ಶಿವಾನಂದ ಅಂಗಡಿ
ಹುಬ್ಬಳ್ಳಿ: ತಾಲೂಕಿನ ಶಿರಗುಪ್ಪಿ ಗ್ರಾಮಕ್ಕೆ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಕೆರೆ ನೀರನ್ನೇ ಆಶ್ರಯಿಸಿದ್ದು, ಈ ಬಾರಿ ಜೂನ್ ತಿಂಗಳಲ್ಲೇ ಸುರಿದ ಮಳೆಗೆ ಕೆರೆ ಭರ್ತಿಯಾಗಿದ್ದು, ಗ್ರಾಮಸ್ಥರಲ್ಲಿ ಹರ್ಷ ಮೂಡಿಸಿದೆ.13.32 ಎಕರೆ ವಿಶಾಲ ಕ್ಷೇತ್ರದಲ್ಲಿ ಹರಡಿರುವ ಕೆರೆ ಜೂನ್ ಎರಡೇ ವಾರದಲ್ಲಿ ರಾತ್ರಿ ಸುರಿದ ಮೃಗಶಿರಾ ಮಳೆ ಭರ್ತಿಯಾಗಿದ್ದು, ಕೆರೆ ತುಂಬಿದ ಬಳಿಕ ಕೆರೆಗೆ ಬರುವ ನೀರನ್ನು ಗ್ರಾಮಸ್ಥರು ಬಂದ್ ಮಾಡಿ ಬೆಣ್ಣೆಹಳ್ಳ ಪ್ರವೇಶಕ್ಕೆ ದಾರಿ ಮಾಡಿದ್ದಾರೆ.
ಬೇಸಿಗೆ ಕಾಲದಲ್ಲಿ ಕೆರೆ ನೀರು ಕಡಿಮೆಯಾದರೆ ಕೆರೆ ಅರ್ಧ ಭಾಗದಲ್ಲಿ ಹೂಳೆತ್ತುವ ಕಾಮಗಾರಿ ಕೈಗೊಂಡು ಪುನಶ್ಚೇತನ ಕಾರ್ಯ ಕೈಗೊಳ್ಳುತ್ತಾ ಬರಲಾಗಿದೆ. ಹೀಗಾಗಿ ಆರೇಳು ಸಾವಿರ ಅಧಿಕ ಜನಸಂಖ್ಯೆಗೆ ಈ ಕೆರೆ ಜೀವ ಜಲವಾಗಿದೆ.ಚಪ್ಪಲಿಗೆ ನಿರ್ಬಂಧ: ಶಿರಗುಪ್ಪಿ ಗ್ರಾಮಸ್ಥರು ಕೆರೆಯನ್ನು ತಮ್ಮ ಮನೆಯ ಜಗುಲಿಯಂತೆ ಆರಾಧನಾ ಭಾವದಿಂದ ಪೂಜಿಸುತ್ತಿದ್ದು, ಪಾದರಕ್ಷೆ ಹಾಕಿಕೊಂಡು ಕೆರೆಯನ್ನು ಪ್ರವೇಶಿಸುವುದಿಲ್ಲ. ಕೆರೆ ಪ್ರವೇಶಿಸುವ ಮೆಟ್ಟಿಲುಗಳ ಬಳಿಯೇ ಪಾದರಕ್ಷೆಗಳನ್ನು ಬಿಟ್ಟು ನೀರು ತುಂಬಿಕೊಂಡು ಬರುತ್ತಾರೆ. ಇಂಥ ಕಠಿಣ ನಿರ್ಬಂಧ ವಿಧಿಸಿಕೊಂಡಿದ್ದಾರೆ.
ಕೆರೆಗೆ ಆರು ಕಡೆ ನೀರು ತುಂಬಿಕೊಳ್ಳಲು ಪ್ರವೇಶ ದ್ವಾರಗಳಿದ್ದು, ಮುಖ್ಯ ಪ್ರವೇಶ ದ್ವಾರದಲ್ಲಿ ಶುದ್ಧ ಕುಡಿಯುವ ಘಟಕ ಸ್ಥಾಪನೆಯಾಗಿದೆ. ಕೇಂದ್ರದಿಂದಲೂ ಗ್ರಾಮಸ್ಥರು ನೀರು ಒಯ್ಯುತ್ತಾರೆ. ಟ್ಯಾಂಕರ್ ನೀರು ತುಂಬಿಸಲು ಸಹ ಮುಖ್ಯದ್ವಾರದಲ್ಲೇ ವ್ಯವಸ್ಥೆ ಇದೆ. ನಿತ್ಯ ಗಂಗೆ ಪೂಜೆ ಮಾಡುತ್ತಾರೆ.ಶಿರಗುಪ್ಪಿಯಲ್ಲಿ ಗ್ರಾಮ ಪಂಚಾಯಿತಿ ಕೇಂದ್ರ ಕಚೇರಿ ಇದ್ದು, ಗ್ರಾಮಕ್ಕೆ ನೀರು ಪೂರೈಸುವ ಜವಾಬ್ದಾರಿ ಹೊಂದಿರುವ ಸಿಬ್ಬಂದಿ ನಿರಾಳರಾಗಿದ್ದು, ಕನಿಷ್ಠ ಇನ್ನು ಎರಡ್ಮೂರು ವರ್ಷ ನಮ್ಮ ಊರಿಗೆ ಕುಡಿಯುವ ನೀರಿನ ಅಭಾವ ಉಂಟಾಗದು ಎಂದು ಹೇಳುತ್ತಾರೆ.
ಕೊಳವೆಬಾವಿ ಸವಳು: ಗ್ರಾಮದ ಯಾವುದೇ ಕಡೆ ಕೊಳವೆಬಾವಿ ಕೊರೆದರೂ ಸವಳು ನೀರು ಬರುತ್ತದೆ. ಹೀಗಾಗಿ ಗ್ರಾಮಸ್ಥರು ದಶಕಗಳಿಂದ ಗ್ರಾಮದ ಕೆರೆಯನ್ನೇ ನೆಚ್ಚಿಕೊಳ್ಳಬೇಕಾಗಿದೆ. ಜತೆಗೆ ರೈತರು ತಮ್ಮ ತಮ್ಮ ಹೊಲಗಳಲ್ಲೇ ಕೆರೆಗಳನ್ನು ಮಾಡಿಕೊಂಡಿದ್ದಾರೆ. ಇಲ್ಲಿನ ಕೆರೆಗಳು ಮಳೆ ನೀರಿಗೆ ಮಾತ್ರ ತುಂಬುತ್ತವೆ, ಯಾವುದೇ ಕಾಲುವೆ, ಜಲಾಶಯದಿಂದ ನೀರು ತುಂಬಿಸುವ ವ್ಯವಸ್ಥೆ, ಅವಕಾಶ ಇಲ್ಲ.ಕೆರೆ ನೀರೇ ಆಧಾರ: ಧಾರವಾಡ ಜಿಲ್ಲೆಯ ಅಣ್ಣಿಗೇರಿ, ನವಲಗುಂದ, ಕುಂದಗೋಳ ತಾಲೂಕು ಸೇರಿ ಅಲ್ಲಿಯ ಗ್ರಾಮೀಣ ಪ್ರದೇಶಗಳಿಗೆ ಕೆರೆ ನೀರೇ ಆಧಾರವಾಗಿದೆ. ಆದರೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಈ ಕೆರೆಗಳಿಗೆ ಮಲಪ್ರಭಾ ಕಾಲುವೆ ಮೂಲಕ ನೀರು ತುಂಬಿಸಿ ವರ್ಷದುದ್ದಕ್ಕೂ ಹಳ್ಳಿಗಳಿಗೆ ನೀರು ಪೂರೈಸಲಾಗುತ್ತದೆ.
ಶಿರಗುಪ್ಪಿ ಗ್ರಾಮಕ್ಕೆ ಮಾತ್ರ ಕೆರೆ ನೀರೇ ಆಧಾರವಾಗಿದ್ದು, ವರುಣದೇವ ಕೃಪೆ ತೋರಿದರೆ ಮಾತ್ರ ಈ ಕೆರೆ ತುಂಬಬೇಕು. ಅಂಥ ವ್ಯವಸ್ಥೆ ಪರಂಪರಾಗತವಾಗಿ ನಡೆದುಕೊಂಡ ಬಂದಿದೆ.ಕೆರೆ ಹೂಳೆತ್ತುವಾಗ ಒಂದು ಕೆರೆ ಖಾಲಿ ಮಾಡಿಕೊಂಡು ಮತ್ತೊಂದು ಕೆರೆಗೆ ನೀರು ತುಂಬಿಸಿಕೊಳ್ಳುತ್ತೇವೆ. 2015-16ರಲ್ಲಿ ಕೆರೆ ಹೂಳು ತೆಗೆದಿದ್ದೇವೆ. ಹೊಲಗಳಿಗೆ ಸಹ ಮಣ್ಣು ಹೇರಿದ್ದೇವೆ ಎನ್ನುತ್ತಾರೆ ಗ್ರಾಪಂ ಸಿಬ್ಬಂದಿ.
ಉಮಚಗಿಗೂ ಕೆರೆ ನೀರು: ಮಲ್ಲಿಗವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಮಚಗಿ ಗ್ರಾಮಕ್ಕೂ ಸಹ ಕೆರೆ ನೀರೇ ಪೂರೈಕೆಯಾಗುತ್ತದೆ. ಈ ಬಾರಿಯ ಮಳೆಗೆ ಕೆರೆ ಕೋಡಿ, ಸಣ್ಣ ಕೆರೆ ಭರ್ತಿಯಾಗಿದ್ದು, ಸಂಪೂರ್ಣ ಭರ್ತಿಯಾಗುವುದು ಬಾಕಿ ಇದೆ. ಆದರೆ, ಇತ್ತೀಚೆಗೆ ಮಲ್ಲಿಗವಾಡದಿಂದ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಉಮಚಗಿಗೆ ನೀರು ಪೂರೈಕೆಯಾಗುತ್ತಿದೆ. ಗ್ರಾಮದಲ್ಲಿ ರಸ್ತೆ ಕೂಡುವ ಕಡೆಗಳಲ್ಲಿ ಮಿನಿ ಟ್ಯಾಂಕ್ ನಿರ್ಮಿಸಿದ್ದು, ಆ ಟ್ಯಾಂಕ್ ಮೂಲಕವೇ ಶುದ್ಧ ನೀರು ಗ್ರಾಮಕ್ಕೆ ಪೂರೈಕೆಯಾಗುತ್ತಿದೆ ಎಂದು ಗ್ರಾಮ ಪಂಚಾಯಿತಿ ಪಿಡಿಒ ಲಲಿತಾ ವಡ್ಡರ ಮಾಹಿತಿ ನೀಡಿದರು.ಕೆರೆಯಲ್ಲಿ ಇನ್ನು ಒಂದು ವರ್ಷಕ್ಕಾಗುವಷ್ಟು ನೀರು ಇತ್ತು. ಈ ಬಾರಿ ಜೂನ್ ತಿಂಗಳಲ್ಲೇ ವರುಣದೇವ ಕೃಪೆ ತೋರಿದ್ದು, ಕೆರೆ ಭರ್ತಿಯಾಗಿರುವುದು ಗ್ರಾಮಸ್ಥರಲ್ಲಿ ಹರ್ಷ ಮೂಡಿಸಿದೆ. ಎರಡ್ಮೂರು ವರ್ಷ ಗ್ರಾಮಕ್ಕೆ ಕುಡಿಯುವ ನೀರಿನ ಅಭಾವವೇ ಉಂಟಾಗದು ಎಂದು ಶಿರಗುಪ್ಪಿ ಗ್ರಾಮಸ್ಥ ಮಂಜುನಾಥ ಹೇಳಿದರು.ಗ್ರಾಮದ ಕೆರೆ ಒಮ್ಮೆ ಭರ್ತಿಯಾದರೆ ಎರಡ್ಮೂರು ವರ್ಷಗಳ ಕಾಲ ನೀರಿನ ಸಮಸ್ಯೆ ಆಗುವುದಿಲ್ಲ. ಅಂದು ಮಳೆಯ ರಭಸಕ್ಕೆ ನೀರನ್ನು ಹೊರಗೆ ಹಾಕಿದ್ದೇವೆ. ಕೆರೆ ನೀರು ಬರುವ ದಾರಿಯನ್ನು ಬಂದ್ ಮಾಡಿದ್ದೇವೆ ಎಂದು ಶಿರಗುಪ್ಪಿ ಗ್ರಾಪಂ ಕಾರ್ಯದರ್ಶಿ ಎಸ್.ಜಿ. ಗೌರಿ ಹೇಳಿದರು.