ಆರೋಪಿ ಶೇಷಗಿರಿ ಬಂಧನ । ಬಾಳೆಹೊನ್ನೂರು ಪಟ್ಟಣದಲ್ಲಿ ಮಂಗಳವಾರ ರಾತ್ರಿ ನಡೆದಿದೆ
ವಿವಾಹಿತ ಮಹಿಳೆಯೊಂದಿಗಿನ ಅಕ್ರಮ ಸಂಬಂಧದ ವಿಚಾರದಲ್ಲಿ ಇಬ್ಬರು ವ್ಯಕ್ತಿಗಳ ನಡುವಿನ ಜಗಳದಲ್ಲಿ ಕತ್ತಿಯಿಂದ ನಡೆದ ಹಲ್ಲೆಯಲ್ಲಿ ಒಬ್ಬನ ಕೈನ ಹಸ್ತ ತುಂಡಾಗಿರುವ ಘಟನೆ ಬಾಳೆಹೊನ್ನೂರು ಪಟ್ಟಣದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಕೊಪ್ಪ ತಾಲೂಕು ಅಡಿಗೆಬೈಲು ಗ್ರಾಮದ ಪೇಟೆಗದ್ದೆಯ ಅರುಣ್ (35) ಹಲ್ಲೆಗೊಳಗಾಗಿ ಹಸ್ತವೇ ತುಂಡಾದ ವ್ಯಕ್ತಿ. ಚಿಕ್ಕಮಗಳೂರು ತಾಲೂಕು ಹುಯಿಗೆರೆ ಗ್ರಾಮದ ಬ್ಯಾದ್ರಿ ಕಾಲೋನಿ ಶೇಷಗಿರಿ (40) ಹಲ್ಲೆ ನಡೆಸಿದ ಆರೋಪಿ.ಆರೋಪಿ ಶೇಷಗಿರಿಯ ಅತ್ತೆಯ ಮಗಳಾದ ವಿವಾಹಿತ ಮಹಿಳೆ ಈ ಹಿಂದೆ ಪೇಟೆಗದ್ದೆಯ ವ್ಯಕ್ತಿಯೊಬ್ಬರಿಗೆ ಕೆಲವು ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದರು. ಪತಿ, ಪತ್ನಿಯರ ಸಾಂಸಾರಿಕ ಜೀವನ ಸರಿ ಬಾರದೆ ಈ ದಂಪತಿ ವಿಚ್ಛೇದನ ಪಡೆದಿದ್ದರು. ಆ ಬಳಿಕ ಆಕೆ ಪಟ್ಟಣದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದರು. ಆಕೆಯ ಮನೆಗೆ ಪೇಟೆಗದ್ದೆಯ ಅರುಣ್ ಆಗಾಗ ಬಂದು ಹೋಗುತ್ತಿದ್ದ. ಇವರಿಬ್ಬರಿಗೂ ಅಕ್ರಮ ಸಂಬಂಧವಿತ್ತು ಎನ್ನಲಾಗಿದೆ. ಅತ್ತೆ ಮಗಳ ಮನೆಗೆ ಬೇರೊಬ್ಬ ವ್ಯಕ್ತಿ ಬಂದು ಹೋಗುವುದನ್ನು ಸಹಿಸದ ಶೇಷಗಿರಿ ಕಳೆದ ಹಲವು ದಿನಗಳಿಂದ ಅರುಣ್ ಜೊತೆಗೆ ಜಗಳ ಮಾಡಿದ್ದ. ಮಂಗಳವಾರ ರಾತ್ರಿ ಅರುಣ್ ಈಕೆ ಮನೆಗೆ ಬಂದು ವಾಪಾಸ್ ಹೋಗುತ್ತಿದ್ದ ವೇಳೆ ಪಟ್ಟಣದ ಮಾರಿಗುಡಿ ರಸ್ತೆ ಬಳಿ ಅಡ್ಡಗಟ್ಟಿ ಜಗಳವಾಡಿ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ. ಕತ್ತಿ ಬಲವಾಗಿ ಬೀಸಿದಾಗ ಅದರಿಂದ ತಪ್ಪಿಸಿಕೊಳ್ಳಲು ಅರುಣ್ ತನ್ನ ಕೈ ಅಡ್ಡ ಹಿಡಿದಾಗ ಹಸ್ತ ಸಂಪೂರ್ಣ ತುಂಡಾಗಿ ಬಿದ್ದಿದೆ. ತೀವ್ರ ಹಲ್ಲೆಗೊಳಗಾದ ಅರುಣ್‌ಗೆ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆರೋಪಿ ಶೇಷಗಿರಿಯನ್ನು ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಶೇಷಗಿರಿ ವಿರುದ್ಧ ಈ ಹಿಂದೆಯೂ ಹಲವು ದೂರುಗಳು ಬಾಳೆಹೊನ್ನೂರು ಠಾಣೆಯಲ್ಲಿ ದಾಖಲಾಗಿದೆ. ರಾಜೀ ಪಂಚಾಯಿತಿ ಮೂಲಕ ಸಮಸ್ಯೆ ಬಗೆಹರಿಸಿಕೊಂಡಿದ್ದ ಎಂದು ತಿಳಿದುಬಂದಿದೆ.ಅರುಣ್ ಮತ್ತು ಶೇಷಗಿರಿ ಇಬ್ಬರಿಗೂ ಮಹಿಳೆಯೊಂದಿಗೆ ಅಕ್ರಮ ಸಂಬಂಧವಿತ್ತು. ಇದು ಇಬ್ಬರಿಗೂ ತಿಳಿದಿದ್ದು, ಆಕೆ ತನಗೆ ಬೇಕು ಎಂದು ಇಬ್ಬರು ಹಠ ಹಿಡಿದಿದ್ದರಿಂದ ಘಟನೆ ವಿಕೋಪಕ್ಕೆ ಹೋಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ೨೪ಬಿಹೆಚ್‌ಆರ್ ೧: ಆರೋಪಿ ಶೇಷಗಿರಿ೨೪ಬಿಹೆಚ್‌ಆರ್ ೨: ಕತ್ತಿಯ ದಾಳಿಯಿಂದ ಕೈ ತುಂಡಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅರುಣ್.