ಶ್ರೀನಿವಾಸ ಬಬಲಾದಿ
ಗ್ರಾಮಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಗ್ರಾಮ ಪಂಚಾಯತಿ ಚುನಾಯಿತ ಪ್ರತಿನಿಧಿಗಳ ಅಧಿಕಾರಾವಧಿ ಮುಕ್ತಾಯ ಸನ್ನಿಹಿತವಾಗಿದೆ. ಫೆಬ್ರವರಿ ಮೊದಲ ವಾರದಲ್ಲಿ ಬಹುತೇಕ ಗ್ರಾಪಂಗಳ ಸದಸ್ಯರ ಅಧಿಕಾರಾವಧಿ ಮುಗಿಯಲಿದ್ದು, ಗ್ರಾಪಂನಲ್ಲಿ ಪಿಡಿಒ ಆಡಳಿತ ಶುರುವಾಗಲಿದೆ. ಇನ್ನೊಂದೆಡೆ ಚುನಾವಣೆ ಚಟುವಟಿಕೆ ಕೂಡ ಗರಿಗೆದರಿದೆ. ಲೋಕಾಪುರ ಹಾಗೂ ಬೆಳಗಲಿ ಪಟ್ಟಣ ಪಂಚಾಯತಿ ಹೊರತುಪಡಿಸಿ ಮುಧೋಳ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು ೨೨ ಗ್ರಾಪಂಗಳಿವೆ. ಬಹುತೇಕ ಗ್ರಾಮ ಚುನಾಯಿತ ಪ್ರತಿನಿಧಿಗಳ ಅಧಿಕಾರವಧಿ ಫೆಬ್ರವರಿ ತಿಂಗಳಲ್ಲಿ ಕೊನೆಗೊಳ್ಳಲಿದೆ.
ಗರಿಗೆದರಿದ ಚಟುವಟಿಕೆ:ಚುನಾಯಿತ ಪ್ರತಿನಿಧಿಗಳ ಅಧಿಕಾರಾವಧಿ ಮುಕ್ತಾಯಗೊಳ್ಳಲಿರುವ ಕಾರಣದಿಂದ ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ತುರುಸಿನಿಂದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಮೂರ‍್ನಾಲ್ಕು ತಿಂಗಳಿಂದ ಆ್ಯಕ್ಟಿವ್ ಆಗಿರುವ ಹಾಲಿ ಸದಸ್ಯರು, ಗ್ರಾಪಂಗೆ ಬಂದಿರುವ ೨೦೨೫-೨೬ನೇ ಸಾಲಿನ ಅನುದಾನದ ಬಳಕೆಗೆ ಮುಂದಾಗಿದ್ದಾರೆ. ಚುನಾಯಿತ ಪ್ರತಿನಿಧಿಗಳ ಅವಧಿ ಮುಗಿದರೆ ೨೦೨೫-೨೬ನೇ ಸಾಲಿನ ಅನುದಾನ ವಾಪಸ್ ಹೋಗಲಿದ್ದು, ಹೀಗಾಗಿ ಈ ಹಿಂದೆ ರೂಪಿಸಿದ ಕ್ರಿಯಾಯೋಜನೆ ಅನುಸಾರ ಅಧ್ಯಕ್ಷರ ಅನುಮೋದನೆ ಪಡೆದು ಕಾಮಗಾರಿಗೆ ತ್ವರಿತ ಚಾಲನೆ ನೀಡಿ ಗ್ರಾಮಗಳ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡಿದ್ದಾರೆ.
ಯಾವ್ಯಾವ ಗ್ರಾಪಂಗಳಿಗೆ ಆಡಳಿತಾಧಿಕಾರಿಗಳ ನೇಮಕ: ಭಂಟನೂರ, ಚಿಂಚಖಂಡಿ ಕೆ.ಡಿ., ದಾದನಟ್ಟಿ, ಹಲಗಲಿ, ಹೆಬ್ಬಾಳ, ಇಂಗಳಗಿ, ಕಸಬಾಜಂಬಗಿ, ಕುಳಲಿ, ಮಾಚಕನೂರ, ಮಳಲಿ, ಮಂಟೂರು, ಮೆಟಗುಡ್ಡ, ಮುಗಳಖೋಡ, ನಾಗರಾಳ, ಶಿರೋಳ, ಉತ್ತೂರ, ವಜ್ಜರಮಟ್ಟಿ, ಒಂಟಗೋಡಿ, ಸೋರಗಾಂವ, ಮೆಳ್ಳಿಗೇರಿ, ಬರಗಿ, ಗುಲಗಾಲಜಂಬಗಿ ಗ್ರಾಪಂಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಪಂಚಾಯತಿ ವ್ಯಾಪ್ತಿಯಲ್ಲಿನ ದೈನಂದಿನ ಕೆಲಸಗಳು, ಸಿಬ್ಬಂದಿ ಮೇಲ್ವಿಚಾರಣೆ, ತೆರಿಗೆ ವಸೂಲಿ, ಅಭಿವೃದ್ಧಿ ಕಾರ್ಯಗಳ ಮೇಲ್ವಿಚಾರಣೆ, ಸರ್ಕಾರದ ಅನುದಾನಗಳ ಸಮರ್ಪಕ ಬಳಕೆ, ಆಸ್ತಿ ದಾಖಲೆಗಳ ನಿರ್ವಹಣೆ, ಗ್ರಂಥಾಲಯಗಳ ಮೇಲ್ವಿಚಾರಣೆ ಸೇರಿದಂತೆ ಅನೇಕ ಜವಾಬ್ದಾರಿಗಳನ್ನು ಆಡಳಿತಾಧಿಕಾರಿಗಳು ನಿರ್ವಹಿಸಲಿದ್ದಾರೆ.
೨೦೨೦-೨೫ನೇ ಸಾಲಿಗೆ ರಚಿತವಾಗಿದ್ದ ಗ್ರಾಪಂಗಳ ಅವಧಿ ಮುಕ್ತಾಯವಾಗುತ್ತಿದೆ. ಈ ಹಿನ್ನೆಲೆ ಗ್ರಾಪಂಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದೆ. ಸರಕಾರದ ಸುತ್ತೋಲೆಯಲ್ಲಿ ನೀಡುವ ಸೂಚನೆಯಂತೆ ಆಡಳಿತಾಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಡಿ. ಸಂಗಪ್ಪ ಸೂತ್ತೋಲೆ ಹೊರಡಿಸಿದ್ದಾರೆ. -ಜಿಪಂ, ತಾಪಂ ಚುನಾಯಿತ ಪ್ರತಿನಿಧಿಗಳ ಅವಧಿ ಮುಗಿದು ಹಲವು ವರ್ಷ ಕಳೆದಿವೆ. ನಮ್ಮ ಅವಧಿ ಮುಕ್ತಾಯದ ನಂತರವೂ ಚುನಾವಣೆ ಮುಂದೂಡಿದರೆ ಗ್ರಾಮದ ಅಭಿವೃದ್ಧಿಗೆ ಪೆಟ್ಟು ಬೀಳಲಿದೆ. ಶೀಘ್ರವೇ ನಿಗದಿತ ಅವಧಿಯಲ್ಲಿ ಚುನಾವಣೆ ನಡೆದರೆ ಒಳ್ಳೆಯದು.
ಮಾಜಿ ಅಧ್ಯಕ್ಷರ ಕಲಾವಧಿಯಲ್ಲಿನ ಜವಾಬ್ದಾರಿಗಳನ್ನು ಯಥಾವತ್ತಾಗಿ ಗ್ರಾಮ ಪಂಚಾಯತಿಯಲ್ಲಿ ಆಡಳಿತಾಧಿಕಾರಿಗಳು ಕಾರ್ಯನಿರ್ವಹಿಸುತ್ತಾರೆ.
ಬಹುತೇಕ ಗ್ರಾಮ ಪಂಚಾಯತಿ ಚುನಾಯಿತ ಪ್ರತಿನಿಧಿಗಳ ೫ ವರ್ಷದ ಅಧಿಕಾರವಧಿ ಫೆಬ್ರವರಿ ಮೊದಲ ವಾರದಲ್ಲಿ ಮುಕ್ತಾಯಗೊಂಡಿದ್ದು, ಇನ್ನೂ ಕೆಲವೆಡೆ ಕೆಲವೇ ದಿನಗಳಲ್ಲಿ ಮುಕ್ತಾಯಗೊಳ್ಳಲಿವೆ. ಗ್ರಾಪಂ ಆಡಳಿತಾಧಿಕಾರಿ ನೇಮಕಕ್ಕೆ ಸಂಂಬಂಧಿಸಿದಂತೆ ಜ.೨೮ರಂದು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು, ಆದೇಶದ ಪ್ರಕಾರ ಎಲ್ಲ ಗ್ರಾಮ ಪಂಚಾಯತಿಗಳಿಗೆ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ.