ಕನ್ನಡಪ್ರಭ ವಾರ್ತೆ ಸಾಗರ
ಇಲ್ಲಿನ ಪರಸ್ಪರ ಸಾಹಿತ್ಯ ವೇದಿಕೆ ಪಟ್ಟಣದಲ್ಲಿ ಭಾನುವಾರ ಆಯೋಜಿಸಿದ್ದ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಶಿಶುನಾಳ ಷರೀಫ ಸಾಹೇಬ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ನಮಗೆ ರಾಜಕೀಯವಾಗಿ ಭೀಮ ಸಂವಿಧಾನವಿದ್ದರೆ ಸಾಮಾಜಿಕವಾಗಿ ಮನು ಸಂವಿಧಾನವಿದ್ದು, ಇವೆರಡರ ನಡುವೆ ಸಂಘರ್ಷ ನಡೆಯುತ್ತಲೆ ಇದೆ. ಪಟ್ಟಭದ್ರಶಕ್ತಿಗಳು ಎಲ್ಲವನ್ನು ನಿಯಂತ್ರಿಸುತ್ತಿರುವಾಗ ದಾರ್ಶನಿಕರ ದಾರಿ ನಮಗೆ ಮುಖ್ಯವಾಗಬೇಕು ಎಂದು ಪ್ರತಿಪಾದಿಸಿದರು.
ದೇಶದಲ್ಲಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಅನೇಕ ಮಹನೀಯರು ಬಂದು ಹೋಗಿದ್ದಾರೆ. ಆದರೂ ಸಮಾಜ ಸುಸ್ಥಿತಿಯಲ್ಲಿದೆಯೆಂದು ಹೇಳಲು ಸಾಧ್ಯವಾಗುತ್ತಿಲ್ಲ. ಅನೇಕ ವೈರುದ್ಯಗಳ ನಡುವೆ ನಮಗೆ ಆಶಾದೀವಿಗೆಯಾಗಿ ಕಾಣುವ ಸಂತ ಶಿಶುನಾಳ ಶರೀಫ್, ಅಂಬೇಡ್ಕರ್, ಗಾಂಧಿ, ಅಕ್ಕಮಹಾದೇವಿಯರನ್ನು ಖಳನಾಯಕ ಎಂದು ಬಿಂಬಿಸಲಾಗುತ್ತಿದೆ. ಬಸವಣ್ಣನವರನ್ನು ಕಳ್ಳ, ಕೊಲೆಗಡುಕ ಎಂದು ಹೇಳಲಾಗುತ್ತಿದೆ. ಅಕ್ಷರ ಕಲಿತವರಿಂದಲೇ ಹೆಚ್ಚು ಅಪಾಯ ಎದುರಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಅಕ್ಷರದೊಳಗಿನ ಅರಿವು ಪ್ರಜ್ಞೆಯ ಭಾಗವಾಗಬೇಕಿದೆ ಎಂದು ಹೇಳಿದರು.ಜ್ಯೋತಿಬಾ ಪುಲೆ ಹಾಗೂ ಅಂಬೇಡ್ಕರ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕವಿ, ಸಾಮಾಜಿಕ ಹೋರಾಟಗಾರ ಕೋಟಿಗಾನಹಳ್ಳಿ ರಾಮಯ್ಯ, ಅಂಬೇಡ್ಕರ್ ಅವರನ್ನು ಆರಾಧನೆಯಲ್ಲಿ ಕೊನೆಗೊಳಿಸಲಾಗುತ್ತಿದೆ. ಅವರ ಮಾತುಗಳ ಬಗ್ಗೆ ಗಮನಹರಿಸದೆ ಅವರ ದಾರ್ಶನಿಕತೆಗೆ ದ್ರೋಹ ಮಾಡುತ್ತಿರುವ ಇವತ್ತಿನ ಸಂದರ್ಭದಲ್ಲಿ ಅಂಬೇಡ್ಕರ್ ಚಿಂತನೆಗಳನ್ನು ಸಮಕಾಲೀನಗೊಳಿಸಬೇಕಾಗಿದೆ ಎಂದರು.
ಅಂಬೇಡ್ಕರ್ ವಾದಿ ಮಾನವಕುಲಶಾಸ್ತ್ರಜ್ಞ ಡಾ.ಪಿ.ಆರಡಿಮಲ್ಲಯ್ಯ ಕಟ್ಟೇರ ಅವರಿಗೆ ರೆ.ಎಫ್.ಕಿಟೆಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.