ಮುಂಡಗೋಡ: ಹಿಂದು- ಮುಸ್ಲಿಂ ಭಾವೈಕ್ಯ ಬೆಸೆಯುವ ಹಬ್ಬವೆಂದೇ ಕರೆಯಲಾಗುವ ಮೊಹರಂ ಹಬ್ಬಕ್ಕೆ ಕಡೆಯ ದಿನವಾದ ಬುಧವಾರ ಬಹುತೇಕ ಕಡೆಗೆ ದೇವರು ಮೆರವಣಿಗೆಯೊಂದಿಗೆ ಹೊಳೆಗೆ ಹೋಗುವ ಸಂಪ್ರದಾಯದೊಂದಿಗೆ ತೆರೆ ಬಿದ್ದಿದೆ. ಪಟ್ಟಣ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಈ ಹಬ್ಬದ ಪ್ರಾಮುಖ್ಯತೆ ಹೆಚ್ಚು. ತನ್ನದೇ ಆದ ವಿಶಿಷ್ಟ ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕ ಮೆರುಗುಗಳೊಂದಿಗೆ ಗ್ರಾಮ ಮಟ್ಟಗಳಲ್ಲಿ ಯಾವುದೇ ಜಾತಿ ಕಟ್ಟಳೆಗಳಿಲ್ಲದೇ ಆಚರಿಸಲಾಯಿತು.ಕಳೆದ ಐದು ದಿನಗಳ ಹಿಂದೆ ತಾಲೂಕಿನ ಬಹುತೇಕ ಎಲ್ಲ ಗ್ರಾಮಗಳಲ್ಲಿಯೂ ಪಂಜಾಗಳನ್ನು ಪ್ರತಿಷ್ಠಾಪಿಸಿಲಾಗಿತ್ತು. ತಾಲೂಕಿನ ಪಾಳಾ, ಮಳಗಿ, ಕಾತೂರ, ಚವಡಳ್ಳಿ, ಅಂದಲಗಿ, ಚಿಗಳ್ಳಿ, ಹುನಗುಂದ ಹಾಗೂ ಇಂದೂರ ಕೊಪ್ಪ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.
ದಾಂಡೇಲಿ: ನಗರದಲ್ಲಿ ಎಲ್ಲೆಡೆ ಹಿಂದೂ- ಮುಸ್ಲಿಮರು ಭಾವೈಕ್ಯದಿಂದ ಮೊಹರಂ ಹಬ್ಬವನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸಿದರು.ಮೊಹರಂ ಅಂಗವಾಗಿ ನಗರದ ಗಾಂಧಿನಗರ ಸುಭಾಶನಗರ ಮಾರುತಿನಗರ ಪಟೇಲನಗರ ಹಳೆ ದಾಂಡೇಲಿ ಹಳಿಯಾಳ ರಸ್ತೆ ಅಂಬೇವಾಡಿಯ ಪ್ರಮುಖ ರಸ್ತೆಗಳಲ್ಲಿ ಪೀರ್ ದೇವರುಗಳ ಮೆರವಣಿಗೆ ನಡೆಯಿತು. ವಿವಿಧೆಡೆ ಸಂಚರಿಸಿದ ಪೀರ್ ದೇವರುಗಳಿಗೆ ನಮಿಸಿದ ಜನತೆ ಕಾಯಿ, ಊದು, ಸಕ್ಕರೆ ಲೋಬಾನ ಕೊಟ್ಟು ಇಷ್ಟಾರ್ಥಸಿದ್ಧಿಗೆ ಪ್ರಾರ್ಥಿಸಿದರು.ಬೆಳಗಿನ ಜಾವ ಬೆಂಕಿಯ ಕೆಂಡದಲ್ಲಿ ಹಾಯ್ದು ಕೆಲವರು ಭಕ್ತಿ ಸಮರ್ಪಿಸಿದರು. ಹಿಂದು- ಮುಸ್ಲಿಮರು ಜತೆಯಾಗಿ ಅಲಾವಿ ಕುಣಿತಕ್ಕೆ ಹೆಜ್ಜೆ ಹಾಕಿದರು.