ಚಂದ್ರು ಕೊಂಚಿಗೇರಿ ಹೂವಿನಹಡಗಲಿ
ತಾಲೂಕಿನ 26 ಗ್ರಾಪಂ ವ್ಯಾಪ್ತಿಯ ಕೆರೆ ಕಟ್ಟೆ, ಚೆಕ್ ಡ್ಯಾಂ ಸೇರಿದಂತೆ ನೀರು ಮತ್ತು ಮಣ್ಣು ಸಂರಕ್ಷಣೆ ಮಾಡುವಂತಹ ಕಾಮಗಾರಿಗಳಲ್ಲಿ ನಿತ್ಯ ಸಾವಿರಾರು ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.
ಪ್ರಸಕ್ತ ವರ್ಷದಲ್ಲಿ ತಾಲೂಕಿಗೆ ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ 16 ಲಕ್ಷ ಮಾನವ ದಿನಗಳ ಸೃಜನೆ ಮಾಡಲು ಗುರಿ ನೀಡಲಾಗಿದೆ. ಇದರಲ್ಲಿ ಜುಲೈ1 ರಿಂದ ಸೆ. 13 ರವರೆಗೆ 424644 ಮಾನವ ದಿನ ಸೃಜನೆ ಮಾಡಿ ವಿಜಯನಗರ ಜಿಲ್ಲೆಯಲ್ಲೇ ಪ್ರಥಮ ಸ್ಥಾನದಲ್ಲಿದೆ. ಒಂದೇ ದಿನ 11188 ಜನ ವಿವಿಧ ಕಾಮಗಾರಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ತಾಲೂಕಿನಲ್ಲಿ 43196 ಜಾಬ್ ಕಾರ್ಡ್ಗಳಿವೆ, ಇದರಲ್ಲಿ 34119 ಕ್ರಿಯಾಶೀಲವಾಗಿವೆ, 95087 ಕೂಲಿ ಕಾರ್ಮಿಕರಲ್ಲಿ 69020 ಕ್ರಿಯಾಶೀಲ ಕೂಲಿ ಕಾರ್ಮಿಕರಿದ್ದಾರೆ. ನರೇಗಾ ಯೋಜನೆಯಲ್ಲಿ 470958 ಮಾನವ ದಿನಗಳು ಮತ್ತು ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ 424644 ಮಾನವ ದಿನ ಕಳೆದ ಏ.2026 ರಿಂದ ಜು.1-2026 ರವರೆಗೂ ಒಟ್ಟು 895602 ಮಾನವ ದಿನಗಳ ಸೃಜನೆ ಮಾಡಲಾಗಿದೆ. 125 ದಿನಗಳ ಕೆಲಸ ನೀಡುತ್ತಿದ್ದು ದಿನಕ್ಕೆ ₹382 ಕೂಲಿ ನೀಡಲಾಗುತ್ತಿದೆ.ಬರಗಾಲ ಎದುರಾಗಿದ್ದು, ಕೂಲಿ ಕಾರ್ಮಿಕರ ಬೇಡಿಕೆಗೆ ತಕ್ಕಂತೆ ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ ಕೆಲಸ ನೀಡಲಾಗುತ್ತಿದೆ. ಅದರಂತೆ ಮಾನ್ಯರ ಮಸಲವಾಡ, ಸೋವೇನಹಳ್ಳಿ, ಕೊಯಿಲಾರಗಟ್ಟಿ, ಮುದೇನೂರು, ಡೊಂಬರಹಳ್ಳಿ, ಹ್ಯಾರಡ, ಹಿರೇಹಡಗಲಿ, ಕೆ.ಅಯ್ಯನಹಳ್ಳಿ, ದಾಸನಹಳ್ಳಿಯಲ್ಲಿರುವ ಕೆರೆಗಳ ಅಭಿವೃದ್ಧಿ ಕಾಮಗಾರಿಗಳು ಮತ್ತು ಹತ್ತಾರು ಕಡೆಗಳಲ್ಲಿ ಚೆಕ್ ಡ್ಯಾಂ ಹಾಗೂ ಗೋಕಟ್ಟೆಗಳ ಅಭಿವೃದ್ಧಿ ಕಾಮಗಾರಿಗಳಲ್ಲಿ ಕೆಲಸ ಮಾಡಲಾಗುತ್ತಿದೆ.
ಪ್ರಸಕ್ತ ಸಾಲಿನಲ್ಲಿ 16 ಲಕ್ಷ ಮಾನವ ದಿನಗಳ ಸೃಜನೆ ಗುರಿ ನಿಗದಿಯಾಗಿದೆ. ಇದರಲ್ಲಿ 424644 ಮಾನವ ದಿನಗಳ ಸೃಜನೆ ಮಾಡಿ ಜಿಲ್ಲೆಯಲ್ಲೇ ಪ್ರಥಮ ಸ್ಥಾನದಲ್ಲಿದ್ದೇವೆ. 500 ರಿಂದ 600 ಪದವೀಧರ ಯುವಕರು, ಯುವತಿಯರು ವಿಬಿ ಜಿ ರಾಮ್ ಜಿ ಕೆಲಸಕ್ಕೆ ಬರುತ್ತಿದ್ದಾರೆ. ಒಟ್ಟಾರೆ ಗುಳೆ ತಡೆಯುವುದು ಹಾಗೂ ಬರದಲ್ಲಿ ಕೂಲಿ ಕಾರ್ಮಿಕರ ಬೇಡಿಕೆಗೆ ತಕ್ಕಂತೆ ಕೆಲಸ ನೀಡಲಾಗುತ್ತಿದೆ ಎಂದು ಹೂವಿನಹಡಗಲಿ ವಿಬಿ ಜಿ ರಾಮ್ ಜಿ ಯೋಜನೆ ಸಹಾಯಕ ನಿರ್ದೇಶಕ ವೀರಣ್ಣ ನಾಯ್ಕ ತಿಳಿಸಿದ್ದಾರೆ.