ಗದಗ: ಶಾಲೆಗೆ ರಜೆ ಇರುವ ಹಿನ್ನೆಲೆಯಲ್ಲಿ ವಿಜಯಪುರದ ಅಜ್ಜಿ ಮನೆಗೆ ತೆರಳಿದ್ದ ಗದಗ ನಗರದ ಅನಿಲ ದಹಿಂಡೆ ಅವರ ಎರಡು ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಮಕ್ಕಳ ಅಕಾಲಿಕ ಸಾವಿನ ಸುದ್ದಿ ಕೇವಲ ಕುಟುಂಬಸ್ಥರನ್ನು ಮಾತ್ರವಲ್ಲ, ಇಡೀ ಓಣಿಯ ಜನರೇ ಕಣ್ಣೀರು ಸುರಿಸುತ್ತಿದ್ದು ಆಕ್ರಂದನ ಮುಗಿಲು ಮುಟ್ಟಿದೆ.
ಗದಗ ನಗರದ ಕಂಬಾರ ಸಾಲಿನ ನಿವಾಸಿ ಅನಿಲ ದಹಿಂಡೆ ಹಾಗೂ ಭಾಗಶ್ರೀ ಮಕ್ಕಳಾದ ವಿಜಯ ಮತ್ತು ಅನುಷ್ಕಾ ಸೋಮವಾರ ವಿಜಯಪುರದಲ್ಲಿರುವ ಮಾವನ ಮನೆ ಮುಂದೆ ಬಂದಿದ್ದ ಒಂಟಿಯ ಮೇಲೆ ಕುಟುಂಬದವರೇ ಆಡಿಸಿದ್ದಾರೆ. ಆಟವಾಡಿ ಕೆಳಗಿಳಿದ ಮಕ್ಕಳು ಅಲ್ಲಿಯೇ ಇರುತ್ತಾರೆ ಎಂದು ಕುಟುಂಬಸ್ಥರು ತಮ್ಮ ಕೆಲಸದಲ್ಲಿ ತೊಡಗಿದ್ದಾರೆ. ಆದರೆ ಮುಂದೆ ಸಾಗಿದ ಒಂಟಿಯನ್ನು ನೋಡುತ್ತಾ ಹಾಗೆಯೇ ಹೋಗಿದ್ದಾರೆ. ಆದರೆ ಯಾವ ಕಾರಣಕ್ಕಾಗಿ ನೀರಿನ ಕಡೆ ಹೋಗಿದ್ದಾರೆ. ಅಲ್ಲಿ ಏನಾಗಿದೆ ಎನ್ನುವುದು ಮಾತ್ರ ನಿಗೂಢವಾಗಿದೆ. ಆದರೆ ಮಕ್ಕಳ ಸಾವಿನ ಸುದ್ದಿ ಖಚಿತವಾಗುತ್ತಿದ್ದಂತೆ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿತ್ತು.ಅನಿಲ ದಹಿಂಡೆ ಮತ್ತು ಭಾಗ್ಯಶ್ರೀ ಅವರಿಗೆ ಮೂರು ಜನ ಮಕ್ಕಳಿದ್ದು, ಇಬ್ಬರು ಹೆಣ್ಣು ಮಕ್ಕಳು, ಒರ್ವ ಗಂಡು ಮಗು, ದೊಡ್ಡ ಮಗಳು ಗದಗನಲ್ಲಿಯೇ ತಂದೆ ತಾಯಿಯೊಂದಿಗೆ ಇದ್ದಾಳೆ. ಕಳೆದ 20 ದಿನಗಳ ಹಿಂದೆ ಎರಡನೇ ಮಗಳು ಅನುಷ್ಕಾ ಮತ್ತು ಮಗ ವಿಜಯ ವಿಜಯಪುರದ ಅಜ್ಜಿ ಮನೆಗೆ ರಜೆಗಾಗಿ ತೆರಳಿದ್ದರು. ಅಜ್ಜಿ ಮನೆಗೆ ತೆರಳಿದ್ದ ಎರಡೂ ಮಕ್ಕಳು ಶಾಶ್ವತವಾಗಿ ಮರಳಿ ಬಾರದೂರಿಗೆ ಹೋಗಿದ್ದು ತಂದೆ ತಾಯಿ, ಅಜ್ಜ, ಅಜ್ಜಿ ಸೇರಿದಂತೆ ಸಂಬಂಧಿಕರಿಗೆ ದೊಡ್ಡ ಆಘಾತವನ್ನುಂಟು ಮಾಡಿದೆ.
ಹೆತ್ತ ಕುಡಿಗಳನ್ನು ಕಳೆದುಕೊಂಡಿರುವ ತಾಯಿ ಭಾಗ್ಯಶ್ರೀ ರೋಧನೆ, ಆಕ್ರಂದನ ಮುಗಿಲು ಮುಟ್ಟಿದ್ದು, ನೂರಾರು ಸಂಖ್ಯೆಯಲ್ಲಿ ಜಮಾವಣೆಗೊಂಡಿರುವ ಸಂಬಂಧಿಕರು, ಓಣಿಯ ಪ್ರಮುಖರು ಕುಟುಂಬದ ದುಃಖದಲ್ಲಿ ಭಾಗಿಯಾಗಿದ್ದರೂ ಕಳೆದುಕೊಂಡ ಮಕ್ಕಳನ್ನು ತಂದು ಕೊಡುವರೇ ಎನ್ನುವ ಪೋಷಕರ ರೋಧನೆ ಕರುಳು ಹಿಂಡುವಂತಿತ್ತು. ಕಣ್ಣೀರ ಕೋಡಿಯ ಮಧ್ಯೆ ಗದಗ ನಗರದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು.