ಜನಪದ ವಿವೇಕ, ಸ್ಪರ್ಶ ಎಲ್ಲರಲ್ಲಿಯೂ ಬರಬೇಕಿದೆ

KannadaprabhaNewsNetwork | Published : Mar 16, 2025 1:45 AM

ಸಾರಾಂಶ

The touch of folklore and its wisdom should reach everyone.

-ಜಾನಪದ ಅಕಾಡೆಮಿಯ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ ಅಭಿಮತ । ಬೀದರ್‌ನಲ್ಲಿ 2023, 2024ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ

====

ಕನ್ನಡಪ್ರಭ ವಾರ್ತೆ, ಬೀದರ್‌

ಜನಪದವು ಪ್ರೀತಿಯ ಆಯುಧ, ನೈತಿಕತೆಯ ಕಣಜ. ನೈತಿಕತೆಯ ಜೀವಾಳ ಈ ಜಾನಪದ. ಜನಪದದ ಸ್ಪರ್ಶ ಅದರ ವಿವೇಕ ಎಲ್ಲರಲ್ಲಿಯೂ ಬರಬೇಕಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಡಾ. ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಜಾನಪದ ಅಕಾಡೆಮಿಯಿಂದ 2023 ಹಾಗೂ 2024ನೇ ಸಾಲಿನ ಪ್ರಶಸ್ತಿ ವಾರ್ಷಿಕ ಗೌರವ ಪ್ರಶಸ್ತಿ, ತಜ್ಞ ಪ್ರಶಸ್ತಿ ಪ್ರದಾನ ಹಾಗೂ 2022 ಮತ್ತು 2023ನೇ ಸಾಲಿನ ಪುಸ್ತಕ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿ, ಅಮ್ಮನ ಲಾಲಿ ಹಾಡಿನಿಂದ ಜೋಗಳ ಪದದಿಂದ ಆರಂಭವಾದ ಜನಪದ ವಿಕಾಸ ಮಣ್ಣಲ್ಲಿ ಮನುಷ್ಯ ಮುಚ್ಚಿ ಮರೆಯಾಗುವ ತನಕ ಅನೇಕ ಪ್ರಕಾರಗಳಲ್ಲಿ ಮಜಲುಗಳಲ್ಲಿ ಅವತಾರಗಳಲ್ಲಿ ನೆಲ ಸಾಂಸ್ಕೃತಿಕತೆಯನ್ನು ಗಟ್ಟಿಗೊಳಿಸುವ ಪದವಾಗಿದೆ ಎಂದು ತಿಳಿಸಿದರು.

ಕೆರೆ ಕುಂಟೆ, ಕಲ್ಯಾಣಿ, ಹೊಲ ಗದ್ದೆ ಊರು ಕೇರಿ, ಕಾಳು, ಕಣಜ, ಗಿಡ ಮರ, ಹಳ್ಳಿ ಬಳ್ಳಿ ಎಂಬ ಕನವರಿಕೆ ಇಂದಿನ ದಿನ ಇಲ್ಲವಾಗಿದೆ. ಇದಕ್ಕೆ ನಮ್ಮ ಜನಪದರು ಹೇಳುವ ಮಸಣದ ಲೋಕ ಎಂಬ ಮಾಯಾ ಲೋಕಕ್ಕೆ ಅಪ್ಪಿಕೊಳ್ಳುವಂಥ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಚಿಕ್ಕಪ್ಪ, ಚಿಕ್ಕಮ್ಮ, ಅತ್ತೆ, ಸೊಸೆ, ತಂದೆ ತಾಯಿ ಅಣ್ಣ ತಮ್ಮ ಎಂಬ ಮಾತುಗಳಿಗೂ ಬರ ಬಂದಿರುವಂಥ ಈ ಕಾಲ ಘಟ್ಟದಲ್ಲಿ ಮಾಯಾ ಲೋಕದಲ್ಲಿ ಸಂಬಂಧಗಳನ್ನು ನಿತ್ಯ ಸತ್ಯಗಳನ್ನು ಮಾರು ದೂರದಲ್ಲಿಟ್ಟಿದ್ದೇವೆ ಮತ್ತೆ ಕಲೆಯಬೇಕಾದ ಅನಿವಾರ್ಯತೆಯಿದೆ. ಸಾಂಸ್ಕೃತಿಕ ಚಿಂತಕರು ಭಾರ ಹೊತ್ತು ಇದನ್ನು ಬಹಿರಂಗಗೊಳಿಸಬೇಕಾಗಿದೆ ಜನಪದವನ್ನು ವಿಸ್ತರಿಸದೇ ಹೋದಲ್ಲಿ ಸತ್ಯಗಳ ಸುಳಿವೇ ಇರೋಲ್ಲ, ವಾಸ್ತವಗಳಿಗೆ ಜಾಗವೇ ಇರೋಲ್ಲ ಎಂದರು.

ಮಣ್ಣಿನ ಹಾಗೂ ಮಳೆಯ ವಾಸನೆ ಈಗಿನ ಪರಂಪರೆಗೆ ಗೊತ್ತಿಲ್ಲ. ಇವುಗಳನ್ನು ನಾವು ಮಕ್ಕಳಿಗೆ ತಿಳಿಸಬೇಕು. ಮುಂದಿನ ದಿನಗಳಲ್ಲಿ ಇವೆರಡೂ ವಾಸನೆಗಳು ಗೊತ್ತಿರದೇ ಇರುವವರು ಯಾವುದೇ ಸುಹಾಸನೆಯನ್ನು ತೆಗೆದುಕೊಂಡರೂ ಅದು ವಿವೇಕವಲ್ಲ, ಸಮಾಜಕ್ಕೆ ಪೂರಕವಲ್ಲ. ಜಾನಪದ ಇಂಥ ಮೂಲವತ್ತ ನಮ್ಮನ್ನು ಕರೆದೊಯ್ಯುತ್ತದೆ ಎಂದರು.

ಮುಂದಿನ ವರ್ಷ ಅಖಿಲ ಭಾರತ ಮಹಿಳಾ ಜನಪದ ಉತ್ಸವವನ್ನು ಆಯೋಜಿಸುತ್ತೇವೆ ಅದಕ್ಕಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಸಹಾಯ ಬೇಕಾಗುತ್ತದೆ ಹಾಗೆಯೇ ಬುಡಕಟ್ಟು ಜನಾಂಗದ ಉತ್ಸವವನ್ನೂ ಆಯೋಜಿಸಲು ಯೋಜಿಸಿದ್ದೇವೆ ಇದಕ್ಕೆ ಭಿಕ್ಷೆ ಬೇಡಿಯಾದರೂ ಜಾನಪದ ಕಾರ್ಯಕ್ರಮ ಮಾಡ್ತೇವೆ ಎಂದು ಗೊಲ್ಲಹಳ್ಳಿ ಶಿವಪ್ರಸಾದ ಸ್ಪಷ್ಟಪಡಿಸಿದರು.

ಅಕಾಡೆಮಿಯ ರಜಿಸ್ಟ್ರಾರ್‌ ನಮ್ರತಾ, ಸಿಬ್ಬಂದಿಗಳಾದ ಪ್ರಕಾಶ, ಅಭಿ, ಸೇವಂತಿ, ನಾಗರತ್ನಮ್ಮ, ಮಹಾದೇವ ಸೇರಿದಂತೆ ಅಕಾಡೆಮಿಯ ಎಲ್ಲ ಸದಸ್ಯರನ್ನು ಸ್ಮರಿಸಿಕೊಳ್ಳಬೇಕಿದೆ. ಇವರೆಲ್ಲ ಸೇರಿ ನಮ್ಮ ಅಕಾಡೆಮಿಯ ರಥವನ್ನು ಎಳೆಯುತ್ತಿದ್ದೇವೆ ಅದಕ್ಕಾಗಿ ಅವರಿಗೆ ಅಭಿನಂದಿಸುತ್ತೇನೆ ನಮಸ್ಕರಿಸುತ್ತೇನೆ ಎಂದು ಗೊಲ್ಲಹಳ್ಳಿ ಶಿವಪ್ರಸಾದ ತಿಳಿಸಿದರು.

--------ಬಾಕ್ಸ್‌-----

ಕಲಾವಿದರ ಮಾಶಾಸನ ವಯೋಮಿತಿ ಇಳಿಸಿ

ಕಲಾವಿದರ ಮಾಶಾಸನದ ವಯೋಮಿತಿಯನ್ನು 50ಕ್ಕೆ ಇಳಿಸಬೇಕು, ಮಾಶಾಸನ 5ಸಾವಿರ ರು.ಗಳಿಗೆ ಏರಿಕೆಯಾಗಬೇಕು ಎಂದು ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ ಆಗ್ರಹಿಸಿದರು. ಸಿನಿಮಾ ನಟರಿಗೆ, ಗಾಯಕರಿಗೆ ಲಕ್ಷಾಂತರ ರುಪಾಯಿ ಸಂಭಾವನೆ ನೀಡುವ ಸರ್ಕಾರ ಜಾನಪದ ಕಲಾವಿದರನ್ನು ಕಡೆಗೆಣಿಸುತ್ತದೆ ಗಂಟೆಗಟ್ಟಲೇ ಕುಣಿದು ಡೊಳ್ಳು ಬಾರಿಸುವ ಕಲಾವಿದರಿಗೆ 25ಸಾವಿರ ರು.ಗಳಿಂದ 50 ಸಾವಿರಕ್ಕೆ ಏರಿಸುವಂತೆ ಆಗ್ರಹಿಸಿದ ಅವರು ಗ್ರಾಮೀಣ ಭಾಗದ ಕಲಾವಿದರಿಗೆ ಗೌರವ ನೀಡುವಂಥ ಕೆಲಸವಾಗಬೇಕು.

-----

ಈ ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಡಾ. ಗಿರೀಶ ಬದೋಲೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕರಾದ ಬಸವರಾಜ ಹೂಗಾರ, ಜಾನಪದ ಅಕಾಡೆಮಿ ಸದಸ್ಯರಾದ ವಿಜಯುಕುಮಾರ ಸೋನಾರೆ, ಮಲ್ಲಿಕಾರ್ಜುನ್‌ ಕಿಂಕೇರೆ, ಮಂಜುನಾಥ ರಾಮಣ್ಣ, ಮೆಹಬೂಬ ಕಿಲ್ಲೇದಾರ, ಶಿವಮೂರ್ತಿ ಭೀಮಬಾಯಿ, ಡಾ.ನಿಂಗಪ್ಪ ಮುದೆನೂರ ಸೇರಿದಂತೆ ಇನ್ನಿತರ ಅಕಾಡೆಮಿ ಸದಸ್ಯರು, ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರಿನ ಲೆಕ್ಕಾಧಿಕಾರಿ ಸುರೇಶ ನಾಯ್ಕ, ರಜಿಸ್ಟ್ರಾರ್‌ ಎನ್‌. ನಮ್ರತಾ ಸೇರಿದಂತೆ ಇನ್ನಿತರರು ಇದ್ದರು.

ಮೆರವಣಿಗೆಯಲ್ಲಿ ಬಸವರಾಜ ಧನ್ನೂರ, ಪರ್ನಾಡಿಂಸ್‌ ಹಿಪ್ಪಳಗಾಂವ್‌, ಗೀತಾ ರೆಡ್ಡಿ, ಬೀದರ್‌ ವಿಶ್ವವಿದ್ಯಾಲಯದ ಕುಲಸಚಿವರಾದ ಸುರೇಖಾ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ, ಸಿದ್ರಾಮಪ್ಪ ಮಾಸಿಮಾಡ್‌, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಮ ಶಿಂಧೆ ಸೇರಿದಂತೆ ಇದ್ದರು.

-----

ಫೈಲ್‌ 15ಬಿಡಿ3

Share this article