕೋತ್ತರ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕೊಪ್ಪಳ ವಿವಿಯ ೩ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬುದ್ಧ,ಬಸವ,ಅಂಬೇಡ್ಕರರ ಆಶಯದಂತೆ ಜ್ಞಾನ,ವಿಜ್ಞಾನ, ವಿಕಾಸ ಎಂಬ ವಿವಿಯ ಧ್ಯೇಯ ವಾಕ್ಯವಾಗಿದ್ದು, ಎಲ್ಲ ವಿದ್ಯಾರ್ಥಿಗಳ ಹೃದಯದಲ್ಲಿ ಬರೆಯಬೇಕು. ಅಂದಾಗ ಮಾತ್ರ ನಾಡು ವೈಚಾರಿಕ ಚಿಂತನೆಯ ಬೀಡಾಗಲು ಸಾಧ್ಯ. ವಿದ್ಯಾರ್ಥಿಗಳೇ ವಿಶ್ವವಿದ್ಯಾಲಯ ಬೆಳವಣಿಗೆಯ ಪ್ರತ್ಯಕ್ಷ ಆಶ್ರಯದಾತರು. ಹಾಗಾಗಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ ನಿರ್ಮಾಣ ಮಾಡುವಲ್ಲಿ ಶ್ರಮಿಸಬೇಕು. ಬದುಕು ಕಟ್ಟಿಕೊಡುವ ಸ್ಥಳ ಮರೆಯದೆ ಎಲ್ಲರೂ ಶ್ರಮ ವಹಿಸಿ ಕಾರ್ಯ ನಿರ್ವಹಿಸುವ ಮೂಲಕ ವಿಶ್ವವಿದ್ಯಾಲಯ ಕಟ್ಟುವ ಕೆಲಸ ಮಾಡಬೇಕಾಗಿದೆ. ಬೇರೆ ವಿವಿಗಳಿಗೆ ಹೋಲಿಕೆ ಸಲ್ಲದು. ಅಧಿಕಾರಿಗಳು ಮತ್ತು ರಾಜಕೀಯ ನಾಯಕರ ಬೆಂಬಲದಿಂದ ವಿಶ್ವವಿದ್ಯಾಲಯದ ಸ್ಥಳ ಈಗಾಗಲೇ ನಿಗದಿಯಾಗುವ ಕಾಲ ಸನ್ನಿಹಿತವಾಗುತ್ತಿದೆ. ಇನ್ನೂ ಅನೇಕ ವಿಭಾಗ ಆರಂಭಸಬೇಕೆಂಬ ಚಿಂತನೆ ನಡೆಯುತ್ತಿದೆ. ಮೂಲ ಸೌಕರ್ಯಗಳ ಸಮಸ್ಯೆ ಪರಿಹಾರವಾಗುತ್ತಿದ್ದು, ಪ್ರಸಕ್ತ ವರ್ಷದಿಂದ ಯಲಬುರ್ಗಾ ಪಿ.ಜಿ ಸೆಂಟರ್‌ನ್ನು ವಿಶ್ವವಿದ್ಯಾಲಯದ ಮೌಲ್ಯಮಾಪನ ಕೇಂದ್ರ ಆರಂಭಿಸಲಾಗುವುದು. ಜನಸಾಮಾನ್ಯರಿಗೆ ಉನ್ನತ ಶಿಕ್ಷಣದ ಮಹತ್ವ ತಿಳಿಸುವ ಮೂಲಕ ಈ ಭಾಗದ ಮಹಿಳೆಯರನ್ನು ಸ್ನಾತಕೋತ್ತರ ಶಿಕ್ಷಣ ಪಡೆದುಕೊಳ್ಳಲು ವಿವಿ ಅರಿವು ಮೂಡಿಸುತ್ತಾ ಬಂದಿದೆ. ವಿದ್ಯಾರ್ಥಿಗಳು ಹೆತ್ತವರ ಕನಸು ನನಸಾಗಿಸುವ ಮಹತ್ವದ ಕಾರ್ಯ ಪೂರ್ಣಗೊಳಿಸಬೇಕು ಎಂದರು.

ಚಲನಚಿತ್ರ ಅಕಾಡೆಮಿ ಸದಸ್ಯೆ ಸಾವಿತ್ರಿ ಮಜುಮದಾರ ಮಾತನಾಡಿ, ನಾನು ಸಿಡಿಕೇಟ್ ಸದಸ್ಯೆಯಾಗಿದ್ದಾಗ ಕೊಪ್ಪಳ ಭಾಗದಲ್ಲಿ ಕೃಷ್ಣದೇವರಾಯ ವಿವಿಯಿಂದ ಪಿಜಿ ಸೆಂಟರ್ ಆರಂಭಿಸಲಾಯಿತು. ಇದು ಅಷ್ಟು ಸುಲಭವಾಗಿರಲಿಲ್ಲ. ಅಂದಿನ ಜಿಲ್ಲಾಧಿಕಾರಿ ಕನಗವಲ್ಲಿ ಪ್ರೋತ್ಸಾಹದ ಫಲವಾಗಿ ದೊರಕಿದೆ. ಇಂದು ಕೊಪ್ಪಳ ವಿವಿ ಸ್ಥಾಪಿತವಾಗಿ ಸಣ್ಣಪುಟ್ಟ ಸಮಸ್ಯೆ ಎದುರಿಸುತ್ತಿದೆ. ಇದರ ಸಮಗ್ರ ಅಭಿವೃದ್ಧಿಗೆ ಇಲ್ಲಿನ ರಾಜಕಾರಣಿಗಳ ಮತ್ತು ಅಧಿಕಾರಿಗಳ ಇಚ್ಛಾಶಕ್ತಿಯಿಂದ ಶಾಶ್ವತ ನೆಲೆ ಕಂಡುಕೊಂಡು ಸಮಗ್ರವಾಗಿ ಅಭಿವೃದ್ಧಿ ಹೊಂದಬೇಕಾದ ಅವಶ್ಯಕತೆ ಇದೆ ಎಂದರು.

ಸುದೀರ್ಘ ಸೇವೆ ಸಲ್ಲಿಸಿರುವ ಸಾತ್ವಿಕ ಮನಸ್ಸುಳ್ಳ ಎಸ್.ವಿ. ಡಾಣಿಯವರ ಅವಧಿಯಲ್ಲಿ ಇನ್ನೂ ಅನೇಕ ಒಳ್ಳೆಯ ಕಾರ್ಯಕ್ರಮ ನಡೆಯಲಿ ಎಂದರು.

ಕುಲಸಚಿವ ಪ್ರೊ.ಕೆ. ರಮೇಶ ಮಾತನಾಡಿ, ಕಾಲಕ್ಕೆ ತಕ್ಕಂತೆ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ತಾಂತ್ರಿಕ ಜ್ಞಾನ ಬಹಳ ಅವಶ್ಯವಾಗಿರುವುದರಿಂದ ಪ್ರಾಧ್ಯಾಪಕರು ವಿದ್ಯಾರ್ಥಿಗಳಲ್ಲಿ ಎಐಯಂತಹ ಅಡ್ವಾನ್ಸ್ ಟೆಕ್ನಾಲಜಿ ಬಗ್ಗೆ ಅರಿವು ಮೂಡಿಸುವ ಮೂಲಕ ಪ್ರಸ್ತುತ ಸ್ಪರ್ಧಾತ್ಮಕ ಯುಗಕ್ಕೆ ಅಣಿಗೊಳಿಸಬೇಕು ಎಂದರು.

ಜಾನಪದ ಅಕಾಡೆಮಿ ಸದಸ್ಯ ಜೀವನಸಾಬ್‌ ಬಿನ್ನಾಳ ಜನಪದ ಗೀತೆಗಳನ್ನು ಹಾಡುವ ಮೂಲಕ ವಿದ್ಯಾರ್ಥಿಗಳಿಗೆ ಮನರಂಜನೆ ನೀಡಿದರು.

ಹಣಕಾಸು ಅಧಿಕಾರಿ ಅಮೀನ್ ಅತ್ತಾರ, ಆಡಳಿತಾಧಿಕಾರಿ ತಿಮ್ಮಾರಡ್ಡಿ ಮಾತನಾಡಿದರು.

ಕಲಾ ವಿಭಾಗದಿಂದ ಶ್ರೀಕೃಷ್ಣದೇವರಾಯ ನಾಟಕ ಪ್ರದರ್ಶನವಾಯಿತು. ಪತ್ರಿಕೋದ್ಯಮ ವಿಭಾಗದ ಕಲ್ಯಾಣ ವಾಣಿ ವಿದ್ಯಾರ್ಥಿ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಪಟ್ಟಣದ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಕೆ.ಎಚ್. ಛತ್ರದ, ಗಂಗಾವತಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಶಿವರಾಜ ಗುರಿಕಾರ, ಇತಿಹಾಸ ವಿಭಾಗದ ಪ್ರಾಧ್ಯಾಪಕಿ ಗೀತಾ ಪಾಟೀಲ್, ಕನ್ನಡ ವಿಭಾಗದ ಅಧ್ಯಾಪಕ ನಾಗಪ್ಪ ಹೂವಿನಬಾವಿ, ರಾಜ್ಯಶಾಸ್ತ್ರ ಉಪನ್ಯಾಸಕ ದೇವಪ್ಪ, ವಿವಿಧ ವಿಭಾಗಗಳ ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈತರು ಸಮತೋಲಿತ ರಸಗೊಬ್ಬರಗಳ ಬಳಕೆ ಮಾಡಲಿ
ಬೇಸಿಗೆ ಶಿಬಿರಗಳು ಮಕ್ಕಳ ಸರ್ವತೋಮುಖ ಪ್ರಗತಿಗೆ ಸಹಕಾರಿ: ನ್ಯಾ. ದಿವ್ಯಶ್ರೀ