ದಣಿವರಿಯದ ಕಾರ್ಮಿಕರ ಶ್ರಮ ಅತ್ಯಂತ ಶ್ರೇಷ್ಠ: ರಘುವೀರ್‌

KannadaprabhaNewsNetwork |  
Published : May 12, 2026, 01:15 AM IST
ಜೋಡಿಕೋಡಿಹಳ್ಳಿ ಗ್ರಾಮದಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆ   | Kannada Prabha

ಸಾರಾಂಶ

ಕಾಯಕವೇ ಕೈಲಾಸ ಎಂಬ ತತ್ವದಡಿ ರಾಷ್ಟ್ರದ ಅಭಿವೃದ್ಧಿಗೆ ಬೆನ್ನೆಲುಬಾಗಿ ನಿಂತಿರುವ ಕಾರ್ಮಿಕರ ಶ್ರಮ ಅತ್ಯಂತ ಶ್ರೇಷ್ಠವಾದುದು ಎಂದು ಬೇಲೇನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಘುವೀರ್ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ತರೀಕೆರೆ

ಕಾಯಕವೇ ಕೈಲಾಸ ಎಂಬ ತತ್ವದಡಿ ರಾಷ್ಟ್ರದ ಅಭಿವೃದ್ಧಿಗೆ ಬೆನ್ನೆಲುಬಾಗಿ ನಿಂತಿರುವ ಕಾರ್ಮಿಕರ ಶ್ರಮ ಅತ್ಯಂತ ಶ್ರೇಷ್ಠವಾದುದು ಎಂದು ಬೇಲೇನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಘುವೀರ್ ಅಭಿಪ್ರಾಯಪಟ್ಟರು.

ಸಮೀಪದ ಬೇಲೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೋಡಿಕೋಡಿಹಳ್ಳಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಹಮ್ಮಿಕೊಳ್ಳಲಾದ ನೀರಾವರಿ ಕಾಲುವೆ ಅಭಿವೃದ್ಧಿ ಕಾಮಗಾರಿ ಸ್ಥಳದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ವಿಶ್ವ ಕಾರ್ಮಿಕ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೂಲಿಕಾರ್ಮಿಕರಾದ ಲಲಿತಮ್ಮ ಮಾತನಾಡಿ, ನರೇಗಾ ಯೋಜನೆಯು ನಮ್ಮಂತಹ ಬಡ ಕುಟುಂಬಗಳಿಗೆ ಆಸರೆಯಾಗಿದೆ, ನಾವು ಬೆವರು ಸುರಿಸಿ ಕೆಲಸ ಮಾಡುವ ಸ್ಥಳಕ್ಕೇ ಅಧಿಕಾರಿಗಳು ಬಂದು ನಮ್ಮೊಂದಿಗೆ ಕಾರ್ಮಿಕ ದಿನ ಆಚರಿಸಿ, ಗೌರವ ನೀಡಿದ್ದು ತುಂಬಾ ಖುಷಿ ತಂದಿದೆ. ಬಿಸಿಲಿದ್ದರೂ ನಮ್ಮ ಹಳ್ಳಿಯ ಕಾಲುವೆ ಅಭಿವೃದ್ಧಿ ಮಾಡುತ್ತಿದ್ದೇವೆ ಎಂಬ ಹೆಮ್ಮೆ ನಮಗಿದೆ ಎಂದು ಅವರು ಹೇಳಿದರು.

ತಾಲೂಕು ಮಾಹಿತಿ ಶಿಕ್ಷಣ ಮತ್ತು ಸಂವಹನ ಸಂಯೋಜಕ ನಥಾನಿಯಲ್ ಅಮನ್ನಾ ಅವರು ಮಾತನಾಡಿ, ನರೇಗಾ ಯೋಜನೆಯಡಿ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳು, ಕೆಲಸದ ಸ್ಥಳದಲ್ಲಿ ಇರಬೇಕಾದ ಸುರಕ್ಷತಾ ಕ್ರಮಗಳು ಹಾಗೂ ಸಕಾಲಕ್ಕೆ ವೇತನ ಪಡೆಯುವ ಹಕ್ಕಿನ ಬಗ್ಗೆ ಪ್ರತಿಯೊಬ್ಬರಿಗೂ ಅರಿವಿರಬೇಕು. ಕಾರ್ಮಿಕರು ಕೇವಲ ಕೂಲಿ ಪಡೆಯುವುದಷ್ಟೇ ಅಲ್ಲದೆ, ಸರ್ಕಾರದ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಪ್ರಯೋಜನ ಪಡೆಯುವುದು ಅಗತ್ಯ ಎಂದು ಹೇಳಿದರು.

ಗ್ರಾಮದ ನೀರಾವರಿ ಕಾಲುವೆ ಹೂಳೆತ್ತುವ ಕಾಯಕದಲ್ಲಿ ಮಗ್ನರಾಗಿದ್ದ ಕೂಲಿಕಾರರು, ತಮ್ಮ ಕೆಲಸದ ನಡುವೆಯೇ ಕೇಕ್ ಕತ್ತರಿಸುವ ಮೂಲಕ ಕಾರ್ಮಿಕ ದಿನವನ್ನು ಸಂಭ್ರಮದಿಂದ ಆಚರಿಸಿದರು. ಕಡು ಬಿಸಿಲನ್ನೂ ಲೆಕ್ಕಿಸದೆ ಗ್ರಾಮದ ಸಾರ್ವಜನಿಕ ಆಸ್ತಿಗಳ ಪುನಶ್ಚೇತನಕ್ಕೆ ಬೆವರು ಸುರಿಸುತ್ತಿರುವ ಕಾರ್ಮಿಕರಿಗೆ ಅಧಿಕಾರಿಗಳು ಸಿಹಿ ಹಂಚಿ ಶುಭ ಕೋರಿದರು.

ಕಾರ್ಯಕ್ರಮದಲ್ಲಿ ತಾಂತ್ರಿಕ ಸಹಾಯಕ ವಿವೇಕ್, ಗ್ರಾಮ ಕಾಯಕ ಮಿತ್ರ ಸೌಮ್ಯ, ಬಿ.ಎಫ್.ಟಿ ಹನುಮಂತಪ್ಪ, ತಾಂಡಾ ರೋಜ್‌ಗಾರ್ ಮಿತ್ರ ಪುಷ್ಪ, ಪಂಚಾಯಿತಿ ಸಿಬ್ಬಂದಿಗಳು ಹಾಗೂ ನರೇಗಾ ಕೂಲಿಕಾರರು ಹಾಜರಿದ್ದು ಶ್ರಮ ಸಂಸ್ಕೃತಿಯನ್ನು ಎತ್ತಿ ಹಿಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನಮಾನಸದ ನಾಯಕನಿಗೆ ಕಣ್ಣೀರಿನ ಅಶ್ರುತರ್ಪಣ
ಸೂರನಹಳ್ಳಿಯಲ್ಲಿ ಸುಧಾಕರ್ ನೆನೆದು ಕಣ್ಣೀರು