ಹುಬ್ಬಳ್ಳಿ: ಉಪ ಚುನಾವಣೆಯಲ್ಲಿ ಬಹುತೇಕ ಜನರು ಆಡಳಿತ ಪಕ್ಷದ ಪರವಾಗಿಯೇ ಇರುತ್ತಾರೆ. ಸಚಿವರು, ಶಾಸಕರು, ಸಂಪನ್ಮೂಲ ಹೇರಳವಾಗಿ ಬಳಕೆಯಾಗುತ್ತದೆ. ಜನರ ಈ ತೀರ್ಪನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದು ಮಾಜಿ ಸಚಿವ ಸಿ.ಸಿ. ಪಾಟೀಲ ಹೇಳಿದರು.
ಕ್ಷೇತ್ರದ ಹಣೆಬರಹವೂ ಇರುತ್ತದೆ. ಇವರಿಂದ ಕ್ಷೇತ್ರದ ಪುಣ್ಯ ಹೆಚ್ಚಾಗಿದೆ ಎಂದು ಭಾವಿಸಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿರಬಹುದು. ಜನರ ತೀರ್ಪನ್ನು ನಾವು ತಲೆಬಾಗಿ ಸ್ವೀಕರಿಸಬೇಕಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಜನತೆಯೇ ಜನಾರ್ದನ ಎಂದು ನಂಬಿದ್ದೇವೆ. ನಾವು ಹಿಂದೆ 17 ಜನ ಶಾಸಕರನ್ನು ರಾಜೀನಾಮೆ ಕೊಡಿಸಿ 13 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದೆವು. ಯಾವುದೇ ಚುನಾವಣೆಯನ್ನು ಯಾವುದೇ ರಾಜಕಾರಣಿ ನಿರ್ಲಕ್ಷ್ಯ ಮಾಡುವುದಿಲ್ಲ. ಕೆಲವು ಸಾರಿ ನಾವು ತಪ್ಪು ಮಾಡದಿದ್ದರೂ ಸೋಲುತ್ತೇವೆ. ಕೆಲವರು ತಪ್ಪು ಮಾಡಿದರೂ ಗೆಲ್ಲುತ್ತಾರೆ. ತೀರ್ಪನ್ನು ಒಪ್ಪಿಕೊಳ್ಳಬೇಕು. ಒಪ್ಪಿಕೊಂಡಿದ್ದೇವೆ ಎಂದರು.
ಇನ್ನು ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿಕೂಟಕ್ಕೆ ದೊಡ್ಡ ಪ್ರಮಾಣದ ಜನ ಬೆಂಬಲ ದೊರೆತಿದೆ. ದೇಶದ ಜನರು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ ಒಪ್ಪಿಕೊಂಡಿದ್ದಾರೆ ಎನ್ನುವುದಕ್ಕೆ ಇದುವೇ ಸಾಕ್ಷಿ ಎಂದರು.ಚುನಾವಣೆಗೂ ವಕ್ಫ್ ಹೋರಾಟಕ್ಕೂ ಸಂಬಂಧವಿಲ್ಲ: ಜೋಶಿಹುಬ್ಬಳ್ಳಿ:
ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಜನ ತಮ್ಮ ಪರವಾಗಿದ್ದಾರೆ ಎಂದು ಭಾವಿಸಿ ಕಾಂಗ್ರೆಸ್ ಸರ್ಕಾರ ಮತ್ತೆ ವಕ್ಫ್ ಮುನ್ನಲೆಗೆ ತಂದರೆ ಮುಂದೆ ಜನರೇ ಇವರಿಗೆ ಬುದ್ಧಿ ಕಲಿಸಲಿದ್ದಾರೆ. ಕಾಂಗ್ರೆಸ್ ಸರ್ಕಾರ ಮುಂದೆ ಮತ್ತೆ ವಕ್ಫ್ ಆಸ್ತಿ ಮಾಡಲು ಉದ್ದೇಶಿಸಿದೆ. ಆದರೆ, ಯಾವುದೇ ಕಾರಣಕ್ಕೂ ಬಿಜೆಪಿ ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದರು.
ವಕ್ಫ್ ವಿಷಯದಲ್ಲಿ ಅನ್ಯಾಯ ನಡೆಯುತ್ತಲೇ ಇದೆ. ಈಗೇನೋ ಮೂರು ಕ್ಷೇತ್ರಗಳನ್ನು ಗೆದ್ದಿರಬಹುದು. ಆದರೆ, ಯಾವತ್ತೂ ಇದೇ ಪ್ರಭಾವ ಇರುತ್ತದೆ ಎಂದಲ್ಲ. ವಕ್ಫ್ ವಿಚಾರದಲ್ಲಿ ಹುಚ್ಚುತನ ಮಾಡುವುದನ್ನು ಕಾಂಗ್ರೆಸ್ಸಿಗರು ಬಂದ್ ಮಾಡಲಿ ಎಂದು ಸಚಿವ ಪ್ರಹ್ಲಾದ ಜೋಶಿ ಕಿವಿಮಾತು ಹೇಳಿದರು.