ನೀರಾವರಿ ಇಲಾಖೆ ಅಧಿಕಾರಿ ಎಳೆದಾಡಿದ ಸಂತ್ರಸ್ತರು

KannadaprabhaNewsNetwork | Published : Mar 13, 2024 2:02 AM

ಸಾರಾಂಶ

ಬೆಳಗಾವಿ: ನೀರಾವರಿ ಇಲಾಖೆಯಿಂದ ಸ್ವಾಧೀನಪಡಿಸಿಕೊಂಡಿರುವ ಜಮೀನಿಗೆ ಪರಿಹಾರ ನೀಡಲು ಉದಾಸೀನ ತೋರುತ್ತಿರುವ ಅಧಿಕಾರಿಗಳ ನಡೆಗೆ ಬೇಸತ್ತ ಸಂತ್ರಸ್ತರು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆ ವಿಕೋಪಕ್ಕೆ ತಿರುಗಿದ್ದು, ಮಂಗಳವಾರ ಕಚೇರಿಗೆ ಆಗಮಿಸಿದ ನೀರಾವರಿ ಇಲಾಖೆ ಎಂಡಿ ರಾಜೇಶ ಅಮ್ಮಿನಭಾವಿ ಅವರನ್ನು ಸಂತ್ರಸ್ತರು ಎಳೆದಾಡಿದ ಪ್ರಸಂಗ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ನೀರಾವರಿ ಇಲಾಖೆಯಿಂದ ಸ್ವಾಧೀನಪಡಿಸಿಕೊಂಡಿರುವ ಜಮೀನಿಗೆ ಪರಿಹಾರ ನೀಡಲು ಉದಾಸೀನ ತೋರುತ್ತಿರುವ ಅಧಿಕಾರಿಗಳ ನಡೆಗೆ ಬೇಸತ್ತ ಸಂತ್ರಸ್ತರು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆ ವಿಕೋಪಕ್ಕೆ ತಿರುಗಿದ್ದು, ಮಂಗಳವಾರ ಕಚೇರಿಗೆ ಆಗಮಿಸಿದ ನೀರಾವರಿ ಇಲಾಖೆ ಎಂಡಿ ರಾಜೇಶ ಅಮ್ಮಿನಭಾವಿ ಅವರನ್ನು ಸಂತ್ರಸ್ತರು ಎಳೆದಾಡಿದ ಪ್ರಸಂಗ ನಡೆಯಿತು.

ಹುಕ್ಕೇರಿ ತಾಲೂಕಿನ ಮಾಸ್ತಿಹೊಳಿ ಗ್ರಾಮದ ಸುತ್ತಮುತ್ತಲಿನ ಜಮೀನನ್ನು ನೀರಾವರಿ ಇಲಾಖೆ ವಶಪಡಿಸಿಕೊಂಡು ಪರಿಹಾರ ಕೊಟ್ಟಿಲ್ಲ ಎಂದು ಆರೋಪಿಸಿ ಜಮೀನು ಕಳೆದುಕೊಂಡ ಸಂತ್ರಸ್ತರು ನೀರಾವರಿ ಇಲಾಖೆ ಕಚೇರಿ ಎದುರು ಸೋಮವಾರದಿಂದ ನಡೆಸುತ್ತಿರುವ ಅಹೋರಾತ್ರಿ ಧರಣಿ ಮಂಗಳವಾರ ಎರಡನೇ ದಿನಕ್ಕೆ ಕಾಲಿಟ್ಟಿತ್ತು. ನಗರದ ಕ್ಲಬ್ ರಸ್ತೆಯಲ್ಲಿರುವ ವಿಭಾಗೀಯ ಕಚೇರಿಗೆ ನೀರಾವರಿ ಇಲಾಖೆಯ ಎಂ.ಡಿ. ರಾಜೇಶ ಅಮ್ಮಿನಭಾವಿ ಆಗಮಿಸುತ್ತಿದ್ದಂತೆಯೇ ಗ್ರಾಮಸ್ಥರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಅಧಿಕಾರಿ ಮನವೊಲಿಸಲು ಮುಂದಾದರಾದರೂ ಮತ್ತಷ್ಟು ಕೆರಳಿದ ಪ್ರತಿಭಟನಾಕಾರರು ಎಂಡಿ ಅಮ್ಮಿನಭಾವಿಯನ್ನು ಎಳೆದಾಡಿದರು.

ಈ ವೇಳೆ ಎಂಡಿ ರಾಜೇಶ ಅಮ್ಮಿನಭಾವಿ ಮಾತನಾಡಿ, ಮಾಸ್ತಿಹೊಳಿ ಗ್ರಾಮದಲ್ಲಿ 394 ಎಕರೆಗೆ ಪರಿಹಾರ ಸಿಕ್ಕಿಲ್ಲ ಎಂದು ಕಚೇರಿ ಮುಂದೆ ‌ಪ್ರತಿಭಟನೆ ಮಾಡುತ್ತಿದ್ದಾರೆ. ಬರುವಾಗ ತಮ್ಮ ಅಹವಾಲು ನನಗೆ ಹೇಳಿದ್ದರು, ಒಂದು ದಿನ ವಿಳಂಬ ಆಗಿದ್ದಕ್ಕೆ ಕ್ಷಮೆ ಕೇಳುತ್ತೇನೆ. 1972ರಲ್ಲಿ ಹಿಡಕಲ್ ಜಲಾಶಯ ಕಾಮಗಾರಿ ಆಗಿದೆ. ಹಿನ್ನೀರಿನಲ್ಲಿ ಮುಳುಗಡೆಯಾಗುವ ಎಲ್ಲಾ ಗ್ರಾಮಗಳ ಭೂ ಸ್ವಾಧೀನ ಮಾಡಲಾಗಿದೆ.

ಆಗಿನ ಕಾಲದಲ್ಲಿ ಪರಿಹಾರ ನೀಡಲು ಕರ್ನಾಟಕ ಸರ್ಕಾರ ಅಧಿಕಾರಿಗಳ ನಿಯೋಜನೆ ಆಗಿತ್ತು. ರಾಜ್ಯ ಸರ್ಕಾರ ಭೂಸ್ವಾಧೀನ ಮಾಡಿಕೊಂಡಿದೆ. ನೀರಾವರಿ ನಿಗಮ ಆಗುವ ಮುನ್ನ ಭೂ ಸ್ವಾಧೀನ ಆಗಿದೆ. 2018ರ ಬಳಿಕ ನೀರಾವರಿ ನಿಗಮ ರಚನೆ ಆಗಿದ್ದು, ಸದ್ಯ ನಮ್ಮ ಕಚೇರಿಗೆ ರೈತರು ಪರಿಹಾರಕ್ಕೆ ಅಹವಾಲು ಸಲ್ಲಿಸುತ್ತಿದ್ದಾರೆ. ಪರಿಹಾರ ಕೊಡುವ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗುತ್ತಿರುವುದು ನಿಜ. ಹಲವಾರು ರೈತರು ಹೆಚ್ಚುವರಿ ಪರಿಹಾರ ಧನ ಕೋರಿ ಕೋರ್ಟ್ ಮೊರೆ ಹೋಗಿದ್ದು, ಇದರಿಂದ ವಿಳಂಬವಾಗಿದೆ.

ಪರಿಹಾರ ತೆಗೆದುಕೊಂಡ ಸಂತ್ರಸ್ತರ ಸಹಿ ಮತ್ತು ಹೆಬ್ಬಟ್ಟಿನ ದಾಖಲೆಗಳು ನಮ್ಮ ಬಳಿ ಇವೆ. 1970ರಲ್ಲಿ ಕೆಲವು ರೈತರಿಗೆ ಪರಿಹಾರ ನೀಡಿರುವ ದಾಖಲೆಗಳಿವೆ. ಇನ್ನೂ ಸಂಪೂರ್ಣ ದಾಖಲೆಗಳು ನಮಗೆ ಸಿಕ್ಕಿಲ್ಲ. ಹೀಗಾಗಿ ಅಧಿಕಾರಿಗಳು ಗೊಂದಲದಲ್ಲಿದ್ದಾರೆ. ಎಷ್ಟು ಎಕರೆಗೆ ನಮ್ಮ ಬಳಿ ದಾಖಲೆ ಇದೆ ಎಲ್ಲವನ್ನೂ ಪರಿಶೀಲನೆ ಮಾಡುತ್ತೇವೆ. ಎಲ್ಲವೂ ಭೂ ಸ್ವಾಧೀನ ಆಗಿದೆ. ಪರಿಹಾರ ಯಾವುದಕ್ಕೆ ಸಿಕ್ಕಿದೆ ಎಂದು ಪರಿಶೀಲನೆ ಮಾಡುತ್ತೇವೆ ಎಂದು ತಿಳಿಸಿದರು.

ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ನೀರಾವರಿ ಇಲಾಖೆಯ ಕಚೇರಿಗೆ ಆಗಮಿಸಿ ಅಧಿಕಾರಿ ಹಾಗೂ ಗ್ರಾಮಸ್ಥರೊಂದಿಗೆ ಸುಮಾರು ಎರಡು ಗಂಟೆಗಳ ಕಾಲ ಸಭೆ ನಡೆಸಿದರು. ಈ ವೇಳೆ ಅಧಿಕಾರಿಗಳ ಹಾಗೂ ಪ್ರತಭಟನಾಕಾರ ನಡುವೆ ಮಾತಿನ ಚಕಮಕಿ ನಡೆಯಿತು.

--

ಕೋಟ್‌....ಹುಕ್ಕೇರಿ ತಾಲೂಕಿನ ಮಾಸ್ತಿಹೊಳಿ ಗ್ರಾಮಸ್ಥರು ಹಲವಾರು ಬಾರಿ ಭೂಸ್ವಾಧೀನ ಮಾಡಿಕೊಂಡ ಜಮೀನಿಗೆ ಪರಿಹಾರ ಕೊಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಅವರ ಬೇಡಿಕೆ ಸರ್ಕಾರದ ಗಮನಕ್ಕೆ ತರಲಾಗುವುದು. ಪರಿಹಾರ ನೀಡಲು ನೀರಾವರಿ ಇಲಾಖೆಯ ಅಧಿಕಾರಿಗಳು ವಿಳಂಬ ಮಾಡಿದ್ದಾರೆ. ಮತ್ತೊಮ್ಮೆ ಜಂಟಿಯಾಗಿ ಸರ್ವೇ ಮಾಡಲಾಗುವುದು. ರೈತರು ಇದಕ್ಕೆ ಒಪ್ಪಿಕೊಂಡು ಪ್ರತಿಭಟನೆ ಹಿಂಪಡೆದಿದ್ದಾರೆ.

-ಸತೀಶ ಜಾರಕಿಹೊಳಿ ಜಿಲ್ಲಾ ಉಸ್ತುವಾರಿ ಸಚಿವ

Share this article