ಕನ್ನಡಪ್ರಭ ವಾರ್ತೆ ಕಲಬುರಗಿ/ಸೇಡಂ
ಕಲಬುರಗಿ ಜಿಲ್ಲೆ ಸೇಡಂ ಮತ್ತು ಯಡ್ರಾಮಿಗಳಲ್ಲಿ ಸೋಮವಾರ ಸುಮಾರು ₹1,595 ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಚುನಾವಣೆ ಪೂರ್ವ ನೀಡಿದ ಭರವಸೆಯಂತೆ ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವುದರ ಜೊತೆಗೆ 592 ಭರವಸೆಗಳ ಪೈಕಿ 243 ಭರವಸೆ ಈಡೇರಿಸುವ ಮೂಲಕ ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿರುವುದು ಬಡವರ ಸರ್ಕಾರ. ನುಡಿದಂತೆ ನಡೆಯುವ ಸರ್ಕಾರ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದೇವೆ ಎಂದು ಅವರು ಹೇಳಿದರು.
ಕಳೆದ ಎರಡೂವರೆ ವರ್ಷದಲ್ಲಿ ಗ್ಯಾರಂಟಿ ಯೋಜನೆಗಳಿಗೆ 1.12 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡಿದ್ದೇವೆ. ಆರಂಭದಲ್ಲಿ ಇಂತಹ ಯೋಜನೆಗಳನ್ನು ವಿರೋಧಿಸಿದ ಬಿಜೆಪಿಯವರು, ಇವುಗಳನ್ನು ಜಾರಿ ಮಾಡಿದರೆ ರಾಜ್ಯ ದಿವಾಳಿಯಾಗುತ್ತೆ ಎಂದಿದ್ದರು. ಯಡ್ರಾಮಿಯಲ್ಲಿ ₹906 ಕೋಟಿ ಮತ್ತು ಸೇಡಂನಲ್ಲಿ ₹688 ಕೋಟಿ ಸೇರಿ ಸುಮಾರು ₹1,595 ಕೋಟಿಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇವೆ. ರಾಜ್ಯ ದಿವಾಳಿಯಾಗಿದ್ದರೆ ಇದು ಸಾಧ್ಯವಾಗುತ್ತಿತ್ತಾ ಎಂದು ಪ್ರಶ್ನಿಸಿದರು.ಕಲ್ಯಾಣ ಕರ್ನಾಟಕಕ್ಕೆ ಅಭಿವೃದ್ಧಿಗೆ ಒತ್ತು:
ನಮ್ಮ ಸರ್ಕಾರ ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರ ಒತ್ತಾಯದ ಮೇರೆಗೆ ಸೇಡಂ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಗೇರಿಸಿದ್ದೇವೆ. ಕಲಬುರಗಿ ಜಿಲ್ಲೆಯಲ್ಲಿ ಸುಮಾರು 1,595 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇವೆ. ಹತ್ತು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅಸಮಾನತೆ ಹೋಗಿ ಸಮಾನತೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.371ಜೆ ಜಾರಿ ಪರಿಣಾಮ 10 ಸಾವಿರ ಡಾಕ್ಟರ್ಸ್, 30 ಸಾವಿರ ಎಂಜಿನಿಯರ್, 12 ಸಾವಿರ ಜನ ಡೆಂಟಲ್, ಕೃಷಿ ಪದವಿ ಪಡೆಯಲು ಸಾಧ್ಯವಾಯಿತು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಗರಿಷ್ಠ ಶೇ.80 ಮತ್ತು ಉಳಿದ ಪ್ರದೇಶದಲ್ಲಿ ಶೇ.8ರಂತೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಯನ್ನು ನಮ್ಮ ಸರ್ಕಾರ ಜಾರಿಗೆ ತಂದಿದೆ. ಪರಿಣಾಮ 85 ಸಾವಿರ ಸ್ಥಳೀಯ ಜನರು ಉದ್ಯೋಗ ಪಡೆಯಲು ಸಫಲರಾಗಿದ್ದು, ಬಾಕಿ ಹುದ್ದೆಗಳನ್ನು ಸಹ ಹಂತ-ಹಂತವಾಗಿ ತುಂಬಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.ನನ್ನ ಕ್ಷೇತ್ರ ಉ.ಕ.ದಲ್ಲಿ ಇರಬೇಕಿತ್ತು, ಡಿಕೆಶಿ:ಕಲಂ 371 ಜೆ ನಿಂದಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಸಾಕಷ್ಟು ಅನುದಾನ ಹರಿದು ಬರುತ್ತಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಸಾವಿರಾರು ಕೋಟಿ ರುಪಾಯಿಗಳ ಅನುದಾನ ಹರಿದು ಬರುತ್ತಿದೆ. ಇದನ್ನು ನೋಡಿದರೆ ನಾನೂ ಇಲ್ಲೇ ಹುಟ್ಟಬೇಕಿತ್ತು. ನನ್ನ ಕ್ಷೇತ್ರ ಇಲ್ಲಿಯೇ ಇರಬೇಕಿತ್ತು ಎನಿಸುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.ಕಲಬುರಗಿ ಜಿಲ್ಲೆ ಯಡ್ರಾಮಿಯಲ್ಲಿ ಸೋಮವಾರ ನಡೆದ ಪ್ರಜಾಸೌಧ ಹಾಗೂ 300 ಕೆಪಿಎಸ್ ಶಾಲೆಗಳ ನಿರ್ಮಾಣ ಯೋಜನೆಗೆ ಅಡಿಗಲ್ಲಿಟ್ಟು ಅವರು ಮಾತನಾಡಿದರು. ತಮ್ಮ ಭಾಷಣದಲ್ಲಿ ಕಲ್ಯಾಣ ಕರ್ನಾಟಕಕ್ಕೆ ಹರಿದು ಬರುತ್ತಿರುವ ಅನುದಾನದ ಕುರಿತು ಪ್ರಸ್ತಾಪಿಸಿದ ಡಿಕೆಶಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ನಮಗೆ ನೀವು ಶಕ್ತಿ ಕೊಟ್ಟಿದ್ದೀರಿ. ನಿಮ್ಮ ಋಣ ತೀರಿಸುವ ನಿಟ್ಟಿನಲ್ಲಿ ನಾವು ಇಲ್ಲಿಗೆ ಬಂದಿದ್ದೇವೆ. ಸಾವಿರಾರು ಕೋಟಿ ವೆಚ್ಚದ ಕಾಮಗಾರಿ ಅಡಿಗಲ್ಲು ಹಾಗೂ ಉದ್ಘಾಟನೆಗೆ ಬಂದಿದ್ದೇವೆ ಎಂದು ಹೇಳಿದರು.ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಭಿವೃದ್ದಿ ಕೆಲಸಗಳ ಸುರಿಮಳೆಯೇ ನಡೆಯುತ್ತಿದೆ. ಇಲ್ಲಿಗೆ ಹರಿದು ಬರುತ್ತಿರುವ ಅನುದಾನ ನೋಡಿದರೆ ನಾನೂ ಇಲ್ಲೇ ಹುಟ್ಟಬೇಕಿತ್ತು ಎನಿಸುತ್ತಿದೆ. ನಾನೂ ಸಹ ನಿಮ್ಮ ಭಾಗದಲ್ಲೇ ಹುಟ್ಟಿದ್ದರೆ ನಮಗೂ ಇಂತಹ ಅವಕಾಶ ಸಿಗುತ್ತಾ ಇತ್ತು ಎನಿಸುತ್ತಿದೆ. ನಾನು ನನ್ನ ಕ್ಷೇತ್ರದಲ್ಲಿ ಇಷ್ಟೊಂದು ದೊಡ್ಡ ಕಾರ್ಯಕ್ರಮ ನಡೆಸಲು ಸಾಧ್ಯವಾಗಿಲ್ಲ. ಅಂತಹ ಐತಿಹಾಸಿಕ ಕಾರ್ಯಕ್ರಮ ಯಡ್ರಾಮಿಯಲ್ಲಿ ನಡೆಯುತ್ತಿದೆ ಎಂದರು.
ನಾವು ನುಡಿದಂತೆ ನಡೆದಿದ್ದೇವೆ. ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಬೇಕು. ಈ ಹಿಂದೆ ಮಹಾತ್ಮ ಗಾಂಧಿ ಕುಳಿತ ಸ್ಥಳದಲ್ಲಿ ನಿಮ್ಮ ಭಾಗದವರೇ ಆದ ಮಲ್ಲಿಕಾರ್ಜುನ ಖರ್ಗೆ ಅವರು ಕುಳಿತಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರು ನಿಮ್ಮ ಭಾಗಕ್ಕೆ ಮರೆಯಲಾರದ ಭಾಗ್ಯ ಕೊಟ್ಟಿದ್ದಾರೆ ಎಂದರು.ಕಲ್ಯಾಣ ಕರ್ನಾಟಕ ಉದ್ಧಾರ ಮಾಡಿ, ಖರ್ಗೆ:‘ಶಿವಕುಮಾರ್ ಅವರೇ, ನೀವು ನಮ್ಮ ಭಾಗದಲ್ಲಿ ಹುಟ್ಟುವುದೂ ಬೇಡ, ನಾವು ನಿಮ್ಮ ಭಾಗದಲ್ಲಿ ಹುಟ್ಟುವುದೂ ಬೇಡ. ಮೈಸೂರು ಮತ್ತು ಕನಕಪುರ ಕ್ಷೇತ್ರಗಳು ಎಷ್ಟು ಅಭಿವೃದ್ಧಿ ಆಗಿವೆಯೋ ಅದರ ಶೇ.75ರಷ್ಟಾದರೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಆಗಲು ನೆರವು ನೀಡಿ’ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ, ಎಐಸಿಸಿ ಅಧ್ಯಕ್ಷ ಡಾ। ಮಲ್ಲಿಕಾರ್ಜುನ ಖರ್ಗೆ ಹೇಳಿದರು.ಕಲಬುರಗಿ ಜಿಲ್ಲೆ ಯಡ್ರಾಮಿಯಲ್ಲಿ ಸೋಮವಾರ ನಡೆದ ಪ್ರಜಾಸೌಧ ಹಾಗೂ 300 ಕೆಪಿಎಸ್ ಶಾಲೆಗಳ ನಿರ್ಮಾಣ ಯೋಜನೆಗೆ ಅಡಿಗಲ್ಲಿಟ್ಟು ಅವರು ಮಾತನಾಡಿದರು. ‘ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಸಾವಿರಾರು ಕೋಟಿ ರು.ಗಳ ಅನುದಾನ ಹರಿದು ಬರುತ್ತಿರುವುದನ್ನು ನೋಡಿದರೆ, ನಾನು ಇಲ್ಲಿಯೇ ಹುಟ್ಟಬೇಕಿತ್ತು ಎನಿಸುತ್ತಿದೆ’ ಎಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಅವರು ಟಾಂಗ್ ನೀಡಿದರು. ಮದುವೆ, ಸಮಾರಂಭಗಳಲ್ಲಿರುವಂತೆ ಬಫೆ ಊಟದಲ್ಲಿ ಮೊದಲು ಹೋದವರಿಗೆ ಸಾಕಷ್ಟು ಖಾದ್ಯ ಸಿಗುವಂತೆ ನೀವು ರಾಜಧಾನಿಯ ಸುತ್ತಲಿದ್ದೀರಿ. ಅಲ್ಲಿಂದಲೇ ನಿಮಗೆ ಮೊದಲಿನಿಂದಲೂ ಅನುದಾನ ಸಿಕ್ಕಿದೆ. ನಾವು ಪಂಕ್ತಿಯಲ್ಲಿ ಕುಂತವರು. ಯಾರಾದರೂ ಸರಿಯಾಗಿ ಬಡಿಸುತ್ತಾರೆಯೋ ಎಂದು ಕಾದಿದ್ದವರು. ನಮಗೆ ಮನಸೋ ಇಚ್ಚೆ ಅನುದಾನವೇ ಸಿಗಲಿಲ್ಲ ಎಂದು ಬಫೆ ಊಟ, ಪಂಕ್ತಿ ಊಟದ ಉದಾಹರಣೆ ಕೊಟ್ಟರು. ಈ ವೇಳೆ, ಸಭೆಯಲ್ಲಿ ನಗೆ ಮೂಡಿತು. ಈ ಮಾತನ್ನು ಶಿವಕುಮಾರ್ ಕೂಡ ನಗುತ್ತಲೇ ಆಲಿಸಿದರು.ಮೈಸೂರು, ಬೆಂಗಳೂರಿನ ಮಕ್ಕಳಿಗೆ ಉತ್ತಮ ಶಿಕ್ಷಣ, ಉದ್ಯೋಗಾವಕಾಶಗಳು ದೊರಕುತ್ತಿವೆ. ಕಲ್ಯಾಣ ನಾಡಿನ ಮಕ್ಕಳಿಗೆ ಇವೆರಡೂ ಸಿಗುತ್ತಿಲ್ಲ. ಹೀಗಾಗಿ ಇಲ್ಲಿ ಉತ್ತಮ ಶಿಕ್ಷಣ, ಉದ್ಯೋಗದ ಅವಕಾಶಗಳಿಗೆ ಪ್ರಸ್ತುತ ಸರ್ಕಾರ ಗಮನ ಹರಿಸಬೇಕು ಎಂದು ಆಗ್ರಹಿಸಿದರು.ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಾಲೆಗಳಿವೆ. ಆದರೆ, ಅದರೊಳಗೆ ಶಿಕ್ಷಕರೇ ಇಲ್ಲ. ಶಾಲೆ ಕಟ್ಟದಿದ್ದರೂ ಪರವಾಗಿಲ್ಲ, ಬೇವಿನ ಮರದ ಕೆಳಗೆ ಕುಂತಾದರೂ ಮಕ್ಕಳು ಕಲಿತಾರೆ. ಮೊದಲು ಕಲಿಸಲಿಕ್ಕೆ ಶಿಕ್ಷಕರನ್ನು ನೇಮಕ ಮಾಡಿ. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ನಾವು ಹಿಂದೆ ಬೀಳೋದಕ್ಕೆ ಶಾಲೆಗಳಿಗಿಂತ ಶಿಕ್ಷಕರ ಕೊರತೆಯೇ ಮೂಲ ಕಾರಣ ಎಂದು ಕಿವಿಮಾತು ಹೇಳಿದರು.