ಕನ್ನಡಪ್ರಭ ವಾರ್ತೆ ಶಿರಸಿ
ಬೇಡ್ತಿ-ವರದಾ-ಧರ್ಮಾ ನದಿ ಜೋಡಣೆ ಯೋಜನೆಯ ವಿಸ್ತೃತ ವರದಿಯು ರಾಷ್ಟ್ರೀಯ ಜಲ ಅಭಿವೃದ್ಧಿ ನಿಗಮದಿಂದ ಲಭ್ಯವಾದ ಹಿನ್ನೆಲೆ ಈ ಯೋಜನೆಯಿಂದ ಪಶ್ಚಿಮಘಟ್ಟದ ನದಿ ಭಾಗದ ಜನರ ಸಂಸ್ಕೃತಿ, ಜೀವನಶೈಲಿ, ಜಲ ಮೂಲಗಳ ಮೇಲಿನ ಅವಲಂಬನೆ ಹಾಗೂ ಇಲ್ಲಿನ ಜೀವವೈವಿಧ್ಯದ ಮೇಲಾಗುವ ಪರಿಣಾಮಗಳ ಕುರಿತಾದ ಅಧ್ಯಯನ ನಡಿಗೆಯು ಯಶಸ್ವಿಯಾಗಿ ಸಂಪನ್ನಗೊಂಡಿತು.ಪಟ್ಟಣ ಹೊಳೆ-ಶಾಲ್ಮಲಾ ಜಲಾನಯನ ಪ್ರದೇಶದ ಸುಮಾರು 50 ಕಿಲೋಮೀಟರ್ ಗಳಷ್ಟು ಉದ್ದದ ನಡಿಗೆಯು ಅ. 25ರಿಂದ ದೇವನಹಳ್ಳಿಯ ಕಣಿವೆಕಾನಿನಿಂದ ಪ್ರಾರಂಭವಾಗಿ ಅ. 27ರಂದು ಶಾಲ್ಮಲಾ ನದಿಯ ಗಣೇಶಪಾಲಿನಲ್ಲಿ ಮುಕ್ತಾಯಗೊಂಡಿತು.
ಯೋಜನಾ ವರದಿಯಲ್ಲಿ ಹೇಳಿರುವಂತೆ ಸುಮಾರು 750 ಎಕರೆಯಷ್ಟು ಭೂ ಪ್ರದೇಶವನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಸ್ತಾವನೆಯಿದ್ದು, ಅಂದಾಜು ಒಂದು ಲಕ್ಷ ಮರಗಳಿಗೆ ಕೊಡಲಿ ಬೀಳುವ ಸಾಧ್ಯತೆಗಳಿವೆ. ಈಗಾಗಲೇ ಉತ್ತರಕನ್ನಡ ಜಿಲ್ಲೆಯ ನೈಸರ್ಗಿಕ ಸಂಪತ್ತು ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಬಳಕೆಯಾಗಿದ್ದು, ಇನ್ನು ಮುಂಬರುವ ಯೋಜನೆಗಳನ್ನು ಕೈಗೊಳ್ಳಲು ಜಿಲ್ಲೆಯ ಧಾರಣಾ ಸಾಮರ್ಥ್ಯವನ್ನು ತಿಳಿದುಕೊಳ್ಳಬೇಕು ಎಂಬ ಸಲಹೆಯು ಎಲ್ಲೆಡೆಯಿಂದ ಕೇಳಿಬರುತ್ತಿದೆ.ಸ್ವರ್ಣವಲ್ಲಿಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸಲಹೆಯಂತೆ ಡಾ. ನರಸಿಂಹ ಹೆಗಡೆ ಮಾನಿಗದ್ದೆ ಹಾಗೂ ಬಾಲಚಂದ್ರ ಹೆಗಡೆ ಸಾಯಿಮನೆ ಮಾರ್ಗದರ್ಶನದಲ್ಲಿ ಹಲವು ತಜ್ಞರನ್ನೊಳಗೊಂಡ ತಂಡವು ಈ ಅಧ್ಯಯನ ನಡಿಗೆಯನ್ನು ಪೂರೈಸಿತು.
ಈ ಸಂದರ್ಭ ಸ್ವರ್ಣವಲ್ಲಿಯ ಸೀಮಾ ಪರಿಷತ್ತು, ಆಡಳಿತ ಮಂಡಳಿಗಳನ್ನೊಳಗೊಂಡಂತೆ ಹಲವು ಸಂಘ ಸಂಸ್ಥೆಗಳು ಆಸಕ್ತಿಯಿಂದ ಭಾಗವಹಿಸಿ, ಅಧ್ಯಯನ ತಂಡಕ್ಕೆ ಬೇಕಾದ ವಸತಿ ಹಾಗೂ ಊಟೋಪಚಾರದ ವ್ಯವಸ್ಥೆ ಕಲ್ಪಿಸಿದವು.ದೇವನಹಳ್ಳಿಯ ವೀರಭದ್ರೇಶ್ವರ ಸಭಾಭವನದಲ್ಲಿ ಶ್ರೀ ಸ್ವರ್ಣವಲ್ಲಿಯ ಪರಮಪೂಜ್ಯರ ಸಂದೇಶದೊಂದಿಗೆ ಪ್ರಾರಂಭವಾದ ಸಭೆಯಲ್ಲಿ ಸ್ಥಳೀಯ ಸಂಘಟನೆಗಳ ಮುಖಂಡರು, ಸುತ್ತಮುತ್ತಲಿನ ಊರ ನಾಗರಿಕರು ಭಾಗವಹಿಸಿದ್ದರು. ಯೋಜನಾ ವರದಲ್ಲಿಯಲ್ಲಿರುವ ಮಾಹಿತಿಯ ಬಗ್ಗೆ ಇಲ್ಲಿ ಚರ್ಚಿಸಿ, ನದಿ ಜೋಡಣೆಯಂತಹ ಯೋಜನೆಗಳಿಂದ ನದಿ ಪಾತ್ರದ ಮುಂದುವರಿಕೆ ಪ್ರದೇಶದಲ್ಲಾಗುವ ತೊಂದರೆಗಳ ಬಗ್ಗೆ ತಜ್ಞ ಡಾ. ಪ್ರಕಾಶ ಮೇಸ್ತರು ಬಹಳ ವಿವರವಾಗಿ ಮಾಹಿತಿ ನೀಡಿದರು.
ಅಧ್ಯಯನ ತಂಡವು ನಡಿಗೆಯ ಮೂಲಕ ಹಲಸಿನಕಟ್ಟ, ಹಾಸಣಗಿ, ಮಣದೂರು ಗ್ರಾಮಗಳಲ್ಲಿ ಸ್ಥಳೀಯರೊಟ್ಟಿಗೆ ಸಭೆ ಸಂವಾದ ನಡೆಸಿ ಶಿರ್ಲಬೈಲ್ ಸಮೀಪದ ಎಪ್ಪಡಿಮಠವನ್ನು ಸೇರಿ ಮೊದಲ ದಿನದ ವಾಸ್ತವ್ಯ ಮಾಡಿತು.ಎಪ್ಪಡಿ ಮಠದಲ್ಲಿ ಸೇರಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿದ ಪರಿಸರ ತಜ್ಞ ಡಾ. ಪಾಂಡುರಂಗ ಹೆಗಡೆ ಮಾತನಾಡಿ, ಉತ್ತರಕನ್ನಡ ಜಿಲ್ಲೆಯ ಪರಿಸರ ಹೋರಾಟದ ಇತಿಹಾಸದ ಬಗ್ಗೆ ಬೆಳಕನ್ನು ಚೆಲ್ಲಿ, ಆ ಸ್ಥಳದಲ್ಲಿ ಅಪ್ಪಿಕೋ ಚಳುವಳಿಯು ಪ್ರಾರಂಭವಾದ ಬಗ್ಗೆ ನೆನಪನ್ನು ಹಂಚಿಕೊಂಡು, ನದಿ ಜೋಡಣೆಯಂತಹ ನಿಸರ್ಗ ಮಾರಕವಾದ ಯೋಜನೆಗಳನ್ನು ಮೊಳಕೆಯ ಹಂತದಲ್ಲಿಯೇ ಚಿವುಟಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಎರಡನೆಯ ದಿನದ ನಡಿಗೆಯಲ್ಲಿ ತಂಡವು ಮುರೆಗಾರು, ಮಾಗೋಡಗದ್ದೆ, ಗೋಣ್ಸರ ಊರಿನ ಮೂಲಕ ಸಾಗಿ ಆರೇಕಟ್ಟಿನಲ್ಲಿ ನಡೆದ ಗಂಗಾಪೂಜೆ ಹಾಗೂ ಸಭೆಯಲ್ಲಿ ಪಾಲ್ಗೊಂಡು ಪಟ್ಟಣದ ಹೊಳೆ ಅಂಚಿನ ಮಂಡೇಮನೆ, ಯಡಳ್ಳಿ, ಕೆರೆಗದ್ದೆ ಮಾರ್ಗವಾಗಿ ಧೂಳಳ್ಳಿಯನ್ನು ಸೇರಿತು.ಕೊನೆಯ ದಿನ ಧೂಳಳ್ಳಿಯ ಒಂದಂಕಿ ಕಾಡು (ರಾಮಪತ್ರೆ ಜಡ್ಡಿ) ಪ್ರದೇಶದಿಂದ ಪ್ರಾರಂಭವಾಯಿತು. ವಿಶ್ವದಲ್ಲೇ ಅತೀ ಅಪರೂಪದ ರಾಮಪತ್ರೆ ಜಡ್ಡಿ (swamp) ಪ್ರದೇಶದ ಮಾಹಿತಿಯನ್ನು ತಜ್ಞರ ತಂಡವು ಕಲೆಹಾಕಿ, ಕಾಲ್ನಡಿಗೆಯ ಗಮ್ಯ ಸ್ಥಾನವಾದ ಗಣೇಶಪಾಲನ್ನು ಸೇರಿ ಕ್ಷೇತ್ರಪಾಲನಿಗೆ ಪೂಜೆ ಸಲ್ಲಿಸಿ ಜಡ್ಡಿಗದ್ದೆಯಲ್ಲಿ ಸಭೆ ಸೇರಿದ್ದರು. ಅಧ್ಯಯನ ನಡಿಗೆಯ ಕೊನೆಯ ಭಾಗವಾದ ಸಮಾರೋಪ ಸಮಾವೇಶವನ್ನು ವಾನಳ್ಳಿಯ ಸೇವಾ ಸಹಕಾರ ಸಂಘದ ಸಭಾಭವನದಲ್ಲಿ ನಡೆಸಲಾಯಿತು.
ಕೆನಡಾದ ವಿನ್ನಿಪೆಗ್ ಯೂನಿವರ್ಸಿಟಿಯ ವಿಜ್ಞಾನಿ ಡಾ. ಮಹಾಬಲೇಶ್ವರ ಹೆಗಡೆ ಮಾತನಾಡಿ, ಸಾಂಸ್ಕೃತಿಕ ಶ್ರೀಮಂತಿಕೆ ಬರುವುದು ನೈಸರ್ಗಿಕ ಸಂಪನ್ಮೂಲಗಳು ಇದ್ದಾಗ ಮಾತ್ರ ಎನ್ನುವ ನಂಬಿಕೆಯನ್ನು ಬಲವಾಗಿ ಪ್ರತಿಪಾದಿಸಿದರು.ಭಾರತೀಯ ವಿಜ್ಞಾನ ಸಂಸ್ಥೆಯ ಹಿರಿಯ ವಿಜ್ಞಾನಿ, ಡಾ. ಎಂ.ಡಿ. ಸುಭಾಷ್ ಚಂದ್ರನ್ ಆನ್‌ಲೈನ್ ಮೂಲಕ ಭಾಗವಹಿಸಿ ಮಾತನಾಡಿ, ಪಶ್ಚಿಮ ಘಟ್ಟದ ನದಿಗಳು ಗಂಗಾ ನದಿಗಿಂತಲೂ ಹಳೆಯದಾದವು, ಅವುಗಳ ಅವೈಜ್ಞಾನಿಕ ಬಳಕೆಯಿಂದ ಪಶ್ಚಿಮ ಘಟ್ಟಕ್ಕೆ ವ್ಯತಿರಿಕ್ತ ಪರಿಣಾಮವಾಗುತ್ತದೆ ಎಂದರು.
ಪರಿಸರ ತಜ್ಞರಾದ ಬಾಲಚಂದ್ರ ಸಾಯಿಮನೆ ಹಾಗೂ ಡಾ. ನರಸಿಂಹ ಹೆಗಡೆ ಮಾತನಾಡಿದರು. ರಮಾಕಾಂತ ಮಂಡೇಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಸ್ವರ್ಣವಲ್ಲಿಯ ಆಡಳಿತ ಮಂಡಳಿಯ ಅಧ್ಯಕ್ಷ ವಿ.ಎನ್. ಹೆಗಡೆಯವರು ಉಪಸ್ಥಿತರಿದ್ದರು.ಅಧ್ಯಯನದ ಮುಂದುವರೆದ ಭಾಗವಾಗಿ ಸ್ವರ್ಣವಲ್ಲಿಯಲ್ಲಿ ನವೆಂಬರ್ ತಿಂಗಳಿನಲ್ಲಿ ನಡೆಯುವ ವಿಜ್ಞಾನ ಕಮ್ಮಟದಲ್ಲಿ ಅಧ್ಯಯನದ ಮಾಹಿತಿಯನ್ನು ಚರ್ಚಿಸಿ ಮುಂಬರುವ ಜ. 11ರಂದು ಶಿರಸಿಯಲ್ಲಿ ನಡೆಯುವ ಬೃಹತ್ ಸಮಾವೇಶ ಗುರಿಯಾಗಿರಿಸಿಕೊಂಡು ವರದಿ ಸಿದ್ಧಪಡಿಸುವ ಬಗ್ಗೆ ಯೋಚಿಸುವುದಾಗಿ ತೀರ್ಮಾನಿಸಲಾಯಿತು.