ಕರೂರು ಹೋಬಳಿಯೆಲ್ಲೆಡೆ ಅಪ್ಪೆ ಮಿಡಿ ಘಮಲು

KannadaprabhaNewsNetwork |  
Published : Jan 31, 2026, 02:00 AM IST
28ಬ್ಯಾಕೋಡು01 ಬ್ಯಾಕೋಡು ರೈತರ ತೋಟದ ಪಕ್ಕದಲ್ಲಿ ಅಪ್ಪೆ ಮಾವಿನ ಮರ ಹೂ ಬಿಟ್ಟಿರುವುದು. | Kannada Prabha

ಸಾರಾಂಶ

ಮಲೆನಾಡಿನ ಘಟ್ಟದ ತಪ್ಪಲಿನಲ್ಲಿರುವ ಕರೂರು ಹೋಬಳಿಯಾದ್ಯಂತ ಈ ಬಾರಿ '''' ಹೊಳಿಸಾಲ ಅಪ್ಪೆ'''' ಮಾವಿನ ಮರಗಳು ಮೈತುಂಬಾ ಹೂವು ಮುಡಿದು ನಿಂತಿವೆ. ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಹೂವು ಬಿಡುವ ಪ್ರಮಾಣ ಹೆಚ್ಚಾಗಿದ್ದು, ಸ್ಥಳೀಯರಲ್ಲಿ ಉಪ್ಪಿನಕಾಯಿ ರುಚಿಯು ಬಾಯಲ್ಲಿ ನೀರೂರಿಸುತ್ತಿದೆ.

ಪ್ರದೀಪ್‌ ಮಾವಿನಕೈ

ಕನ್ನಡಪ್ರಭ ವಾರ್ತೆ ಬ್ಯಾಕೋಡು

ಮಲೆನಾಡಿನ ಘಟ್ಟದ ತಪ್ಪಲಿನಲ್ಲಿರುವ ಕರೂರು ಹೋಬಳಿಯಾದ್ಯಂತ ಈ ಬಾರಿ '''''''' ಹೊಳಿಸಾಲ ಅಪ್ಪೆ'''''''' ಮಾವಿನ ಮರಗಳು ಮೈತುಂಬಾ ಹೂವು ಮುಡಿದು ನಿಂತಿವೆ. ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಹೂವು ಬಿಡುವ ಪ್ರಮಾಣ ಹೆಚ್ಚಾಗಿದ್ದು, ಸ್ಥಳೀಯರಲ್ಲಿ ಉಪ್ಪಿನಕಾಯಿ ರುಚಿಯು ಬಾಯಲ್ಲಿ ನೀರೂರಿಸುತ್ತಿದೆ.

ಸ್ಥಳೀಯರಿಗೆ ವರದಾನವಾದ ಹೊಳಿಸಾಲ ಅಪ್ಪೆ: ಹೊಳಿಸಾಲ ಅಪ್ಪೆ ಮಿಡಿ ಮಾವು ತನ್ನ ವಿಶಿಷ್ಟ ಘಮಲು ಮತ್ತು ದೀರ್ಘಕಾಲ ಬಾಳಿಕೆ ಬರುವ ಗುಣಕ್ಕೆ ಹೆಸರುವಾಸಿ. ಈ ಬಾರಿ ಹೂವು ಹೆಚ್ಚಾಗಿ ಬಂದಿರುವುದರಿಂದ ಗ್ರಾಮೀಣ ಭಾಗದ ಜನರಿಗೆ ಆರ್ಥಿಕವಾಗಿ ಹೆಚ್ಚಿನ ಲಾಭವಾಗುವ ನಿರೀಕ್ಷೆಯಿದೆ.

ಉದ್ಯೋಗಾವಕಾಶ: ಮಿಡಿ ಬಿಡಿಸುವ ಮತ್ತು ಮಾರಾಟ ಮಾಡುವ ಮೂಲಕ ಸ್ಥಳೀಯ ಕೂಲಿ ಕಾರ್ಮಿಕರಿಗೆ ಮತ್ತು ಸಣ್ಣ ವ್ಯಾಪಾರಿಗಳಿಗೆ ಉತ್ತಮ ಆದಾಯ ಸಿಗಲಿದೆ.

ಉಪ್ಪಿನಕಾಯಿ ಉದ್ಯಮ: ಮನೆಮದ್ದಿನಂತೆ ಬಳಸುವ ಮತ್ತು ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿರುವ ಈ ಮಿಡಿಗಳು ಲಭ್ಯವಾದರೆ, ಗೃಹ ಕೈಗಾರಿಕೆಗಳಿಗೆ ಹೆಚ್ಚಿನ ಬಲ ಸಿಗಲಿದೆ.

ಹವಾಮಾನ ಬದಲಾವಣೆಯ ಆತಂಕ: ಸದ್ಯಕ್ಕೆ ಮರಗಳು ಹೂವಿನಿಂದ ಕಂಗೊಳಿಸುತ್ತಿದ್ದರೂ, ಬದಲಾಗುತ್ತಿರುವ ಹವಾಮಾನವು ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.

ಇಬ್ಬನಿ ಮತ್ತು ರೋಗಬಾಧೆ: ಅಕಾಲಿಕ ಮಂಜು ಅಥವಾ ಮುಂಜಾನೆಯ ಇಬ್ಬನಿ ಹೆಚ್ಚಾದಲ್ಲಿ ಹೂವುಗಳು ಕಪ್ಪಾಗಿ ಉದುರುವ ಸಾಧ್ಯತೆಯಿದೆ. ಇದು ಬೂದಿ ರೋಗಕ್ಕೆ ದಾರಿ ಕಲ್ಪಿಸಬಹುದು.

ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ತಾಪಮಾನ ಇದ್ದಕ್ಕಿದ್ದಂತೆ ಏರಿಕೆಯಾದರೆ ಮಿಡಿಗಳು ಸರಿಯಾಗಿ ಕಚ್ಚದೆ ಉದುರಿಹೋಗುವ ಸಂಭವವಿರುತ್ತದೆ. ಹೂವು ಕಚ್ಚುವ ಸಮಯದಲ್ಲಿ ಅಕಾಲಿಕ ಮಳೆ ಬಂದರೆ ಪರಾಗಸ್ಪರ್ಶಕ್ಕೆ ಅಡ್ಡಿಯಾಗಿ ಇಳುವರಿ ಕುಂಠಿತವಾಗಬಹುದು.

ತಜ್ಞರ ಸಲಹೆ: ಹವಾಮಾನ ವೈಪರೀತ್ಯವನ್ನು ಎದುರಿಸಲು ರೈತರು ಎಚ್ಚರಿಕೆ ವಹಿಸಬೇಕಿದೆ. ಹೂವು ಕಚ್ಚುವ ಹಂತದಲ್ಲಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ, ಈ ಬಾರಿಯ ಹೊಳಿಸಾಲ ಅಪ್ಪೆ ಮಿಡಿ ಫಸಲು ಮಲೆನಾಡಿನ ರೈತರ ಮೊಗದಲ್ಲಿ ಮಂದಹಾಸ ಮೂಡಿಸುವುದರಲ್ಲಿ ಸಂಶಯವಿಲ್ಲ.

ತಲೆಮಾರುಗಳಿಂದ ಕಾಪಾಡಿಕೊಂಡು ಬಂದಿರುವ ಹೊಳಿಸಾಲ ತಳಿ ಈ ಬಾರಿ ಶೇ. 80ಕ್ಕೂ ಹೆಚ್ಚು ಮರಗಳಲ್ಲಿ ಹೂವು ಕಾಣಿಸಿಕೊಂಡಿದೆ ಆದರೆ ತಜ್ಞರ ಪ್ರಕಾರ ಬಂದಿರುವ ಹೂವಿನಲ್ಲಿ ಶೇಕಡ ಒಂದರಷ್ಟು ಮಾತ್ರ ಮಿಡಿ ಕಚ್ಚುತ್ತದೆ ಎನ್ನುತ್ತಾರೆ.

------

ಈ ವರ್ಷ ಮಾವಿನ ಹೂವು ಉತ್ತಮವಾಗಿ ಬಂದಿದೆ. ಮಾವಿನ ಬೆಳೆಗೆ ಸಕಾಲವಾದ ವಾತಾವರಣ ನಿರ್ಮಾಣ ಇರುವುದರಿಂದ ಹೆಚ್ಚಿನ ಕಾಯಿ ಬರಬಹುದು. ಪ್ರಸಕ್ತ ಸಾಲಿನಲ್ಲಿ ಶೀತ ವಾತಾವರಣ ಸಮ ಪ್ರಮಾಣದಲ್ಲಿ ಇರುವುದರಿಂದ ಮಾವಿನ ಹೂವು ಉಳಿದುಕೊಂಡಿದೆ. ಕಾಯಿ ಕಟ್ಟುವ ಸಮಯದಲ್ಲಿ ಕೆಲವೊಮ್ಮೆ ಜಿಗಿಹುಳು, ಕಾಯಿಕೊರಕ ರೋಗ ಕಾಣಿಸಿಕೊಳ್ಳಬಹುದು. ರೈತರು ಇಲಾಖೆ ಸಲಹೆಯಂತೆ ಔಷಧ ಸಿಂಪಡಣೆ ಮಾಡಿ ಉತ್ತಮ ಇಳುವರಿ ಪಡೆಯಬಹುದು.

- ಬಿ.ಎಸ್.ಮಹಾಬಲೇಶ್ವರ, ಹಿರಿಯ ಸಹಾಯಕ ತೋಟಗಾರಿಕ ನಿರ್ದೇಶಕರು, ಸಾಗರ

-----

ಮಲೆನಾಡ ಭಾಗದಲ್ಲಿ ಈ ವರ್ಷ ಮಾವಿನ ಫಸಲು ಬಹಳ ಸಮೃದ್ದವಾಗಿ ಬಂದಿರುವುದು ಒಂದು ವಿಶೇಷ. ಅದರಲ್ಲೂ ಅಪ್ಪೆ ಮಿಡಿ ಮರಗಳು ಮೈದುಂಬಿ ನಿಂತಿವೆ. ಇಬ್ಬನಿ ತಗ್ಗಿದರೆ ಮಿಡಿ ಹಾಗೂ ಮಾವು ಪ್ರಿಯರಿಗೆ ಇದು ಸುಗ್ಗಿಯ ಕಾಲವಾಗಬಹುದು. "ಊಟಕ್ಕೊಂದು ಉಪ್ಪಿನಕಾಯಿ, ಕೈತೊಳೆದರ ಮೋಲೊಂದು ತಾಂಬೂಲ ಇದ್ದರೆ ನೂರ್ ಜನ ನೆಂಟರಿಗೆ ಉತ್ತರ ಹೇಳಬಹುದು " ಎಂಬ ನಮ್ಮ ಅಜ್ಜಿಯ ಗಾದೆಯಂತೆ ಎಲ್ಲರ ಮನೆಯ ಉಪ್ಪಿನಕಾಯಿ ಬರಣಿ ಈ ವರ್ಷ ತುಂಬಬಹುದೆಂಬ ನಿರೀಕ್ಷೆ ಎಲ್ಲರಲ್ಲಿ ಒಡಮೂಡಿದೆ.

ಪರಮೇಶ್ವರ ಕರೂರು. ಸಾಹಿತಿಗಳು ತುಮರಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯ್‌ ಸಾವಿಗೆ ಐ.ಟಿ. ಕಿರುಕುಳ ಕಾರಣ : ಬಾಬು
ನಗರದಲ್ಲಿ ಮಹಿಳೆ ಮೇಲೆ ನಾಯಿ ಅಟ್ಟಹಾಸ, ವಿವಿಧೆಡೆ 50 ಹೊಲಿಗೆ