ಸಚಿವರ ಪುತ್ರನಿಗೆ ಜೈ ಎಂದ ಮತದಾರ

KannadaprabhaNewsNetwork |  
Published : Jun 05, 2024, 12:30 AM IST
ವರುಣಾ ವಿಧಾನಸಭಾ ಕ್ಷೇತ್ರ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಒಳಪಡಲಿದ್ದು | Kannada Prabha

ಸಾರಾಂಶ

ತೀವ್ರ ಜಿದ್ದಾಜಿದ್ದಿ, ಕುತೂಹಲ ಕೆರಳಿಸಿದ್ದ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ವಿಜಯ ಪತಾಕೆ ಹಾರಿಸಿದ್ದಾರೆ.

ದೇವರಾಜು ಕಪ್ಪಸೋಗೆ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ತೀವ್ರ ಜಿದ್ದಾಜಿದ್ದಿ, ಕುತೂಹಲ ಕೆರಳಿಸಿದ್ದ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ವಿಜಯ ಪತಾಕೆ ಹಾರಿಸಿದ್ದಾರೆ.ಚಾಮರಾಜನಗರದ ಬೇಡರಪುರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳವಾರ ನಡೆದ ಮತ ಎಣಿಕೆಯಲ್ಲಿ ಎದುರಾಳಿ ಬಿಜೆಪಿ ಅಭ್ಯರ್ಥಿ ವಿರುದ್ಧ ಸುನಿಲ್ ಬೋಸ್ ಗೆಲುವಿನ ನಗೆ ಬೀರಿ ಸಂಸತ್‌ಗೆ ಪ್ರವೇಶ ಮಾಡಿದ್ದಾರೆ. ಈ ಹಿಂದೆ 1991 ರಲ್ಲಿ ಡಾ.ಎಚ್.ಸಿ. ಮಹಾದೇವಪ್ಪ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿ.ಶ್ರೀನಿವಾಸ ಪ್ರಸಾದ್ ವಿರುದ್ಧ ಪರಾಭವಗೊಂಡಿದ್ದರು. ಈಗ, ಅದೇ ಕ್ಷೇತ್ರದಲ್ಲಿ ಪುತ್ರ ಸುನೀಲ್ ಬೋಸ್ ವಿಜಯ ಪತಾಕೆ ಹಾರಿಸಿ ಮೊದಲ ಚುನಾವಣೆಯಲ್ಲಿ ಗೆದ್ದು ಸಂಸತ್‌ಗೆ ಹಾರಿದ್ದಾರೆ.

ಮುಖ್ಯಮಂತ್ರಿಗೆ ಪ್ರತಿಷ್ಠೆಯಾಗಿದ್ದ ಕ್ಷೇತ್ರ:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರುಣಾ ವಿಧಾನಸಭಾ ಕ್ಷೇತ್ರ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಒಳಪಡಲಿದ್ದು, ತವರಿನಲ್ಲಿ ಕಾಂಗ್ರೆಸ್ ಗೆಲ್ಲಿಸಬೇಕಾದ ಪ್ರತಿಷ್ಠೆ ಎದುರಾಗಿತ್ತು. 2019ರಲ್ಲಿ ವಿ.ಶ್ರೀನಿವಾಸ ಪ್ರಸಾದ್ ಗೆಲ್ಲುವ ಮೂಲಕ ಮೊದಲ ಬಾರಿ ಕಮಲ ಅರಳಿಸಿದ್ದರು. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಚಾಮರಾಜನಗರವನ್ನು ಮತ್ತೇ ‘ಕೈ’ ವಶ ಮಾಡಿಕೊಳ್ಳುವಲ್ಲಿ ಸಿದ್ದರಾಮಯ್ಯ ಯಶ ಕಂಡಿದ್ದು, ತವರಿನಲ್ಲಿ ‘ಕೈ’ ಗೆ ಜನರು ಜೈ ಎಂದಿದ್ದಾರೆ. ಕಡಿಮೆ ಸಮಯದಲ್ಲಿ ವ್ಯಾಪಕ ಪ್ರಚಾರ, ಶಾಸಕರು ಜವಾಬ್ದಾರಿ ತೆಗೆದುಕೊಂಡು ಚುನಾವಣೆ ಪ್ರಕ್ರಿಯೆ ನಡೆಸಿದ್ದು, ಗ್ಯಾರಂಟಿ ಯೋಜನೆಗಳು ಕೈ ಹಿಡಿದದ್ದು ಸುನೀಲ್ ಬೋಸ್‌ಗೆ ಗೆಲುವು ತಂದುಕೊಟ್ಟಿದೆ ಎನ್ನಬಹುದಾಗಿದೆ.

ಸುನೀಲ್ ಬೋಸ್ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಮೊದಲ ಚುನಾವಣೆಯಲ್ಲೇ ಗೆಲುವಿನ ನಗೆ ಬೀರಿದ್ದು, ಸಚಿವ ಡಾ.ಎಚ್‌.ಸಿ.ಮಹಾದೇವಪ್ಪ ತಮ್ಮ ಮಗನನ್ನು ಗೆಲ್ಲಿಸಿಕೊಂಡು ಬರುವಲ್ಲಿ ಯಶ ಕಂಡಿದ್ದಾರೆ.ಸಿಎಂ ವರ್ಚಸ್ಸು ಉಳಿಸಿದ ಕ್ಷೇತ್ರ:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತವರು ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸೋಲು ಅನುಭವಿಸುವ ಮೂಲಕ ಮುಖಭಂಗ ಅನುಭವಿಸುವಂತಾಗಿದ್ದು, ಸ್ವ ಕ್ಷೇತ್ರ ವರುಣಾ ವಿಧಾನಸಭಾ ಕ್ಷೇತ್ರ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಒಳಪಡಲಿದ್ದು, ಚಾಮರಾಜನಗರ ಮೀಸಲು ಕ್ಷೇತ್ರದಲ್ಲಿ ಆಪ್ತ ಸ್ನೇಹಿತ ಡಾ.ಎಚ್‌.ಸಿ. ಮಹದೇವಪ್ಪ ಅವರ ಪುತ್ರ ಸುನೀಲ್‌ ಬೋಸ್‌ ಗೆಲುವು ತಂದು ಕೊಡುವ ಮೂಲಕ ಸಿದ್ದರಾಮಯ್ಯ ಅವರ ವರ್ಚಸ್ಸು ಹೆಚ್ಚುವಂತೆ ಮಾಡಿದ್ದಾರೆ. ಇದರಿಂದಾಗಿ ಸಿದ್ದರಾಮಯ್ಯ ಅವರಿಗೆ ತೀವ್ರ ಮುಖಭಂಗವಾಗುವುದು ತಪ್ಪಿದಂತಾಗಿದೆ. ಪ್ರತಿ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಸೋತರೂ ಚಾಮರಾಜನಗರ ಕೈ ಹಿಡಿಯುತ್ತಿತ್ತು. ಆದರೆ, ಕಳೆದ 2019ರ ಚುನಾವಣೆಯಲ್ಲಿ ಮೈಸೂರು ಮತ್ತು ಚಾಮರಾಜನಗರ ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಸೋಲುವ ಮೂಲಕ ಬಿಜೆಪಿ ಗೆಲುವು ಸಾಧಿಸಿತ್ತು. ಇದರಿಂದಾಗಿ ಸಿದ್ದರಾಮಯ್ಯ ಅವರಿಗೆ ತೀವ್ರ ಹಿನ್ನೆಡೆಯಾಗಿತ್ತು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ