ದುರ್ನಾತ ಬೀರುತ್ತಿದೆ ತಾಪಂ ಆವರಣದ ಮೂತ್ರಾಲಯ

KannadaprabhaNewsNetwork | Published : May 10, 2025 1:17 AM
Follow Us

ಸಾರಾಂಶ

ಕುಷ್ಟಗಿ ತಾಲೂಕು ಪಂಚಾಯಿತಿ ಆವರಣದಲ್ಲಿ ನಿರ್ಮಿಸಿರುವ ಎರಡು ಮೂತ್ರಾಲಯಗಳು ಸಮರ್ಪಕ ನಿರ್ವಹಣೆ ಕೊರೆತೆ ಇಲ್ಲದೆ ನಲುಗಿವೆ. ಕಚೇರಿಗೆ ಆಗಮಿಸುವ ಸಾವಿರಾರು ಜನರು ತಮ್ಮ ದೇಹಬಾಧೆ ತೀರಿಸಿಕೊಳ್ಳಲು ಬಯಲನ್ನೇ ಆಶ್ರಯಿಸಬೇಕಾಗಿದೆ.

ಪರಶಿವಮೂರ್ತಿ ದೋಟಿಹಾಳ

ಕುಷ್ಟಗಿ:

ನಿತ್ಯ ಸಾವಿರಾರು ಜನರು ಬರುವ, ಸ್ವಚ್ಛತೆ ಬಗ್ಗೆ ಜನರಿಗೆ ಅರಿವು ಮೂಡಿಸಬೇಕಾಗಿದ್ದು ತಾಲೂಕು ಪಂಚಾಯಿತಿ ಆವರಣವೇ ದುರ್ನಾತ ಬೀರುತ್ತಿದೆ. ದೀಪದ ಬುಡದಲ್ಲಿ ಕತ್ತಲು ಎಂಬಂತೆ ತಾಲೂಕು ಪಂಚಾಯಿತಿ ಆವರಣವೇ ಹೀಗಾದರೆ ಪಟ್ಟಣದ ಗತಿಯೇನು ಎಂದು ಪ್ರಜ್ಞಾವಂತರು ಪ್ರಶ್ನಿಸುತ್ತಿದ್ದಾರೆ.

ಹೌದು. ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ನಿರ್ಮಿಸಿರುವ ಎರಡು ಮೂತ್ರಾಲಯಗಳು ಸಮರ್ಪಕ ನಿರ್ವಹಣೆ ಕೊರೆತೆ ಇಲ್ಲದೆ ನಲುಗಿವೆ. ಕಚೇರಿಗೆ ಆಗಮಿಸುವ ಸಾವಿರಾರು ಜನರು ತಮ್ಮ ದೇಹಬಾಧೆ ತೀರಿಸಿಕೊಳ್ಳಲು ಬಯಲನ್ನೇ ಆಶ್ರಯಿಸಬೇಕಾಗಿದೆ.

36 ಗ್ರಾಮ ಪಂಚಾಯಿತಿ:

ಕುಷ್ಟಗಿ ತಾಲೂಕು ಪಂಚಾಯಿತಿ ವ್ಯಾಪ್ತಿಗೆ 36 ಗ್ರಾಮ ಪಂಚಾಯಿತಿಗಳು ಬರುತ್ತಿವೆ. ಹೀಗಾಗಿ ಕಚೇರಿ ಕೆಲಸ ನಿಮಿತ್ತ ಬರುವ ಜನರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಎರಡು ಮೂತ್ರಾಲಯ ನಿರ್ಮಿಸಿಲಾಗಿದೆ. ಆದರೆ, ಅದಕ್ಕೆ ಅಗತ್ಯ ಸೌಲಭ್ಯಗಳನ್ನು ಒದಗಿಸಿಲ್ಲ. ಇದು ಅಧಿಕಾರಿಗಳ ಕಾರ್ಯವೈಖರಿಯನ್ನು ಸಾರಿ ಹೇಳುತ್ತಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ನೀರಿಲ್ಲದ ಮೂತ್ರಾಲಯ:

ಮೂತ್ರಾಲಯಗಳಿಗೆ ನೀರಿನ ಸಂಪರ್ಕವೇ ಇಲ್ಲ. ನೀರಿಲ್ಲದೆ ಅನೈರ್ಮಲ್ಯ ವಾತಾವರಣ ಉಂಟಾಗಿ ಕಾರ್ಯಾಲಯಕ್ಕೆ ಬರುವ ಜನರು ಮೂಗು ಮುಚ್ಚಿಕೊಂಡು ಬರುತ್ತಿದ್ದಾರೆ. 177ಕ್ಕೂ ಅಧಿಕ ಹಳ್ಳಿಗಳ ಜನರು ಇಲ್ಲಿಗೆ ಬರುತ್ತಿದ್ದು ಈ ಕಾರ್ಯಾಲಯವೂ ಜನಜಂಗುಳಿಯಿಂದ ಕೂಡಿರುತ್ತದೆ. ಇವರಿಗೆ ತಮ್ಮ ದೇಹಬಾಧೆ ತೀರಿಸಿಕೊಳ್ಳಲು ಸಹ ಒಂದು ಸುಸಜ್ಜಿತ ಮೂತ್ರಾಲಯದ ವ್ಯವಸ್ಥೆ ಇಲ್ಲದೆ ಬಯಲಿನಲ್ಲಿಯೇ ತಮ್ಮ ದೇಹಬಾಧೆ ತೀರಿಸಿಕೊಳ್ಳುತ್ತಿದ್ದಾರೆ.

ಕಾಟಾಚಾರಕ್ಕೆ ನಿರ್ಮಿಸಿರುವ ಸಾರ್ವಜನಿಕರ ಶೌಚಾಲಯಕ್ಕೆ ನೀರಿನ ಸಂಪರ್ಕವಿಲ್ಲ, ಬಾಗಿಲು ಇಲ್ಲ. ನಿರ್ವಹಣೆ ಮಾಡದೆ ಇರುವುದರಿಂದ ಜನರ ಬಳಕೆಗೆ ಯೋಗ್ಯವಾಗಿಲ್ಲ. ಅಧಿಕಾರಿಗಳು ಸಂಪೂರ್ಣವಾಗಿ ನಿರ್ಲಕ್ಷತನ ತೋರಿದ್ದಾರೆ. ಕೂಡಲೇ ಮೂತ್ರಾಲಯದ ನಿರ್ವಹಣೆಗೆ ಸೂಕ್ತ ಕ್ರಮಕೈಗೊಳ್ಳಬೇಕಿದ್ದು ನೈರ್ಮಲ್ಯ ಕಾಪಾಡಿದರೆ ಜನರಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ಸಾರ್ವಜನಿಕರು.ತಾಲೂಕು ಪಂಚಾಯಿತಿಯಲ್ಲಿರುವ ಸಾರ್ವಜನಿಕ ಮೂತ್ರಾಲಯ ಹಾಗೂ ಶೌಚಾಲಯದ ಕುರಿತು ಇಒ ಅವರ ಗಮನಕ್ಕೆ ತರುವ ಮೂಲಕ ಮುಂದಿನ ಕ್ರಮಕೈಗೊಳ್ಳಲಾಗುವುದು.

ಶಾಂತವೀರಯ್ಯ ಹಿರೇಮಠ ವ್ಯವಸ್ಥಾಪಕರು ತಾಪಂತಾಲೂಕು ಪಂಚಾಯಿತಿ 36 ಗ್ರಾಪಂ ಮೇಲೆ ಆಡಳಿತ ಮಾಡುತ್ತಿದೆ. ಆದರೆ, ತಮ್ಮ ಕಾರ್ಯಾಲಯಕ್ಕೆ ಬರುವ ಸಾರ್ವಜನಿಕರಿಗೆ ಸಮರ್ಪಕವಾದ ಮೂತ್ರಾಲಯ, ಶೌಚಾಲಯ ಇಲ್ಲ. ಕೂಡಲೆ ಅಧಿಕಾರಿಗಳು ಮೂತ್ರಾಲಯಕ್ಕೆ ಮೂಲಭೂತ ಸೌಲಭ್ಯ ಒದಗಿಸಬೇಕು.ಬಸವರಾಜ ಕಡಿವಾಲ ಕೇಸೂರು ಗ್ರಾಮಸ್ಥತಾಲೂಕು ಪಂಚಾಯಿತಿಗೆ ವೈಯಕ್ತಿಕ ಕೆಲಸಕ್ಕೆ ಬಂದಾಗ ಮೂತ್ರ ವಿಸರ್ಜನೆಗೆ ಪರದಾಡಬೇಕಾಗಿದ್ದು ಅಧಿಕಾರಿಗಳು ಸ್ಥಾಪನೆಗೆ ಮುಂದಾಗಬೇಕಿದೆ.

ಹೆಸರೇಳಲಿಚ್ಚಿದ ಮಹಿಳೆ.