ಕನ್ನಡಪ್ರಭ ವಾರ್ತೆ ತಿಪಟೂರು
ತಾಲೂಕಿನ ಹಿಂಡಿಸ್ಕೆರೆ ರಸ್ತೆಯ ರೈಲ್ವೆ ಕ್ರಾಸಿಂಗ್ ಎಲ್‌ಸಿ ೮೧ರ ಬಳಿ ರೈಲ್ವೆ ಇಲಾಖೆ ೩೦.೬೦ಕೋಟಿ ರು.ಗಳ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ನಾನು ತುಮಕೂರು ಲೋಕಸಭಾ ಕ್ಷೇತ್ರದಿಂದ ಗೆದ್ದ ನನ್ನ ಮೇಲೆ ವಿಶ್ವಾಸವಿಟ್ಟು ಪ್ರಧಾನಿ ನರೇಂದ್ರ ಮೋದಿಯವರು ಎರಡು ಇಲಾಖೆಗಳ ಜವಾಬ್ದಾರಿಯನ್ನು ನನಗೆ ನೀಡಿದರು. ಅವರ ಮಾರ್ಗದರ್ಶನದಲ್ಲಿ ಉತ್ತಮ ಯೋಜನೆಗಳನ್ನು ರಾಜ್ಯಕ್ಕೆ ಹಾಗೂ ತುಮಕೂರು ಜಿಲ್ಲೆಗೆ ತರುತ್ತಿದ್ದೇನೆ. ತುಮಕೂರು ಜಿಲ್ಲೆಯಲ್ಲಿ ಒಂದೇ ಒಂದು ಲೆವೆಲ್ ಕ್ರಾಸಿಂಗ್ ಇಲ್ಲದಂತೆ ಮಾಡಲಾಗುವುದು ಎಂದರು.ತುಮಕೂರು ಜಿಲ್ಲೆಯಲ್ಲಿ ೧೫ರೈಲ್ವೆ ಮೇಲ್ಸೇತುವೆ ಹಾಗೂ ೧೫ ಕೆಳಸೇತುವೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದ್ದು ಅವುಗಳಲ್ಲಿ ಮುಂದಿನ ಮಾರ್ಚ್ ಒಳಗೆ ಬಹುತೇಕ ಕೆಲಸಗಳು ಮುಗಿಯಲಿದೆ. ಇಂದು ಎರಡು ಮೇಲ್ಸೇತುವೆಗೆ ಗುದ್ದಲಿಪೂಜೆ ನೆರವೇರಿಸಿದ್ದು ಒಂದೇ ಅವಧಿಯಲ್ಲಿ ಒಂದು ಜಿಲ್ಲೆಯಲ್ಲಿ ೩೧ ಸೇತುವೆಗಳನ್ನು ನಿರ್ಮಿಸುತ್ತಿರುವುದು ಭಾರತದಲ್ಲಿಯೇ ಒಂದು ದಾಖಲೆಯಾಗಿದೆ. ರೈಲ್ವೆ ಇಲಾಖೆಯ ಕವಚ್ ಯೋಜನೆಯನ್ನು ಪ್ರಾಯೋಗಿಕವಾಗಿ ತುಮಕೂರು ಅರಸೀಕೆರೆ ಮಾರ್ಗದಲ್ಲಿ ಜಾರಿಗೊಳಿಸಲಾಗಿದೆ. ಸೇತುವೆಗಳು ನೂರಾರು ವರ್ಷಗಳ ಕಾಲ ಉಳಿಯುವ ಶಾಶ್ವತವಾದ ಕೆಲಸ ಮಾಡುತ್ತಿದ್ದು, ಒಬ್ಬ ಸಂಸದ ಉತ್ತಮ ಕೆಲಸ ಮಾಡಿದರೆ ಮಾತ್ರ ಜನಮಾನಸದಲ್ಲಿ ಉಳಿಯಬಹುದು ಎಂದರು. ಇಡೀ ದೇಶದಲ್ಲಿ ರೈಲ್ವೆ ಇಲಾಖೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು ಅವುಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ತುಮಕೂರು ಜಿಲ್ಲೆ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಇದು ಜಿಲ್ಲೆಯ ಮತದಾರರು ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ನಾನು ನೀಡುತ್ತಿರುವ ಕೊಡುಗೆ ಎಂದ ಅವರು ಪ್ರಯಾಣಕ್ಕೆ ರೈಲ್ವೆ ಅತ್ಯಂತ ಸುರಕ್ಷಿತವಾದುದು. ಜನರು ತಮ್ಮ ಪ್ರಯಾಣಕ್ಕೆ ರೈಲನ್ನು ಹೆಚ್ಚು ಬಳಸಬೇಕು ಎಂದರು. ತುಮಕೂರು ಜಿಲ್ಲೆಯ ವಸಂತಸರಸಾಪುರ, ಹಿರೇಹಳ್ಳಿ, ಶಿರಾ ಭಾಗಕ್ಕೆ ಅನೇಕ ಉದ್ಯಮಗಳು, ಕಾರ್ಖಾನೆ, ಕೈಗಾರಿಕೆಗಳು ಬಂದಿವೆ. ಆದರೆ ತಿಪಟೂರಿಗೆ ಬಂದಿಲ್ಲ. ಈ ಬಗ್ಗೆ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿಯವರೊಂದಿಗೆ ಮಾತನಾಡಿದ್ದು ತಿಪಟೂರು ತಾಲೂಕಿಗೆ ಕೈಗಾರಿಕೆಗಳನ್ನು ತರಲು ಶ್ರಮಿಸಲಾಗುವುದು. ಭಾರತ ಸರಕಾರ ದೇಶದಾದ್ಯಂತ ರಾಷ್ಟ್ರೀಯ ಹೆದ್ದಾರಿ ಹಾಗೂ ರೈಲ್ವೆ ಯೋಜನೆಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದೆ. ಬೆಂಗಳೂರಿನಿಂದ ತುಮಕೂರಿಗೆ ೫೩೦೦ ಕೋಟಿ ರುಗಳ ವೆಚ್ಚದಲ್ಲಿ ಚತುಷ್ಪಥ ರೈಲು ಮಾರ್ಗ ಬರಲಿದೆ. ೪೩೦೦ ಕೋಟಿ ರೂಗಳ ವೆಚ್ಚದ ೨೬ಕಿಮೀ ಗ್ರೀನ್ ಕಾರಿಡಾರ್ ಯೋಜನೆ ಟೆಂಡರ್ ಹಂತದಲ್ಲಿದೆ. ಕೇಂದ್ರ ಸರಕಾರ ರಾಜ್ಯಕ್ಕೆ ೫೨ಸಾವಿರ ಕೋಟಿ ರು.ಗಳ ಯೋಜನೆಗಳನ್ನು ನೀಡಿದ್ದು ಅವುಗಳು ಮುಗಿಯುವ ಹಂತದಲ್ಲಿದೆ. ದೇಶದಲ್ಲಿಯೇ ಅತಿ ಹೆಚ್ಚು ಮೆಮೊ ರೈಲುಗಳು ಓಡಾಡುತ್ತಿರುವುದು ಕರ್ನಾಟಕದಲ್ಲಿ ಮಾತ್ರ ಎಂದರು. ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ಹುಚ್ಚಯ್ಯ, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ, ತಾಪಂ ಇಒ ಸುದರ್ಶನ್, ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಶಶಿಕಿರಣ್, ಪ್ರಸನ್ನಕುಮಾರ್, ಆಯರಹಳ್ಳಿ ಶಂಕರಪ್ಪ, ಕರಡಿ ದೇವರಾಜು, ಹರಿಸಮುದ್ರ ಗಂಗಾಧರ್, ಮಹೇಶ್, ನಾಗರಾಜಶಾಸ್ತ್ರೀ ಇನ್ನಿತರರು ಉಪಸ್ಥಿತರಿದ್ದರು.