ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ
21 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ತಾಯ್ನಾಡಿಗೆ ಆಗಮಿಸಿದ ಯೋಧ ಮಹಾಂತೇಶ ನಾಗಪ್ಪ ಯರನಾಳ ಅವರನ್ನು ಸ್ವಾಗಿತಿಸಿ ಪಟ್ಟಣದ ಯಾತ್ರಿ ನಿವಾಸದಲ್ಲಿ ಸನ್ಮಾನಿಸಲಾಯಿತು.ಸಾನಿಧ್ಯ ವಹಿಸಿದ್ದ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಸೈನಿಕ, ಶಿಕ್ಷಕ,ಕೃಷಿಕ ಈ ಮೂವರು ದೇಶಕ್ಕೆ ಅತಿ ಅಗತ್ಯವಾಗಿ ಬೇಕು. ಇವರೆಲ್ಲರ ಸೇವೆ ಅತ್ಯಮೂಲ್ಯ. ಇವರ ಸೇವೆ ಅನನ್ಯ. ಈ ಮೂರು ರತ್ನಗಳಿಗೆ ಎಲ್ಲರೂ ಸದಾ ಗೌರವಿಸಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ತಾಯ್ನಾಡಿಗೆ ಆಗಮಿಸಿದ ಯೋಧ ಮಹಾಂತೇಶ ನಾಗಪ್ಪ ಯರನಾಳ ಅವರ ಸೇವೆ ಅನುಪಮವಾಗಿದೆ. ಈ ಕುಟುಂಬದ ಸಹೋದರರು ಸಹ ಸೇನೆಯಲ್ಲಿ ಸೇರ್ಪಡೆಯಾಗಿ ದೇಶ ಸೇವೆ ಸಲ್ಲಿಸುತ್ತಿರುವದು ಶ್ಲಾಘನೀಯ. ಇದು ನಮ್ಮ ಬಸವನಾಡಿಗೆ ಹೆಮ್ಮೆ ಸಂಗತಿಯಾಗಿದೆ ಎಂದರು.ಪಿಕೆಪಿಎಸ್ ಬ್ಯಾಂಕ್ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಮಾತನಾಡಿ, ನಾವೆಲ್ಲರೂ ದೇಶಭಕ್ತರು ಆಗಬೇಕು. ತಂದೆ-ತಾಯಿ, ಮಕ್ಕಳು, ಸ್ನೇಹಿತರನ್ನು ಸೇರಿದಂತೆ ಅಪಾರ ಬಂಧು-ಬಳಗವನ್ನು ಬಿಟ್ಟು ಗಡಿ ಕಾಯುವ ಯೋಧರು ನಮ್ಮ ಹೆಮ್ಮೆಯ ಸೈನಿಕರು ಇವರ ಸೇವೆ ಅನನ್ಯ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಲ.ರು.ಗೊಳಸಂಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ವಕೀಲ ಶಶಿಧರ ಅಡಿವೆಪ್ಪ ಯರನಾಳ , ಪುರಸಭೆ ಸದಸ್ಯ ಪ್ರವೀಣ ಪೂಜಾರಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ, ಮುಖಂಡರಾದ ಬಸಣ್ಣ ದೇಸಾಯಿಕಲ್ಲೂರ, ಸಿದ್ದಣ್ಣ ಕಲ್ಲೂರ ನಿವೃತ್ತ ಯೋಧರ ಸಂಘದ ಸದಸ್ಯರಾದ ಆರ್. ಐ. ಬಿರಾದಾರ, ಎಸ್. ಬಿ. ಕೊಟ್ರಶೆಟ್ಟಿ , ಎಂ. ಎಸ್. ತಳವಾರ , ಬಿ. ಬಿ. ಆವಟಗೇರಾ. ಪಿ. ಎಸ್. ಮುಕಾರ್ತಿಹಾಳ, ಶಿವು ಅಡಿಗಿಮನಿ, ಹನುಮಂತ ಬಾಗೇವಾಡಿ ಇತರರು ಇದ್ದರು. ಪಿ.ಎಸ್.ಬಾಗೇವಾಡಿ ಸ್ವಾಗತಿಸಿದರು. ಕೊಟ್ರೇಶ ಹೆಗ್ಡಾಳ ನಿರೂಪಿಸಿದರು. ಶಿವು ಅಡಿಗಿಮನಿ ವಂದಿಸಿದರು. ಇದೇ ಸಂದರ್ಭದಲ್ಲಿ ಯೋಧ ಮಹಾಂತೇಶ ನಾಗಪ್ಪ ಯರನಾಳ ಅವರನ್ನು ಶ್ರೀಗಳು, ವಿವಿಧ ಗಣ್ಯರು ಸನ್ಮಾನಿಸಿದರು.