ನುಂಗಲಾರದ ತುತ್ತಾದ ಬಂದರು ಯೋಜನೆ

KannadaprabhaNewsNetwork |  
Published : Aug 12, 2026, 03:00 AM IST
ಜನರ ಜೀವನೋಪಾಯದ ಮೆಲೆ ಹೊಡೆತ ಕೊಡುತ್ತಾ ಬಂದರು ಯೋಜನೆ ? | Kannada Prabha

ಸಾರಾಂಶ

ತಲೆಮಾರುಗಳಿಂದ ಇಲ್ಲಿನ ಮೀನುಗಾರರು ತಮ್ಮ ಬದುಕನ್ನು ಸಾಗಿಸುತ್ತಾ ಬಂದಿದ್ದಾರೆ. ಶರಾವತಿ ನದಿಯು ಇಲ್ಲಿನ ಜನರಿಗೆ ಕೇವಲ ಒಂದು ನೀರಿನ ಪ್ರದೇಶವಲ್ಲ, ಬದಲಾಗಿ ಜೀವನೋಪಾಯ ಮತ್ತು ಮುಂದಿನ ಪೀಳಿಗೆಯ ಭವಿಷ್ಯ ಎಂದೇ ಭಾವಿಸುತ್ತಾರೆ. ಆದರೆ ಇಂತಹ ಪ್ರದೇಶದ ಮೇಲೆ ಸರ್ಕಾರಗಳು ವಾಣಿಜ್ಯ ಬಂದರನ್ನು ನಿರ್ಮಿಸುವ ದೊಡ್ಡ ಯೋಜನೆ ಹಾಕಿಕೊಂಡು, ಕೆಲಸ ನಡೆಸುತ್ತಿರುವುದು ಜನರಿಗೆ ನುಂಗಲಾರದ ತುತ್ತಾಗಿದೆ.

ಸಾಂಪ್ರದಾಯಿಕ ಮೀನುಗಾರರ ಜೀವನೋಪಾಯ ರಕ್ಷಿಸಲು ಆಗ್ರಹ । ಸಣ್ಣ ಪ್ರಮಾಣದ ಮೀನುಗಾರರ ಆತಂಕಪ್ರಸಾದ್ ನಗರೆ

ಕನ್ನಡಪ್ರಭ ವಾರ್ತೆ ಹೊನ್ನಾವರ

ತಾಲೂಕಿನ ಕಾಸರಕೋಡಿನ ಟೊಂಕ ಭಾಗದ ಜನರ ದೈನಂದಿನ ಬದುಕು ಶರಾವತಿ ನದಿ, ಅಳಿವೆ ಹಾಗೂ ಅರಬ್ಬಿ ಸಮುದ್ರದೊಂದಿಗೆ ಬೆಸೆದುಕೊಂಡಿದೆ. ತಲೆಮಾರುಗಳಿಂದ ಇಲ್ಲಿನ ಮೀನುಗಾರರು ತಮ್ಮ ಬದುಕನ್ನು ಸಾಗಿಸುತ್ತಾ ಬಂದಿದ್ದಾರೆ. ಶರಾವತಿ ನದಿಯು ಇಲ್ಲಿನ ಜನರಿಗೆ ಕೇವಲ ಒಂದು ನೀರಿನ ಪ್ರದೇಶವಲ್ಲ, ಬದಲಾಗಿ ಜೀವನೋಪಾಯ ಮತ್ತು ಮುಂದಿನ ಪೀಳಿಗೆಯ ಭವಿಷ್ಯ ಎಂದೇ ಭಾವಿಸುತ್ತಾರೆ. ಆದರೆ ಇಂತಹ ಪ್ರದೇಶದ ಮೇಲೆ ಸರ್ಕಾರಗಳು ವಾಣಿಜ್ಯ ಬಂದರನ್ನು ನಿರ್ಮಿಸುವ ದೊಡ್ಡ ಯೋಜನೆ ಹಾಕಿಕೊಂಡು, ಕೆಲಸ ನಡೆಸುತ್ತಿರುವುದು ಜನರಿಗೆ ನುಂಗಲಾರದ ತುತ್ತಾಗಿದೆ.

ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿ ನಡೆಸುತ್ತಿರುವ ವಾಣಿಣ್ಯ ಬಂದರಿನ ಕೆಲಸದಿಂದ ಇಲ್ಲಿನ ನದಿ ಮತ್ತು ಸಮುದ್ರದಲ್ಲಿ ಬದಲಾವಣೆ ಉಂಟಾಗಿದೆ. ಕಾಮಗಾರಿಯ ಸಲುವಾಗಿ ನದಿ ಹಾಗೂ ಅಳಿವೆ ಪ್ರದೇಶದಲ್ಲಿ ಕಲ್ಲು ಹಾಗೂ ಇನ್ನಿತರ ಸಾಮಾಗ್ರಿ ತುಂಬಲಾಗುತ್ತಿದೆ. ಇದು ಸ್ಥಳೀಯ ಮೀನುಗಾರರ ಗಮನಕ್ಕೆ ಸಹ ಬಂದಿದ್ದು, ನೀರಿನ ನೈಸರ್ಗಿಕ ಹರಿವು ಹಾಗೂ ಮರಳಿನ ಸಾಗಣೆಯಲ್ಲಿ ಬದಲಾವಣೆ ಉಂಟಾಗುವ ಸಾಧ್ಯತೆ ಇದೆ. ಇದರಿಂದ ಮೀನುಗಳ ಸಂಚಾರ ಮತ್ತು ಸಂತಾನೋತ್ಪತ್ತಿಗೆ ತೊಡಕು ಆಗುತ್ತದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಬಂದರು ನಿರ್ಮಾಣ ಕಾರ್ಯಕ್ಕಾಗಿ ನದಿ ನೈಸರ್ಗಿಕ ಹರಿವನ್ನು ಬದಲಾಯಿಸುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಕಾರಣ ಸಣ್ಣ ಪ್ರಮಾಣದ ಮೀನುಗಾರರು ಇಂತಹ ಪ್ರದೇಶವನ್ನೇ ಅವಲಂಬಿಸಿದ್ದಾರೆ. ಈಗಾಗಲೇ ಸಣ್ಣ ಪ್ರಮಾಣದ ಮೀನುಗಾರರ ಬದುಕು ಕಷ್ಟದಲ್ಲಿದೆ. ಕಾಸರಕೋಡಿನ ಟೊಂಕ ಭಾಗದ ಮೀನುಗಾರರ ಬಳಿಯಲ್ಲಿ ದೊಡ್ಡ ದೋಣಿಗಳಿಲ್ಲ. ದೊಡ್ಡ ಮಟ್ಟದ ಬಂಡವಾಳವನ್ನು ಹಾಕುವ ಸಾಮರ್ಥ್ಯವೂ ಇಲ್ಲ. ಹೀಗಾಗಿ ಸಣ್ಣ ದೋಣಿ ಮತ್ತು ಬಲೆಯೇ ಜೀವನಕ್ಕೆ ಆಧಾರವಾಗಿದೆ.

ಕಚ್ಚಾ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರ:

ಬಂದರು ನಿರ್ಮಾಣಕ್ಕೆ ಸಂಬಂಧಿಸಿ ನಿರ್ಮಿಸಿರುವ ಕಚ್ಚಾ ರಸ್ತೆಯಲ್ಲಿ ಭಾರಿ ವಾಹನಗಳು ಸಂಚರಿಸುತ್ತಿವೆ. ಇದು ಸಹ ಜನರ ಮೇಲೆ ಪರಿಣಾಮ ಬೀರುತ್ತಿದೆ. ಧೂಳು, ಶಬ್ಧ ಜೊತೆ ಅಲ್ಲಿ ನಡೆಯುವ ಕಾಮಗಾರಿಗೆ ಬಳಸುವ ಯಂತ್ರಗಳಿಂದ ಮನೆಯಲ್ಲಿ ಕಂಪನ ಉಂಟಾಗುತ್ತಿದ್ದು, ಮನೆಯಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿದೆ. ಅಲ್ಲದೆ ಈ ಪರಿಸ್ಥಿತಿಯ ಬಗ್ಗೆ ತಾಂತ್ರಿಕವಾಗಿ ಪರಿಶೀಲನೆ ನಡೆಸಬೇಕು. ಹಾನಿಯಾಗಿರುವುದು ಧೃಡಪಟ್ಟಲ್ಲಿ ಪರಿಹಾರ ಒದಗಿಸಬೇಕು ಎಂದು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.ಕಾಸರಕೋಡಿನ ಜನರು ಅಭಿವೃದ್ಧಿಯ ವಿರೋಧಿಗಳಲ್ಲ. ಆದರೆ ನಮ್ಮ ಪೂರ್ವಜರಿಂದ ಬಂದಿರುವ ಕುಲ ಕಸುಬನ್ನು ಹಾಗೂ ಜೀವನೋಪಾಯವನ್ನು ಕಳೆದುಕೊಳ್ಳಲು ಸಿದ್ಧರಿಲ್ಲ. ಯಾವುದೇ ಕಾಮಗಾರಿಯನ್ನು ಕೈಗೊಳ್ಳುವ ಪೂರ್ವದಲ್ಲಿ ಸ್ಥಳೀಯ ಮೀನುಗಾರರು, ಇಲ್ಲಿನ ನಿವಾಸಿಗಳ ಜೊತೆ ನೇರವಾಗಿ ಸಮಾಲೋಚನೆ ನಡೆಸಬೇಕು. ನಮ್ಮ ಸಮಸ್ಯೆಯನ್ನು ಅಧಿಕಾರಿಗಳು ಸ್ಥಳಕ್ಕೆ ಬಂದು ನೋಡಿ ಅರ್ಥ ಮಾಡಿಕೊಳ್ಳಬೇಕು ಎನ್ನುತ್ತಾರೆ ಟೊಂಕ ನಿವಾಸಿ ಪಾರ್ವತಿ ತಾಂಡೆಲ್.ಶರಾವತಿ ನದಿ ಮತ್ತು ಅಳಿವೆಯನ್ನು ನಂಬಿಕೊಂಡು ಟೊಂಕ ಭಾಗದ ಸಣ್ಣ ಮೀನುಗಾರರು ಜೀವನವನ್ನು ನಡೆಸುತ್ತಿದ್ದಾರೆ. ಇಲ್ಲಿ ನಿರ್ಮಿಸುತ್ತಿರುವ ವಾಣಿಜ್ಯ ಬಂದರು ಯೋಜನೆಯಿಂದ ನದಿಯ ನೈಸರ್ಗಿಕ ಹರಿವಿಗೆ ಸಮಸ್ಯೆ ಆಗುತ್ತಿದೆ. ಇಲ್ಲಿನ ಸಾಂಪ್ರದಾಯಿಕ ಮೀನುಗಾರರ ಜೀವನೋಪಾಯವನ್ನು ರಕ್ಷಿಸಬೇಕು ಎಂದು ರಾಷ್ಟ್ರೀಯ ಸಣ್ಣ ಪ್ರಮಾಣದ ಮೀನುಗಾರರ ಒಕ್ಕೂಟದ (ಎನ್ಎಫ್ಎಸ್ಎಫ್) ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜು ದತ್ತಾ ತಾಂಡೆಲ್ ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಶಾಲನಗರ: ಪ್ರಬಂಧ, ಚಿತ್ರಕಲೆ ಸ್ಪರ್ಧೆ ಕಾರ್ಯಕ್ರಮ
(ಬಾಟಂ) ಮಹಿಳೆಯರ ಸಾಧನೆ ವಿಶ್ವಕ್ಕೆ ಪಸರಿಸಲಿ: ಹರಪನಹಳ್ಳಿ ರವೀಂದ್ರ