ಕನ್ನಡಪ್ರಭ ವಾರ್ತೆ ರಾಮನಗರ
ಅಪ್ರಾಪ್ತೆ ಖುಷಿ ಅನುಮಾನಸ್ಪದ ಸಾವನ್ನಪ್ಪಿರುವುದು ಕೊಲೆಯಿಂದಲೊ ಅಥವಾ ರೈಲು ಅಪಘಾತದಿಂದಲೊ ಎಂಬುದು ಎಫ್‌ಎಸ್‌ಎಲ್ ವರದಿ ಬಂದ ನಂತರ ಗೊತ್ತಾಗಲಿದೆ. ಆ ವರದಿ ಬರುವ ಮುನ್ನವೇ ನಾವು ಊಹಾಪೂಹಗಳಿಗೆ ಉತ್ತರಿಸಿದರೆ ಅದರಿಂದ ಜನರಿಗೆ ತಪ್ಪು ಮಾಹಿತಿ ಹೋಗುತ್ತದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರತಿಕ್ರಿಯಿಸಿದರು.ಬಿಡದಿ ಹೋಬಳಿ ಭದ್ರಾಪುರ ಕಾಲೋನಿಯಲ್ಲಿರುವ ಮೃತ ಖುಷಿ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದ ನಂತರ ಪೊಲೀಸ್ ಭವನದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಅವರೊಂದಿಗೆ ಚರ್ಚೆ ನಡೆಸಿದ ತರುವಾಯ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಾಲಕಿ ಖುಷಿ ಸಾವಿನ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ. ಈಗಾಗಲೇ ಶವದ ಮರಣೋತ್ತರ ಪರೀಕ್ಷೆಯನ್ನು ಪೂರ್ಣಗೊಂಡು ವೈದ್ಯಕೀಯ ವರದಿ ಸಿದ್ಧವಿದೆ. ಜತೆಗೆ ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್ ಎಸ್ ಎಲ್ ) ವರದಿ ಇನ್ನೂ ಬರಬೇಕಿದೆ. ಆ ವರದಿ ಬಂದ ನಂತರ ಎರಡನ್ನೂ ತಾಳೆ ಮಾಡಿ ನಂತರ ಸಾವಿಗೆ ನಿಖರವಾದ ಕಾರಣ ತಿಳಿಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆಂದು ಹೇಳಿದರು.ಬಾಲಕಿಯ ಮೈಮೇಲೆ ಸಿಗರೇಟ್‌ನಿಂದ ಸುಟ್ಟ ಗಾಯಗಳಾಗಿದ್ದು, ಕುತ್ತಿಗೆ ಮೇಲೆ ಕಾಲಿನಿಂದ ತುಳಿಯಲಾಗಿದೆ ಎಂದು ಹೇಳಲಾಗುತ್ತಿತ್ತು. ಆದರೆ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಆ ರೀತಿ ಏನೂ ಆಗಿಲ್ಲವೆಂದು ಹೇಳಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕರಣದ ಅಂತಿಮ ವರದಿಯನ್ನು ನಾಳೆ ಪ್ರಕಟಿಸುವುದಾಗಿ ಹೇಳಿದ್ದಾರೆ. ಹಾಗೇನಾದರೂ ಕೊಲೆ ಹಾಗೂ ಅತ್ಯಾಚಾರ ನಡೆದಿರುವುದು ಸಾಬೀತಾದರೆ ಅದಕ್ಕೆ ಕಾರಣರಾದವರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದರು.
ಪೊಲೀಸರು ನಾನಾ ಆಯಾಮಗಳಲ್ಲಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಇದರಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ. ಅದಕ್ಕೆ ಬೇರೊಂದು ಆಯಾಮವನ್ನು ಸಷ್ಟಿಸುವುದು ಬೇಡ. ಒಟ್ಟಾರೆ ಬಡಕುಟಂಬಕ್ಕೆ ಅನ್ಯಾಯ ಆಗಬಾರದು, ಮುಗ್ಧ ಬಾಲಕಿ ಸಾವಿಗೆ ನ್ಯಾಯ ಸಿಗಬೇಕು ಎನ್ನುವುದಷ್ಟೇ ನಮ್ಮ ಉದ್ದೇಶ ಎಂದು ನಾರಾಯಣಸ್ವಾಮಿ ಹೇಳಿದರು.ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಮಾಜಿ ಸಚಿವ ಮಹೇಶ್ , ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಹಾಜರಿದ್ದರು.
-------16ಕೆಆರ್ ಎಂಎನ್ 6.ಜೆಪಿಜಿ
ಬಿಡದಿ ಹೋಬಳಿಯ ಭದ್ರಾಪುರ ಹಕ್ಕಿಪಿಕ್ಕಿ ಕಾಲೋನಿಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಭೇಟಿ ನೀಡಿರುವುದು.------ -