ಕನ್ನಡಪ್ರಭ ವಾರ್ತೆ ಜಮಖಂಡಿ
ನಗರದ ಕಡಪಟ್ಟಿ ದೇವಸ್ಥಾನ ಆವರಣದಲ್ಲಿ ಬುಧವಾರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ 4ನೇ ದಿನದ ಸಮಾರಂಭದಲ್ಲಿ ಗದಗ ಜಿಲ್ಲೆಯ ಮುಕ್ತಿಮಂದಿರ ಕ್ಷೇತ್ರದಲ್ಲಿ ಅ.28ರಂದು ಜರುಗಲಿರುವ ಲಿಂ.ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳ 44ನೇ ಪುಣ್ಯಸ್ಮರಣೋತ್ಸವ ಸಮಾರಂಭದ ಭಿತ್ತಿಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಜಾತಿಗಳು ಬೇರೆ ಇರಬಹುದು. ಆದರೆ ನೀತಿ ಮತ್ತು ಸಂಸ್ಕೃತಿ ಬೇರೆಯಿಲ್ಲ. ಸಮಾಜ ವಿಭಜಿಸುವ ಪ್ರಯತ್ನಗಳಿಗೆ ಅವಕಾಶ ನೀಡದೆ, ಎಲ್ಲರೂ ಒಂದಾಗಿ ನಮ್ಮ ಧರ್ಮ, ಸಂಸ್ಕೃತಿ ಮತ್ತು ರಾಷ್ಟ್ರೀಯ ಏಕತೆ ಉಳಿಸಿಕೊಳ್ಳಬೇಕು ಎಂದರು.ಮಾನವ ಧರ್ಮದ ಮಹತ್ವ, ಭಾರತೀಯ ಆಧ್ಯಾತ್ಮಿಕ ಪರಂಪರೆ, ಬಸವಣ್ಣನವರ ವಚನಗಳ ಸಂದೇಶ ಹಾಗೂ ಸಮಾಜದ ಏಕತೆಗೆ ಅಗತ್ಯವಾಗಿದೆ. ಕೆಲವು ವರ್ಷಗಳ ಹಿಂದೆ ರಾಜಕೀಯ ಕಾರಣಗಳಿಗಾಗಿ ವೀರಶೈವ ಮತ್ತು ಲಿಂಗಾಯತ ಸಮುದಾಯಗಳ ನಡುವೆ ವಿಭಜನೆ ಮೂಡಿಸುವ ಪ್ರಯತ್ನಗಳು ನಡೆದವು. ಇಂತಹ ಪ್ರಯತ್ನಗಳಿಗೆ ಸಮಾಜ ಅವಕಾಶ ನೀಡದೆ ಒಗ್ಗಟ್ಟು ಪ್ರದರ್ಶಿಸಿದೆ. ನಮ್ಮ ಜಾತಿಗಳು ಬೇರೆ ಇರಬಹುದು, ಆದರೆ ನಮ್ಮ ನೀತಿ ಮತ್ತು ಸಂಸ್ಕೃತಿ ಒಂದೇ ಎಂಬ ಅರಿವು ಎಲ್ಲರಲ್ಲೂ ಇರಬೇಕು. ಸಮಾಜ ಒಡೆಯುವ ಬದಲು ಒಗ್ಗೂಡಿಸುವುದಕ್ಕೆ ಆದ್ಯತೆ ನೀಡಬೇಕಾಗಿದೆ ಎಂದರು.
ಮಾನವ ಧರ್ಮ ಯಾವುದೇ ಮತಕ್ಕೆ, ಪ್ರದೇಶ ಅಥವಾ ಸಂಪ್ರದಾಯಕ್ಕೆ ಸೀಮಿತವಾಗಿಲ್ಲ. ಇಡೀ ಮನುಕುಲದ ಒಳಿತನ್ನು ಬಯಸುವುದೇ ಮೂಲ ಆಶಯವಾಗಿದೆ. ಸನಾತನ ಧರ್ಮ ಮನುಷ್ಯರಷ್ಟೇ ಅಲ್ಲದೆ ಸಕಲ ಜೀವಿಗಳ ಒಳಿತು ಬಯಸುತ್ತದೆ. ಭಾರತದ ಆತ್ಮ ಆಧ್ಯಾತ್ಮದಲ್ಲಿದೆ. ಭೂಮಿತಾಯಿಯಾಗಿ, ನೀರು ಗಂಗಾಮಾತೆಯಾಗಿ, ಗಾಳಿ ವಾಯುದೇವನಾಗಿ ಮತ್ತು ಅಗ್ನಿ ದೈವಸ್ವರೂಪವಾಗಿ ಕಾಣುವ ಪರಂಪರೆ ನಮ್ಮಲ್ಲಿದೆ. ಪ್ರಕೃತಿಯಲ್ಲಿ ದೈವತ್ವ ಕಾಣುವ ಈ ಸಂಸ್ಕೃತಿ ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸ್ವರ್ಗ ಮತ್ತು ನರಕವನ್ನು ಜಾತಿ ಅಥವಾ ಸಂಪತ್ತಿನ ಆಧಾರದಲ್ಲಿ ನಿರ್ಧರಿಸಲಾಗುವುದಿಲ್ಲ. ಪರೋಪಕಾರ ಮಾಡಿದರು ಪುಣ್ಯ ಸಂಪಾದಿಸುತ್ತಾರೆ. ಇತರರಿಗೆ ನೋವುಂಟು ಮಾಡುವವರು ತಮ್ಮ ನಡವಳಿಕೆಯಿಂದ ಕೆಟ್ಟ ಫಲಿತಾಂಶ ಎದುರಿಸುತ್ತಾರೆ. ಬಸವಣ್ಣ ಅವರು ಆಚಾರ ಮತ್ತು ಅನಾಚಾರದ ಮೂಲಕ ಸ್ವರ್ಗ-ನರಕದ ಪರಿಕಲ್ಪನೆ ವಿವರಿಸಿದ್ದಾರೆ. ಹೀಗಾಗಿ, ವ್ಯಕ್ತಿಯ ನಡವಳಿಕೆ ಆತನ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ ಎಂದರು.ದೇಶದ ಭದ್ರತೆಗೆ ಧಕ್ಕೆ ತರುವ ಭಯೋತ್ಪಾದಕ ಚಟುವಟಿಕೆಗಳ ವಿರುದ್ಧ ಜಾಗೃತರಾಗಿರಬೇಕು. ದೇಶದ ಸುರಕ್ಷತೆ ಮತ್ತು ರಾಷ್ಟ್ರೀಯ ಹಿತಾಸಕ್ತಿ ಕಾಪಾಡಲು ಸಮಾಜ ಒಗ್ಗಟ್ಟಿನಿಂದ ನಿಲ್ಲಬೇಕು. ರೈತರಾಗಿರುವ ಕಾರಣಕ್ಕೆ ಯುವಕರಿಗೆ ಮದುವೆಯಾಗಲು ವಧು ಸಿಗದಂತಹ ಸಾಮಾಜಿಕ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಕೃಷಿಯನ್ನು ಗೌರವಿಸುವ ಮನೋಭಾವ ಯುವಜನರಲ್ಲಿ ಬೆಳೆಯಬೇಕು ರಂಭಾಪುರಿ ಜಗದ್ಗುರುಗಳು ಸಮಾಜದಹಿತ, ರಾಷ್ಟ್ರದಹಿತ ಮತ್ತು ಧಾರ್ಮಿಕ ಮೌಲ್ಯಗಳ ಪರವಾಗಿದ್ದಾರೆ ಎಂದು ತಿಳಿಸಿದರು.