ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ವಚನವಂದನಾ, ಗುರುವಂದನಾ ಕಾರ್ಯಕ್ರಮ

KannadaprabhaNewsNetwork |  
Published : Dec 29, 2025, 02:45 AM IST
28ಎಚ್‌ವಿಆರ್1 ಹಾವೇರಿ: ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಐತಿಹಾಸಿಕ ವಚನ ವಂದನಾ ಗುರುವಂದನಾ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ಗಣ್ಯರು ರಾಷ್ಟçಗೀತೆ ಹೇಳಿದರು. 28ಎಚ್‌ವಿಆರ್1ಎ ಹಾವೇರಿ: ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಐತಿಹಾಸಿಕ ವಚನ ವಂದನಾ ಗುರುವಂದನಾ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಶರಣ, ಶರಣೆಯರು ಪಾಲ್ಗೊಂಡಿದ್ದರು.  | Kannada Prabha

ಸಾರಾಂಶ

ಹಾವೇರಿ ನಗರದ ಹುಕ್ಕೇರಿಮಠ ಜಾತ್ರಾ ಮಹೋತ್ಸವ ಅಂಗವಾಗಿ ಸ್ಥಳೀಯ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 51 ಸಾವಿರ ಶರಣ ಶರಣೆಯರಿಂದ ವಚನವಂದನಾ, ಗುರುವಂದನಾ ಕಾರ್ಯಕ್ರಮ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು.

ಹಾವೇರಿ: ನಗರದ ಹುಕ್ಕೇರಿಮಠ ಜಾತ್ರಾ ಮಹೋತ್ಸವ ಅಂಗವಾಗಿ ಸ್ಥಳೀಯ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 51 ಸಾವಿರ ಶರಣ ಶರಣೆಯರಿಂದ ವಚನವಂದನಾ, ಗುರುವಂದನಾ ಕಾರ್ಯಕ್ರಮ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು.ಶೇಗುಣಸಿ ವಿರಕ್ತಮಠದ ಡಾ. ಮಹಾಂತಪ್ರಭು ಸ್ವಾಮೀಜಿ ಅವರು ಭಕ್ತಿಭಂಡಾರಿ ವಿಶ್ವಗುರು ಬಸವೇಶ್ವರರು, ಅಲ್ಲಮಪ್ರಭು, ಅಕ್ಕಮಹಾದೇವಿ ಸೇರಿದಂತೆ ವಿವಿಧ ವಚನಕಾರರ ಹನ್ನೊಂದು ವಚನಗಳನ್ನು ಸಾಮೂಹಿಕವಾಗಿ ಏಕಕಂಠದಿಂದ ಹೇಳಿಸುವ ಮೂಲಕ ವಚನವಂದನಾ, ಗುರುವಂದನಾ ಕಾರ್ಯಕ್ರಮ ನಡೆಸಿಕೊಟ್ಟರು. ಇದಕ್ಕೂ ಮೊದಲು ವಿಶೇಷ ಹೆಲಿಕಾಪ್ಟರ್ ಮೂಲಕ ಕ್ರೀಡಾಂಗಣದಲ್ಲಿ ನೆರೆದಿದ್ದ ಅಸಂಖ್ಯಾತ ಶರಣ, ಶರಣೆಯರಿಗೆ ಪುಷ್ಪವೃಷ್ಟಿ ಸುರಿಸಲಾಯಿತು. ಈ ವೇಳೆ ಜಯಘೋಷಣೆಗಳು ಮೊಳಗಿದವು.ಗೌರಿಗದ್ದೆಯ ವಿನಯ ಗುರೂಜಿ ಮಾತನಾಡಿ, ಸದಾಶಿವ ಸ್ವಾಮೀಜಿ ವಚನವಂದನಾ ನಡೆಸುವ ಮೂಲಕ ಹಾವೇರಿ ನಗರವನ್ನು ಅನುಭವ ಮಂಟಪ, ಬಸವ ಕಲ್ಯಾಣ, ಅಯೋಧ್ಯ ಕಲ್ಯಾಣವನ್ನಾಗಿ ಮಾಡಿದ್ದಾರೆ. ಹೆಣ್ತನಕ್ಕೆ ಸೃಷ್ಟಿಯನ್ನು ಬದಲಾವಣೆ ಮಾಡುವ ತಾಕತ್ತು ಇದೆ. ಮಗಳಾಗಿ, ತಾಯಿಯಾಗಿ, ಅಜ್ಜಿ, ಚಿಕ್ಕಮ್ಮ ಹೀಗೆ ವಿವಿಧ ಸ್ತರದಲ್ಲಿ ಜವಾಬ್ದಾರಿಯ ಸ್ಥಾನ ಹೊಂದಿರುತ್ತಾಳೆ. ಇಂದು ಶ್ರೀ ಮಠವು ದೇಶಭಕ್ತಿಯನ್ನು ಮೂಡಿಸುವಲ್ಲಿ ಮುಂದಾಗಿದೆ. ಹಾವೇರಿಯನ್ನು ಜ್ಞಾನದ ಕಾವೇರಿಯನ್ನಾಗಿ ಸದಾಶಿವ ಸ್ವಾಮೀಜಿ ಮಾಡುತ್ತಿದ್ದಾರೆ. ಕಾರ್ಯಕ್ರಮ ಶಿಸ್ತು, ಮಾನವತತ್ವ, ವಾಸ್ತವತೆಯನ್ನು ಕಲಿಸಿಕೊಟ್ಟಿದೆ. ವಚನವನ್ನು ಇಡೀ ಜಗತ್ತು ಪ್ರೀತಿಸುತ್ತದೆ. ವಚನಕ್ಕೆ ಧರ್ಮ ಇಲ್ಲ. ವಚನವನ್ನು ಒಂದು ದಿನಕ್ಕೆ ಸೀಮಿತವಾಗದೆ ಜೀವನದುದ್ದಕ್ಕೂ ಅಳವಡಿಸಿಕೊಂಡು ಮುನ್ನಡೆಯಬೇಕು. ತಾಯಂದಿರು ಕೂಡ ಮನೆಯಲ್ಲಿ ಮಕ್ಕಳಿಗೆ ವಚನ ಕಲಿಸಿಕೊಟ್ಟರೆ, ಮುಂದೊಂದು ದಿನ ಸಮಾಜದ ಸ್ವಾಸ್ಥ್ಯ ಕಾಪಾಡುವ ಶಕ್ತಿ ಇದೆ ಎಂದರು.ಗದಗ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ಹಾವೇರಿ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ವಿಶೇಷ ಕಾರ್ಯಕ್ರಮವಾಗಿದೆ. ಲಿಂ.ಶಿವಬಸವ ಸ್ವಾಮೀಜಿ, ಲಿಂ.ಶಿವಲಿಂಗ ಸ್ವಾಮೀಜಿ ಕಾಮಧೇನು, ಚೈತನ್ಯ ಮೂರ್ತಿಯಾಗಿ ಇಂದಿಗೂ ಕಂಗೊಳಿಸುತ್ತಿದ್ದಾರೆ. ಸದಾಶಿವ ಸ್ವಾಮೀಜಿ ಕಿರಿದಾದ ವಯಸ್ಸಿನಲ್ಲಿ ಹಿರಿದಾದ ಸಾಧನೆ ಮಾಡಿದ್ದಾರೆ. ಯುವ ಯತಿಗಳಿಗೆ ಮಾದರಿಯಾಗಿದ್ದಾರೆ. ಜನರ ಕಷ್ಟಗಳ ಜತೆಗೆ ಭಾಗಿಯಾಗಿ ಜನಾನುರಾಗಿದ್ದಾರೆ. ತನು,ಮನ, ಧನಗಳಿಂದ ಗುರುಲಿಂಗ ಜಂಗಮ ಸೇವೆ ಮಾಡುವುದಕ್ಕೆ ತ್ರಿವಿಧ ದಾಸೋಹಿ ಅಂತಾರೆ. ಗುರುಗಳಿಗೆ ಬೆಳ್ಳಿ ತುಲಾಭಾರ ನಡೆಸುತ್ತಿರುವ ಭಕ್ತರು ಸಲ್ಲಿಸುತ್ತಿರುವುದು ವಿಶೇಷ ಭಕ್ತಿ ವೈಶಿಷ್ಟ್ಯ ಪೂರ್ಣವಾದುದು. ಇಂತಹ ಶ್ರೀಗಳನ್ನು ಪಡೆದ ಭಕ್ತರು ಧನ್ಯರು ಎಂದರು.ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಡಾ. ಗುರುಸಿದ್ದರಾಜ ಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ಶಿವಮೊಗ್ಗದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಶ್ರೀಗಳು, ಅಭಿನವ ಸಿದ್ಧಾರೂಢ ಸ್ವಾಮೀಜಿ, ಡಾ.ಅಲ್ಲಮಪ್ರಭು ಸ್ವಾಮೀಜಿ, ಅಭಿನವ ಮೃತ್ಯುಂಜಯ ಸ್ವಾಮೀಜಿ, ಬಸವಶಾಂತಲಿಂಗ ಸ್ವಾಮೀಜಿ, ಬಸವರಾಜ ಬೊಮ್ಮಾಯಿ, ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣವರ, ಡಾ. ಪ್ರಭಾಕರ ಕೋರೆ, ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಎಸ್‌ಪಿ ಯಶೋದಾ ವಂಟಗೋಡಿ, ಸುರೇಶ ಜಂಗಮಶೆಟ್ಟಿ, ಟಿ.ಎಂ ಭಾಸ್ಕರ, ಎಸ್. ಎಫ್.ಎನ್ ಗಾಜಿಗೌಡ್ರ, ನೆಹರು ಓಲೇಕಾರ, ಶಿವರಾಜ ಸಜ್ಜನರ, ಸಂಜೀವಕುಮಾರ ನೀರಲಗಿ, ಎಂ.ಎಸ್. ಕೋರಿಶೆಟ್ಟರ, ಕೊಟ್ರೇಶಪ್ಪ ಬಸೇಗಣ್ಣಿ, ರಾಜಶೇಖರ ಮಾಗನೂರು ಸೇರಿದಂತೆ ವಿವಿಧ ಮಠಾಧೀಶರು, ಅನೇಕರು ಗಣ್ಯರು ಇದ್ದರು. ನಿವೃತ್ತ ಶಿಕ್ಷಕ ಬಿ.ಬಸವರಾಜ ಸ್ವಾಗತಿಸಿದರು. ನಾಗರಾಜ ನಡುವಿನಮಠ ನಿರೂಪಿಸಿದರು. ಬಸವಾದಿ ಪ್ರಮಥರ 11 ವಚನಗಳ ಬೋಧನೆ: ಜಿಲ್ಲಾ ಕ್ರೀಡಾಂಗಣದಲ್ಲಿ ವಚನವಂದಾನಾ, ಗುರುವಂದನಾ ಕಾರ್ಯಕ್ರಮದ ಅಂಗವಾಗಿ ಸೇರಿದ್ದ ಸಹಸ್ರಾರು ಶರಣ, ಶರಣೆಯರಿಗೆ ಶೇಗುಣಸಿಯ ಡಾ. ಮಹಾಂತಪ್ರಭು ಮಹಾಸ್ವಾಮೀಜಿ ಬಸವಾದಿ ಪ್ರಮಥರ 11 ವಚನಗಳನ್ನು ಬೋಧಿಸಿದರು. ಕೇಸರಿ, ಬಿಳಿ ಹಾಗೂ ಹಸಿರು ಬಣ್ಣದ ಬಟ್ಟೆಯಿಂದ ಹೊದ್ದ ಬಸವ ಬುತ್ತಿ ಹೊತ್ತು ತಂದಿದ್ದ ಮಹಿಳೆಯರನ್ನು ಅಭಿನಂದಿಸುವ ಉದ್ದೇಶದಿಂದ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಮಾಡಲಾಯಿತು. ಜಾತ್ರಾ ಮಹೋತ್ಸವ ಹಿನ್ನೆಲೆ 70ಕ್ಕೂ ಹೆಚ್ಚು ಹಳ್ಳಿಗಳು, ಹಾವೇರಿಯ 30 ವಾರ್ಡ್‌ಗಳಲ್ಲಿ ಪಾದಯಾತ್ರೆ ಮಾಡಿ ಜನಜಾಗೃತಿ ಮಾಡಿದ್ದೇವೆ. 6 ಸಾವಿರ ಸಂಖ್ಯೆ ಮಹಿಳೆಯರಿಂದ ಬಸವಬುತ್ತಿ ಮೆರವಣಿಗೆ ಮಾಡಿದ್ದೇವೆ. ನಮ್ಮೆಲ್ಲರ ಮಹಾಸಂಗಮಕ್ಕೆ ವಚನವಂದನಾ ಸಾಕ್ಷಿಯಾಗಿದೆ. ವಚನ ಸಾಹಿತ್ಯ ಜಗತ್ತಿನ ಏಕೈಕ ಸಾಹಿತ್ಯವಾಗಿದೆ. ಕರ್ನಾಟಕದ ಇತಿಹಾಸದಲ್ಲಿ ವಚನಗಳ ಮೂಲಕ ವಚನವಂದನಾ ನಡೆಸಿಕೊಟ್ಟಿರುವುದು ಇತಿಹಾಸ. ಡಿ. 29ರಂದು ರಜತ ತುಲಾಭಾರ, ಡಿ. 30ರಂದು ಉಭಯ ಶ್ರೀಗಳ ಭಾವಚಿತ್ರ ಮೆರವಣಿಗೆ ನಡೆಯಲಿದೆ. ಎಲ್ಲ ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುಸ್ತಕ ಸಂಸ್ಕೃತಿ ಸಂವೇದನೆಗೆ ಸಂಬಂಧಿಸಿದ್ದು: ಬರಗೂರು
ಜಿಬಿಎ ಚುನಾವಣೆಗೆ ಕಾಂಗ್ರೆಸ್‌ ಅರ್ಜಿಗೆ ₹50 ಸಾವಿರ!