ಬಾಲಕಾರ್ಮಿಕರ ಬಳಕೆ ಶಿಕ್ಷಾರ್ಹ ಅಪರಾಧ-ಜಯದೇವಿ ಕವಲೂರು

KannadaprabhaNewsNetwork | Published : Apr 9, 2025 12:31 AM

ಸಾರಾಂಶ

ಯಾವುದೇ ಉದ್ಯಮಗಳಲ್ಲಿ ಬಾಲ ಕಾರ್ಮಿಕರನ್ನು ಬಳಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ. ಈ ಕೃತ್ಯಕ್ಕೆ ದಂಡ ಹಾಗೂ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಬಾಲ ಕಾರ್ಮಿಕರು ಕೆಲಸ ಮಾಡುತ್ತಿದ್ದರೆ ಅವರನ್ನು ಗುರುತಿಸಿ ಶಾಲೆಗೆ ದಾಖಲಿಸಬೇಕು ಎಂದು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಜಯದೇವಿ ಕವಲೂರು ಪಾಲಕರಿಗೆ ತಿಳಿವಳಿಕೆ ನೀಡಿದರು.

ಶಿರಹಟ್ಟಿ:ಯಾವುದೇ ಉದ್ಯಮಗಳಲ್ಲಿ ಬಾಲ ಕಾರ್ಮಿಕರನ್ನು ಬಳಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ. ಈ ಕೃತ್ಯಕ್ಕೆ ದಂಡ ಹಾಗೂ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಬಾಲ ಕಾರ್ಮಿಕರು ಕೆಲಸ ಮಾಡುತ್ತಿದ್ದರೆ ಅವರನ್ನು ಗುರುತಿಸಿ ಶಾಲೆಗೆ ದಾಖಲಿಸಬೇಕು ಎಂದು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಜಯದೇವಿ ಕವಲೂರು ಪಾಲಕರಿಗೆ ತಿಳಿವಳಿಕೆ ನೀಡಿದರು. ಭಾನುವಾರ ಪಟ್ಟಣದಲ್ಲಿ ಮಕ್ಕಳ ಕಲ್ಯಾಣ ಸಮಿತಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ ಸಹಯೊಗದಲ್ಲಿ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ ೧೮ ವರ್ಷದೊಳಗಿನ ಮಕ್ಕಳನ್ನು ಗುರುತಿಸಿ ಕಾರ್ಯಾಚರಣೆ ಮಾಡಿ ೧೮ ಮಕ್ಕಳನ್ನು ರಕ್ಷಿಸಿ ನಂತರ ಸರಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಲ್ಲಿ ಪಾಲಕರ ಸಭೆ ನಡೆಸಿ ತಿಳಿವಳಿಕೆ ನೀಡಿ ಮಾತನಾಡಿದರು.

ಬಡತನ, ಅನಕ್ಷರತೆ ಹಾಗೂ ಪೋಷಕರ ಆರ್ಥಿಕ ದುಸ್ಥಿತಿಯಿಂದ ಮಕ್ಕಳು ಬಾಲಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸಲು ಸಾರ್ವಜನಿಕರು, ವಿವಿಧ ಇಲಾಖೆಗಳು ಸೇರಿದಂತೆ ಎಲ್ಲರ ಸಹಕಾರ ಅಗತ್ಯವಾಗಿದೆ. ೧೮ ವರ್ಷದ ಒಳಗಿನ ಮಕ್ಕಳೆಲ್ಲರು ಮುಖ್ಯವಾಹಿನಿಯಲ್ಲಿರುವಂತೆ ನೋಡಿಕೊಳ್ಳಲು ಪೋಷಕರಿಗೆ ತಿಳಿವಳಿಕೆ ಹೇಳಿದರು. ಮಕ್ಕಳು ಶಾಲಾ ಅವಧಿಯಲ್ಲಿ ಶಾಲೆಯಿಂದ ಹೊರಗುಳಿದರೆ, ಯಾವುದೇ ಕೆಲಸ ಮಾಡುತ್ತಿದ್ದರೆ ಅದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ ಎಂಬುದನ್ನು ಮನವರಿಕೆ ಮಾಡಿದರು.

ಮಕ್ಕಳು ಬೆಳೆಯುವ ಪರಿಸರ ಉತ್ತಮವಾಗಿದ್ದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗಲಿದೆ. ಮಕ್ಕಳ ಪರಿಸ್ಥಿತಿ ಉತ್ತಮವಾಗಿದ್ದರೆ ದೇಶ ಕೂಡ ಅಭಿವೃದ್ಧಿ ಹೊಂದಲು ಸಾಧ್ಯ. ಬಾಲ್ಯವೆಂದರೆ ಬದುಕಿನ ಸುಂದರ ಕ್ಷಣಗಳನ್ನು ಅನುಭವಿಸುವ ವಯಸ್ಸು. ಜಗತ್ತು ಏನೆಂಬುದನ್ನು ಅರ್ಥಮಾಡಿಕೊಳ್ಳಲಾಗದ ಆ ದಿನಗಳು ಎಲ್ಲರಿಗೂ ಸುಂದರ. ಆದರೆ ಮಕ್ಕಳನ್ನು ದೇವರಂತೆ ಪೂಜಿಸುವ ವಯಸ್ಸಿನಲ್ಲಿ ಹಲವಾರು ಕಾರಣಗಳಿಂದ ಹಾಗೂ ಸಮಸ್ಯೆಗಳಿಂದ ಬಾಲ ಕಾರ್ಮಿಕರಾಗಿ ದುಡಿಮೆಗೆ ತಳ್ಳುವುದು ಅಪರಾಧವಾಗಿದೆ ಎಂದರು. ಬಾಲಕಾರ್ಮಿಕ ಪದ್ಧತಿಯನ್ನು ಅಳಿಸಿ ಮಕ್ಕಳನ್ನು ಶಾಲೆಗೆ ಕಳುಹಿಸಿ, ಶಿಕ್ಷಣವಂತರನ್ನಾಗಿ ಮಾಡುವುದರ ಕುರಿತು ಎಲ್ಲ ಪಾಲಕರು ತಿಳಿದುಕೊಳ್ಳಬೇಕು. ದುಡಿಮೆ ಬೇಡ, ಶಿಕ್ಷಣ ಬೇಕು ಎಂಬ ವಾಕ್ಯದ ಕುರಿತು ಎಲ್ಲರೂ ಅರಿಯಬೇಕು. ಮನೆಯಲ್ಲಿ ಆಡಿಕೊಂಡು ಶಿಕ್ಷಣ ಆರಂಭ ಮಾಡುವ ಬದಲು ದುಡಿಮೆಗೆ ತಳ್ಳುವುದನ್ನು ಪೋಷಕರು ಬಿಡಿಸಬೇಕು. ಮಕ್ಕಳಿಗೆ ಮೊದಲು ಶಿಕ್ಷಣ ಕೊಡಿಸಲು ಮುಂದಾಗಬೇಕು ಎಂದು ಕರೆ ನೀಡಿದರು. ಎಷ್ಟೋ ಜನ ಬಾಲಕಾರ್ಮಿಕ ಮಕ್ಕಳು ತಮ್ಮ ಶಿಕ್ಷಣದ ಹಕ್ಕು, ಆರೋಗ್ಯ ಮತ್ತು ಮೂಲಭೂತ ಸ್ವಾತಂತ್ರ್ಯ ಪಡೆಯುವಲ್ಲಿ ವಂಚಿತರಾಗಿ ಕೆಲಸದಲ್ಲಿ ತೊಡಗಿಕೊಂಡಿರುವುದು ಗಮನಕ್ಕಿದೆ. ಈ ಎಲ್ಲ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಬಲಿಯಾಗುತ್ತಿದ್ದಾರೆ. ಅಪಾಯಕಾರಿ ಪರಿಸರದಲ್ಲಿ ಕೆಲಸ, ಗುಲಾಮಗಿರಿ ಅಥವಾ ಬಲವಂತವಾಗಿ ಕೆಲಸ ಮಾಡುತ್ತಾರೆ. ಇವರಿಗೆ ಶಿಕ್ಷಣ ನೀಡಿ ಸಮಾಜದ ಮುಖ್ಯ ವಾಹಿನಿಗೆ ತರಲು ಪ್ರಯತ್ನಿಸಬೇಕು ಎಂದು ಹೇಳಿದರು. ಕಾರ್ಯಾಚರಣೆಯಲ್ಲಿ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಬಸವರಾಜ ಸಂಶಿ, ಸುವಣ೯ ಬ್ಯಾಹಟ್ಟಿ, ಸಮಾಲೋಚಕರಾದ ಪ್ರಕಾಶ್ ಗಾಣಿಗೇರ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಾದ ರೂಪಾ ಉಪ್ಪಿನ, ಮಲ್ಲಪ್ಪ ಫ ಹೊಸಳ್ಳಿ, ಕಾರ್ಮಿಕ ನಿರೀಕ್ಷಕರಾದ ಅಭಿನಂದನ ಖವಟಕೊಪ್ಪ, ಮಹ್ಮದ ಮುಸ್ತಾಪ, ಮಕ್ಕಳ ಸಹಾಯವಾಣಿ ಸಿಬ್ಬಂದಿ ಅಲ್ತಾಫ್, ಕಲಾವತಿ ಹಡಪದ ಹಾಗೂ ಶಶಿಧರ ಮಠಪತಿ ಪಾಲ್ಗೊಂಡಿದ್ದರು.

Share this article