ಶ್ರೀಶೈಲೇಶ್ವರ ವಿದ್ಯಾಕೇಂದ್ರದಲ್ಲಿ ಮೊಳಗಿದ ವಿವೇಕ ವಾಣಿ

KannadaprabhaNewsNetwork |  
Published : Jan 13, 2026, 02:30 AM IST
ಸಂಡೂರಿನ ಶ್ರೀಶೈಲೇಶ್ವರ ವಿದ್ಯಾಕೇಂದ್ರದ ಕನ್ನಡ ಮಾಧ್ಯಮ ಶಾಲೆಯಲ್ಲಿ ಸೋಮವಾರ ರಾಷ್ಟಿçÃಯ ಯುವ ದಿನದ ಅಂಗವಾಗಿ ಹಲವು ವಿದ್ಯಾರ್ಥಿಗಳು ಹಾಗೂ ಮುಖ್ಯಶಿಕ್ಷಕರು ಸ್ವಾಮಿ ವಿವೇಕಾನಂದರ ವೇಷಭೂಷಣ ಧರಿಸಿ ಭಾಗವಹಿಸಿ, ನೋಡುಗರ ಗಮನ ಸೆಳೆದರು. | Kannada Prabha

ಸಾರಾಂಶ

ಶ್ರೀಶೈಲೇಶ್ವರ ವಿದ್ಯಾಕೇಂದ್ರದ ಕನ್ನಡ ಮಾಧ್ಯಮ ಶಾಲೆ ಹಾಗೂ ಭಾರತೀಯ ಸುರಾಜ್ಯ ಸಂಸ್ಥೆ ಸಂಡೂರು ಘಟಕದ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಯುವ ದಿನವನ್ನು ಅತ್ಯಂತ ಅರ್ಥಗರ್ಭಿತವಾಗಿ ಆಚರಿಸಲಾಯಿತು.

ಸಂಡೂರು: ಏಳಿ, ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ಸ್ವಾಮಿ ವಿವೇಕಾನಂದರ ವೀರವಾಣಿ ಪಟ್ಟಣದ ಶ್ರೀಶೈಲೇಶ್ವರ ವಿದ್ಯಾಕೇಂದ್ರದ ಕನ್ನಡ ಮಾಧ್ಯಮ ಶಾಲಾ ಆವರಣದಲ್ಲಿ ಸೋಮವಾರ ಪ್ರತಿಧ್ವನಿಸಿತು.

ಶ್ರೀಶೈಲೇಶ್ವರ ವಿದ್ಯಾಕೇಂದ್ರದ ಕನ್ನಡ ಮಾಧ್ಯಮ ಶಾಲೆ ಹಾಗೂ ಭಾರತೀಯ ಸುರಾಜ್ಯ ಸಂಸ್ಥೆ ಸಂಡೂರು ಘಟಕದ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಯುವ ದಿನವನ್ನು ಅತ್ಯಂತ ಅರ್ಥಗರ್ಭಿತವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ವಿವೇಕಾನಂದರ ವೇಷಧಾರಿಗಳಾಗಿ ಕಂಗೊಳಿಸುತ್ತಿದ್ದ ವಿದ್ಯಾರ್ಥಿಗಳನ್ನು ಶಾಲೆಯ ಮುಖ್ಯದ್ವಾರದಲ್ಲಿ ಪುಷ್ಪವೃಷ್ಟಿಯ ಮೂಲಕ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು. ಇದು ನೆರೆದಿದ್ದವರಲ್ಲಿ ಭಕ್ತಿ ಹಾಗೂ ದೇಶಪ್ರೇಮದ ಭಾವವನ್ನು ಜಾಗೃತಗೊಳಿಸಿತು. ಆರನೇ ತರಗತಿಯ ವಿದ್ಯಾರ್ಥಿ ಸರ್ವೇಶ್ ಮಹೇಶ್ ದೇವರಮನಿ, ಚಿಕಾಗೋ ಸಮ್ಮೇಳನದ ಐತಿಹಾಸಿಕ ಭಾಷಣವನ್ನು ಮನೋಜ್ಞವಾಗಿ ಪ್ರಸ್ತುತಪಡಿಸಿ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರನಾದನು. ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಬಸವನಗೌಡ ಟಿ.ಆರ್.ಅವರು ಸ್ವತಃ ವಿವೇಕಾನಂದರ ವೇಷ ಧರಿಸಿ ವೇದಿಕೆಯ ಮೇಲೆ ಕಾಣಿಸಿಕೊಂಡಿದ್ದು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.

ಸಂಸ್ಥೆಯ ಆಡಳಿತಾಧಿಕಾರಿ ಕುಮಾರ್‌ಎಸ್ ನಾನಾವಟೆ ಮಾತನಾಡಿ, ಸ್ವಾಮಿ ವಿವೇಕಾನಂದರು ಆಧುನಿಕ ಭಾರತದ ಅತ್ಯಂತ ಪ್ರಭಾವಶಾಲಿ ಆಧ್ಯಾತ್ಮಿಕ ಗುರು ಮತ್ತು ಯುವ ಜನತೆಯ ನಿತ್ಯ ಸ್ಫೂರ್ತಿಯ ಸೆಲೆ. ನರೇಂದ್ರನು ಬಾಲ್ಯದಿಂದಲೇ ತೀಕ್ಷ್ಣ ಬುದ್ಧಿಶಕ್ತಿ, ಧೈರ್ಯ ಮತ್ತು ಆಧ್ಯಾತ್ಮಿಕ ಕುತೂಹಲ ಹೊಂದಿದ್ದ ಬಾಲಕನಾಗಿದ್ದನು. ಸತ್ಯದ ಶೋಧನೆಯಲ್ಲಿದ್ದ ನರೇಂದ್ರನು ಶ್ರೀ ರಾಮಕೃಷ್ಣ ಪರಮಹಂಸರನ್ನು ಭೇಟಿಯಾದದ್ದು ಅವರ ಜೀವನದ ದೊಡ್ಡ ತಿರುವು. ಅಮೆರಿಕದ ಚಿಕಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿ, ಅಮೆರಿಕದ ನನ್ನ ಸಹೋದರ ಸಹೋದರಿಯರೇ ಎಂಬ ಅವರ ಮೊದಲ ನುಡಿ ಕೇಳಿ ಸಭಾಂಗಣದಲ್ಲಿ ನಿರಂತರವಾಗಿ ಚಪ್ಪಾಳೆ ಮೊಳಗಿತು. ಈ ಭಾಷಣದ ಮೂಲಕ ಹಿಂದೂ ಧರ್ಮದ ಶ್ರೇಷ್ಠತೆ ಮತ್ತು ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದರು ಎಂದು ತಿಳಿಸಿದರು.

ಮಕ್ಕಳಿಂದ ವಿವೇಕ ವಾಣಿ:

ನರ್ಸರಿ ವಿಭಾಗದ ಪುಟ್ಟ ಮಕ್ಕಳು ವಿವೇಕಾನಂದರ ಉಡುಗೆಯಲ್ಲಿ ಮಿಂಚುತ್ತಾ ಅವರ ಅಮೃತ ನುಡಿಗಳನ್ನು ಉಚ್ಚರಿಸಿದ್ದು ನೋಡುಗರ ಮನಸೂರೆಗೊಂಡಿತು. ದೇವೇಂದ್ರಪ್ಪ ಸೊಬಟಿ ಕಾರ್ಯಕ್ರಮ ನಿರೂಪಿಸಿದರು, ಲೋಕೇಶ್ ಬಿ.ಸ್ವಾಗತಿಸಿದರು ಹಾಗೂ ರೂಪಾ ಟಿ. ವಂದಿಸಿದರು.

ಶಾಲೆಯ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ಪಾಲಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಗೆ ರಾಷ್ಟ್ರೀಯಯುವ ದಿನಾಚರಣೆ ನಿಮಿತ್ತ ವಿವೇಕಾನಂದರ ಕುರಿತಂತೆ ಏರ್ಪಡಿಸಿದ್ದ ಭಾಷಣ, ಪ್ರಬಂಧ ಸ್ಪರ್ಧೆ, ಚಿತ್ರಕಲೆ ಮತ್ತು ಛದ್ಮವೇಷದ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆಕೋರಿಕೆ:ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ