ಕನ್ನಡಪ್ರಭ ವಾರ್ತೆ ಪಾಂಡವಪುರ
ಕೆಆರ್‌ಎಸ್ ಅಣೆಕಟ್ಟೆ ಕ್ರಸ್ಟ್ ಗೇಟ್‌ಗಳ ದುರಸ್ತಿ ಕಾರ್ಯ ನಡೆಯುತ್ತಿದೆ. ಕಾಮಗಾರಿ ಮುಗಿದ ಬಳಿಕ ಜನ- ಜಾನುವಾರು, ಒಣಗುತ್ತಿರುವ ಬೆಳೆಗಳಿಗೆ ಒಂದು ಕಟ್ಟು ನೀರು ಹರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.ತಾಲೂಕಿನ ಕೆನ್ನಾಳು ಗ್ರಾಮದಲ್ಲಿ ₹1.33 ಕೋಟಿ, ಹರಳಹಳ್ಳಿ ಗ್ರಾಮದಲ್ಲಿ ₹60 ಲಕ್ಷ ಹಾಗೂ ವಿಶ್ವೇಶ್ವರನಗರ ಗ್ರಾಮದಲ್ಲಿ ₹20 ಲಕ್ಷ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ಅನುದಾನದಲ್ಲಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಬಳಿಕ ಅವರು ಮಾತನಾಡಿದರು.
ನಾಲೆಗೆ ನೀರು ಹರಿಸುವ ಸಂಬಂಧ ಮುಖ್ಯಮಂತ್ರಿಗಳು, ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಅವರೊಡನೆ ಚರ್ಚಿಸಲಾಗಿದೆ. ಕೆಆರ್‌ಎಸ್ ಅಣೆಕಟ್ಟೆಯಲ್ಲಿ ನೀರು ಕಡಿಮೆಯಾಗಿರುವುದರಿಂದ ಕ್ರಸ್ಟ್ ಗೇಟ್‌ಗಳ ಸಣ್ಣಪುಟ್ಟ ದುರಸ್ತಿ ಕಾರ್‍ಯಗಳು ನಡೆಯುತ್ತಿವೆ ಎಂದರು.ಕಳೆದ 35- 40 ವರ್ಷಗಳಿಂದ ಗೇಟ್‌ಗಳ ದುರಸ್ತೀಕರಣ ನಡೆದಿರಲಿಲ್ಲ. ಕೊನೆ ಪಕ್ಷ ಲೀಕೇಜ್ ನೀರನ್ನಾದರೂ ಬಿಟ್ಟುಕೊಡುವಂತೆ ಮನವಿ ಮಾಡಿದ್ದೇವೆ. ಜತೆಗೆ ಮಳೆ ಕೊರತೆಯಿಂದಾಗಿ ಅಣೆಕಟ್ಟೆಗೆ ಒಳ ಅರಿವು ಸಹ ಕಡಿಮೆ ಇದೆ. ಆಗಸ್ಟ್ ತಿಂಗಳವರೆಗೆ ಅಣೆಕಟ್ಟೆಯಲ್ಲಿ ಇರುವ 80 ಅಡಿ ನೀರನ್ನು ಕುಡಿಯುವ ನೀರಿಗೂ ಕಾಯ್ದಿರಿಸಿಕೊಳ್ಳಬೇಕಾಗಿದೆ ಎಂದರು.
2 ಅಡಿ ನೀರನ್ನಾದರೂ ನಾಲೆಗಳಿಗೆ ಬಿಡುವಂತೆ ಮನವಿ ಮಾಡಿದ್ದೇವೆ. ಜತೆಗೆ ಜಾನುವಾರುಗಳ ಕುಡಿಯುವ ನೀರಿನ ಗಮನದಲ್ಲಿಟ್ಟುಕೊಂಡು ಗೇಟ್‌ಗಳ ದುರಸ್ತೀಕರಣ ಮುಗಿದ ಬಳಿಕ ಒಂದು ಕಟ್ಟು ನೀರು ಹರಿಸುವಂತೆ ಮನವಿ ಮಾಡಿದ್ದರೂ ಕಾಮಗಾರಿ ಮುಗಿದ ಬಳಿಕ ನೀರು ಹರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ತಾಲೂಕಿನ ವಿಶ್ವೇಶ್ವರನಗರದಲ್ಲಿ ₹20 ಲಕ್ಷ ವೆಚ್ಚದಲ್ಲಿ ರಸ್ತೆಯನ್ನು ಅಭಿವೃದ್ದಿಪಡಿಸುವ ಕಾಮಗಾರಿಗೆ ಶಾಸಕರು ಪೂಜೆ ಸಲ್ಲಿಸಲು ಬಂದಾಗ ಸ್ಥಳೀಯ ಮಹಿಳೆಯರು ನಮ್ಮ ಬಡಾವಣೆಯ ರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಶಾಸಕರಿಗೆ ಕ್ಲಾಸ್ ತೆಗೆದುಕೊಂಡರು.
ನೀವು ಚುನಾವಣೆ ವೇಳೆ ಮತ ಕೇಳುವಾಗ ಕೊಟ್ಟಿದ್ದ ಮಾತು ಉಳಿಸಿಕೊಳ್ಳಿ. ನೀವು ಗೆದ್ದು ಮೂರು ವರ್ಷವಾದರೂ ಈವರೆಗೂ ನಮ್ಮ ಬಡಾವಣೆಯ ರಸ್ತೆ ಮಾಡಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ನಾವು 16 ವರ್ಷಗಳಿಂದಲೂ ಕಂದಾಯ ಕಟ್ಟುತ್ತಿದ್ದೇವೆ. ನಮಗೂ ರಸ್ತೆ ಮಾಡಿಸಿಕೊಡಿ. ಈ ರಸ್ತೆಗೆ ಪೂಜೆ ಮಾಡಲು ಆಗುತ್ತದೆ, ನಮ್ಮ ರಸ್ತೆಗೆ ಪೂಜೆ ಮಾಡಲು ಆಗೋದಿಲ್ವ? ಎಂದು ಶಾಸಕರು ಮತ್ತು ಅವರ ಹಿಂಬಾಲಕರನ್ನು ತರಾಟೆಗೆ ತೆಗೆದುಕೊಂಡರು.
ಇದಕ್ಕೆ ಉತ್ತರಿಸಿದ ಶಾಸಕರು, ಹಂತ ಹಂತವಾಗಿ ಕಾಮಗಾರಿ ಮಾಡುತ್ತಿದ್ದೇವೆ. ಇನ್ನೂ ಒಂದು ತಿಂಗಳ ಒಳಗೆ ಆ ರಸ್ತೆಗೂ ಭೂಮಿ ಪೂಜೆ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.ಈ ವೇಳೆ ರೈತಸಂಘದ ಅಧ್ಯಕ್ಷ ಮಂಜುನಾಥ್, ಮಾಜಿ ಅಧ್ಯಕ್ಷ ವಿಜಯ್‌ಕುಮಾರ್, ನಾಗರಾಜು, ಚಿದಾನಂದ್, ಮಹೇಶ್, ಹರ್ಷ, ಪುಟ್ಟರಾಜು, ಚಂದ್ರಶೇಖರ್, ರಾಮಚಂದ್ರು, ಪೈ.ಶಂಕರ್, ಬಾಲಕೃಷ್ಣ, ಪುರುಷೋತ್ತಮ್, ಪರಮೇಶ್, ಗುತ್ತಿಗೆದಾರ ನರಸಿಂಹಮೂರ್ತಿ, ಎಇಇ ಜೈಕುಮಾರ್, ಎಇ ರಾಕೇಶ್ ಸೇರಿ ಹಲವರು ಹಾಜರಿದ್ದರು.