ಕೂಜಿಮಲೆಗೆ ನಕ್ಸಲರ ಭೇಟಿ ಹಿನ್ನೆಲೆ: ಕೂಂಬಿಂಗ್ ಮತ್ತಷ್ಟು ವಿಸ್ತರಣೆ

KannadaprabhaNewsNetwork | Published : Mar 20, 2024 1:24 AM

ಸಾರಾಂಶ

ನಕ್ಸಲ್ ನಿಗ್ರಹ ಪಡೆಯ ಎಸ್.ಪಿ. ಜಿತೇಂದ್ರಕುಮಾರ್, ಡಿವೈಎಸ್ಪಿ ರಾಘವೇಂದ್ರ ಮಡಿಕೇರಿಯಲ್ಲಿ ಮೊಕ್ಕಾಂ ಹೂಡಿದ್ದಾರೆ. ಕೂಜಿಮಲೆ ಪ್ರದೇಶಕ್ಕೆ ಮಂಗಳವಾರ ಮಡಿಕೇರಿ ಪೊಲೀಸ್ ಅಧಿಕಾರಿಗಳ ತಂಡ ಭೇಟಿ ನೀಡಿದೆ.

ಸುಳ್ಯ: ಕೂಜಿಮಲೆಗೆ ಶನಿವಾರ ಭೇಟಿ ಕೊಟ್ಟವರು ನಕ್ಸಲರೇ ಎಂದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹ ಪಡೆಯಿಂದ ಆರಂಭಗೊಂಡಿರುವ ಕೂಂಬಿಂಗ್ ಕಾರ್ಯಾಚರಣೆ ಮಂಗಳವಾರ ಮತ್ತಷ್ಟು ಪ್ರದೇಶಗಳಿಗೆ ವಿಸ್ತರಣೆಯಾಗಿದೆ ಎಂದು ತಿಳಿದುಬಂದಿದೆ.

ಸೋಮವಾರ ಕೂಜಿಮಲೆಗೆ ಬಂದಿದ್ದ ನಕ್ಸಲ್ ನಿಗ್ರಹ ಪಡೆಯವರು ಮೂರು ಪ್ರದೇಶಗಳಿಂದ ಕೂಂಬಿಂಗ್ ನಡೆಸಿದ್ದರು.

ಮಂಗಳವಾರ ಈ ಪ್ರದೇಶದ ಎರಡು ಕಡೆಗಳಲ್ಲಿ ಕಾರ್ಯಾಚರಣೆ ನಡೆದಿದ್ದರೆ ಪುಷ್ಪಗಿರಿ ಅರಣ್ಯ ಪ್ರದೇಶದ ಬಿಸಿಲೆ ಹಾಗೂ ಬ್ರಹ್ಮಗಿರಿ ಅರಣ್ಯದ ಚೆಂಬು, ಕರಿಕೆ ಪ್ರದೇಶಗಳಲ್ಲೂ ಕಾರ್ಯಾಚರಣೆ ನಡೆಯುತ್ತಿದೆ.‌ ಮುಂದಿನ ಕೆಲವು ದಿನಗಳ ಕಾಲ ಈ ಅರಣ್ಯ ಶ್ರೇಣಿಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಯಲಿರುವುದಾಗಿ ತಿಳಿದು ಬಂದಿದೆ.

ನಕ್ಸಲ್ ನಿಗ್ರಹ ಪಡೆಯ ಎಸ್.ಪಿ. ಜಿತೇಂದ್ರಕುಮಾರ್, ಡಿವೈಎಸ್ಪಿ ರಾಘವೇಂದ್ರ ಮಡಿಕೇರಿಯಲ್ಲಿ ಮೊಕ್ಕಾಂ ಹೂಡಿದ್ದಾರೆ. ಕೂಜಿಮಲೆ ಪ್ರದೇಶಕ್ಕೆ ಮಂಗಳವಾರ ಮಡಿಕೇರಿ ಪೊಲೀಸ್ ಅಧಿಕಾರಿಗಳ ತಂಡ ಭೇಟಿ ನೀಡಿದೆ. ಕೂಜಿಮಲೆಗೆ ಬಂದವರು ನಕ್ಸಲ್‌ ಸಂಘಟನೆ ಸದಸ್ಯರು: ಕೊಡಗು ಎಸ್ಪಿಕನ್ನಡಪ್ರಭ ವಾರ್ತೆ ಮಡಿಕೇರಿಕೊಡಗು-ದಕ್ಷಿಣ ಕನ್ನಡದ ಗಡಿ ಭಾಗದ ಕೂಜಿಮಲೆ ರಬ್ಬರ್ ಎಸ್ಟೇಟ್ ಅಂಗಡಿಗೆ ಬಂದು ದಿನಸಿ ಪದಾರ್ಥ ತೆಗೆದುಕೊಂಡು ಹೋಗಿರುವ ಶಂಕಿತ ವ್ಯಕ್ತಿಗಳು ನಿಷೇಧಿತ ನಕ್ಸಲ್ ಸಂಘಟನೆಯ ಸದಸ್ಯರಾಗಿದ್ದಾರೆ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಸ್ಪಷ್ಟಪಡಿಸಿದ್ದಾರೆ.ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಎಸ್.ಪಿ. ರಾಮರಾಜನ್, ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರು ಶಸ್ತ್ರ ಸಜ್ಜಿತರಾಗಿ ಮಾ. ೧೭ರ ಸಂಜೆ ವೇಳೆ ಕೂಜಿಮಲೆ ರಬ್ಬರ್ ಎಸ್ಟೇಟ್‌ನ ಅಂಗಡಿಗೆ ಆಗಮಿಸಿ ೨೫ ಕೆ.ಜಿ ಅಕ್ಕಿ ಸಹಿತ ಇತರ ವಸ್ತುಗಳನ್ನು ಖರೀದಿ ಮಾಡಿದ್ದಾರೆ. ಈ ವೇಳೆ ಕನ್ನಡ ಭಾಷೆಯಲ್ಲಿ ತಮ್ಮನ್ನು ನಕ್ಸಲ್ ಹೋರಾಟಗಾರರು ಎಂದೇ ಪರಿಚಯಿಸಿಕೊಂಡಿದ್ದಲ್ಲದೇ, ನಮ್ಮ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ತಿಳಿಸಿದ್ದಾರೆ ಎಂದು ಹೇಳಿದರು.ತನಿಖೆ ಸಂದರ್ಭ ಅಂಗಡಿ ಮಾಲೀಕರಿಗೆ ಕೆಲವು ಫೋಟೋಗಳನ್ನು ತೋರಿಸಿದ ಸಂದರ್ಭ ಓರ್ವ ವ್ಯಕ್ತಿ ನಕ್ಸಲ್ ಮುಖಂಡ ವಿಕ್ರಂ ಗೌಡನನ್ನು ಹೋಲುತ್ತಿರುವುದಾಗಿ ಹೇಳಿದ್ದಾರೆ. ಇನ್ನುಳಿದ ೩ ಮಂದಿಯ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ವಿವರಿಸಿದರು.

ಈ ನಕ್ಸಲ್ ಓಡಾಟ ಪ್ರಕರಣವನ್ನು ಜಿಲ್ಲಾ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ ಎಂದು ಎಸ್.ಪಿ. ರಾಮರಾಜನ್ ಸ್ಪಷ್ಟಪಡಿಸಿದರು.ನಕ್ಸಲ್ ಮುಖಂಡ ವಿಕ್ರಂ ಗೌಡ ಸಹಿತ ಇತರ ಮೂರು ಮಂದಿ ಶಸ್ತç ಸಜ್ಜಿತ ವ್ಯಕ್ತಿಗಳಿಗೆ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ನಕ್ಸಲ್ ನಿಗ್ರಹ ದಳದ ಕಮಾಂಡೋಗಳ ಸಹಿತ ಶ್ವಾನ ದಳ ಮತ್ತು ಡ್ರೋನ್ ಕ್ಯಾಮರಾಗಳನ್ನು ಕೂಡ ಬಳಸಲಾಗುತ್ತಿದೆ. ಕೂಜಿಮಲೆ ಅರಣ್ಯ ಪ್ರದೇಶ ದಟ್ಟ ಕಾಡಿನ ಸಹಿತ ತೀವ್ರ ಕಣಿವೆಗಳಿಂದ ಕೂಡಿರುವ ಹಿನ್ನೆಲೆಯಲ್ಲಿ ಈ ರೀತಿಯ ಕಾರ್ಯಾಚರಣೆ ನಡೆಸಲಾಗುತ್ತಿದೆ. ನಕ್ಸಲ್ ನಿಗ್ರಹ ದಳದ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಅವರು ಕೂಡ ಜಿಲ್ಲೆಗೆ ಆಗಮಿಸಿ ಕೂಂಬಿಂಗ್ ಕಾರ್ಯಾಚರಣೆ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಕೂಜಿಮಲೆ ರಬ್ಬರ್ ಎಸ್ಟೇಟ್‌ನ ಅಂಗಡಿಗೆ ಬಂದಿರುವ ನಕ್ಸಲರು ಎತ್ತ ಕಡೆ ತೆರಳಿರುವ ಸಾಧ್ಯತೆ ಇದೆ ಎಂದು ಗುಪ್ತಚರ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ. ಈ ಕುರಿತು ನೆರೆ ಜಿಲ್ಲೆಗಳು ಮತ್ತು ಕೇರಳ ರಾಜ್ಯದ ಗುಪ್ತಚರ ಇಲಾಖೆಗಳಿಂದಲೂ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ವಿವರಿಸಿದರು.ಈ ಹಿಂದಿನ ಪ್ರಕರಣಗಳನ್ನೂ ಗಮನಿಸಲಾಗುತ್ತಿದ್ದು, ಇದೀಗ ಕಂಡು ಬಂದಿರುವ ನಕ್ಸಲರ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ ಅವರು, ನಕ್ಸಲ್ ಮುಖಂಡ ವಿಕ್ರಂ ಗೌಡ ವಿರುದ್ದ ೨೦೧೮ರಲ್ಲಿ ಸಂಪಾಜೆ ಭಾಗದಲ್ಲಿ ಗ್ರಾಮಸ್ಥರಿಗೆ ಬೆದರಿಕೆ ಒಡ್ಡಿದ ಬಗ್ಗೆಯೂ ೧ ಪ್ರಕರಣ ದಾಖಲಾಗಿದೆ. ನಕ್ಸಲ್ ನಿಗ್ರಹ ದಳದ ತಂಡದೊಂದಿಗೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ೨೫ ಮಂದಿ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಿ ಇಂತಹ ಕಠಿಣ ಪರಿಸ್ಥಿತಿಗಳನ್ನು ಎದುರಿಸಲು ಸಜ್ಜುಗೊಳಿಸಲಾಗಿದೆ ಎಂದು ವಿವರಿಸಿದರು.

Share this article