ಇಡೀ ರಾತ್ರಿ, ಬೆಳಗಿನ ಜಾವದ ತನಕ ಕ್ರಷರ್‌ ಸದ್ದು!

KannadaprabhaNewsNetwork |  
Published : Jan 05, 2025, 01:32 AM IST
ಇಡೀ ರಾತ್ರಿ,ಬೆಳಗಿನ ಜಾವದ ತನಕ ಕ್ರಸರ್‌ ಸದ್ದು! | Kannada Prabha

ಸಾರಾಂಶ

ತಾಲೂಕಿನ ಹಿರೀಕಾಟಿ ಗೇಟ್‌ ಬಳಿಯ ಕೆಲ ಕ್ರಷರ್‌ಗಳು ರಾತ್ರಿ ೧೦ರ ಬಳಿಕ ಕೆಲಸ ಮಾಡುವುದಿಲ್ಲ ಎಂಬ ಆದೇಶವಿದ್ದರೂ ಇಡೀ ರಾತ್ರಿ, ಬೆಳಗಿನ ಜಾವದ ತನಕವೂ ಜಿಲ್ಲಾ ಕಲ್ಲು ಪುಡಿ ನಿಯಂತ್ರಣ ಪ್ರಾಧಿಕಾರದ ನಿಯಮ ಉಲ್ಲಂಘಿಸಿ ಸದ್ದು ಮಾಡುತ್ತಿವೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ಹಿರೀಕಾಟಿ ಗೇಟ್‌ ಬಳಿಯ ಕೆಲ ಕ್ರಷರ್‌ಗಳು ರಾತ್ರಿ ೧೦ರ ಬಳಿಕ ಕೆಲಸ ಮಾಡುವುದಿಲ್ಲ ಎಂಬ ಆದೇಶವಿದ್ದರೂ ಇಡೀ ರಾತ್ರಿ, ಬೆಳಗಿನ ಜಾವದ ತನಕವೂ ಜಿಲ್ಲಾ ಕಲ್ಲು ಪುಡಿ ನಿಯಂತ್ರಣ ಪ್ರಾಧಿಕಾರದ ನಿಯಮ ಉಲ್ಲಂಘಿಸಿ ಸದ್ದು ಮಾಡುತ್ತಿವೆ.

ಬೆಳಗ್ಗೆ ೬ ಗಂಟೆಯಿಂದ ರಾತ್ರಿ ೧೦ ಗಂಟೆ ತನಕ ಕ್ರಷರ್‌ಗಳು ಕಲ್ಲು ಪುಡಿ ಮಾಡಲು ಅವಕಾಶವಿದೆ. ಆದರೆ ದುಡ್ಡಿನಾಸೆಗೆ ಲಕ್ಷ್ಮೀ ವೆಂಕಟೇಶ್ವರ, ಶ್ರೀಕಂಠೇಶ್ವರ ಕ್ರಷರ್‌ಗಳು ನಿಯಮ ಉಲ್ಲಂಘಿಸಿ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಹಿರೀಕಾಟಿ ಗ್ರಾಮದ ಜನರು ನೆಮ್ಮದಿಯಾಗಿ ನಿದ್ದೆ ಮಾಡಲು ಆಗುತ್ತಿಲ್ಲ. ವೃದ್ಧರು, ಮಕ್ಕಳು ಹಾಗೂ ರೋಗಿಗಳಿಗೆ ಕ್ರಷರ್‌ ಸದ್ದು ಮಾರಕವಾಗಿದೆ. ಈ ಸಂಬಂಧ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ಅಲ್ಲದೆ ಬೇಗೂರು ಪೊಲೀಸರಿಗೂ ಗ್ರಾಮದ ಕೆಲ ಯುವಕರು ಮೌಖಿಕವಾಗಿ ಕ್ರಷರ್‌ ಸದ್ದಿನ ಅವಾಂತರದ ಬಗ್ಗೆ ಹೇಳಿಕೊಂಡಿದ್ದಾರೆ.

ಕೆಲ ತಿಂಗಳ ಹಿಂದೆ ಹಿರೀಕಾಟಿ ಬಳಿ ಎರಡು ಕ್ರಷರ್‌ ಮಧ್ಯ ರಾತ್ರಿ ತನಕ ಹಾಗೂ ಕೆಲ ಸಮಯದಲ್ಲಿ ಬೆಳಗಿನ ಮೂರು ಗಂಟೆ ತನಕವೂ ಕೆಲಸ ನಿರ್ವಹಿಸುವ ಬಗ್ಗೆ ಗ್ರಾಮದ ಯುವಕನೊಬ್ಬ ವೀಡಿಯೋ ಸಮೇತ ಬೇಗೂರು ಪೊಲೀಸರಿಗೆ ಕಳುಹಿಸಿ ಕೊಟ್ಟಿದ್ದಾರೆ. ರಾತ್ರಿ ೧೦ ಗಂಟೆ ಬಳಿಕ ಕೆಲಸ ನಿಲ್ಲಿಸಿ ಎಂದು ಮಾಲೀಕ ಆರ್.ಯಶವಂತಕುಮಾರ್‌ಗೆ ಗ್ರಾಮದ ಚಂದ್ರಶೇಖರ್‌ ಮೊಬೈಲ್‌ ಮೂಲಕ ಮಾತನಾಡಿದಾಗ ಕೊಲೆ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಬೇಗೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ನಿಯಮ ಏನು?:

ರಾತ್ರಿ ೧೦ ಗಂಟೆ ಬಳಿಕ ಕ್ರಷರ್‌ ಕಾರ್ಯ ನಿರ್ವಹಿಸಿದಲ್ಲಿ ಅಂತಹ ಕ್ರಷರ್‌ ಘಟಕಗಳ ಮೇಲೆ ಘಟಕಗಳ ಅಧಿನಿಯಮ ಹಾಗೂ ನಿಯಮಾವಳಿಯಂತೆ ಕಾನೂನು ಕ್ರಮ ಜರುಗಿಸಲು ಅವಕಾಶವಿದೆ.

ಗ್ರಾಮಸ್ಥರ ದೂರು:

ಹಿರೀಕಾಟಿ ಗ್ರಾಮದ ಸುತ್ತಲಿನ ಕ್ರಷರ್‌ಗಳು ರಾತ್ರಿ ವೇಳೆ ನಿರಂತರವಾಗಿ ಸದ್ದು ಮಾಡುವ ಕಾರಣ ಶಬ್ದ ಮಾಲಿನ್ಯ ಹಾಗೂ ರಾತ್ರಿ ಮಲಗುವುದಕ್ಕೆ ತುಂಬ ತೊಂದರೆಯಾಗಿದೆ.

ಶಬ್ದ ಮಾಲಿನ್ಯ ಉಂಟು ಮಾಡುತ್ತಿರುವ ಕ್ರಷರ್‌ ಘಟಕಗಳ ಪರಿಶೀಲಿಸಿ ರಾತ್ರಿ ವೇಳೆ ಕಲ್ಲು ನುರಿಯುವುದನ್ನು ನಿಯಂತ್ರಿಸುವಂತೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಕೆಲ ತಿಂಗಳ ಹಿಂದೆ ದೂರು ಸಲ್ಲಿಸಿದ್ದರು. ಜಿಲ್ಲಾಧಿಕಾರಿಗಳ ಸೂಚನೆ ಬಳಿಕ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕರು ಅವಧಿ ಮೀರಿ ಕ್ರಷ್ಷಿಂಗ್‌ ಮಾಡುವ ಕ್ರಷರ್‌ ಮಾಲೀಕರಿಗೆ ಎಚ್ಚರಿಕೆ ನೀಡಿ ನೋಟಿಸ್‌ ನೀಡಿದ್ದರೂ ಹಿರೀಕಾಟಿ ಬಳಿಯ ಎರಡು ಕ್ರಷರ್‌ಗಳು ಮಾತ್ರ ಮಧ್ಯ ರಾತ್ರಿ, ಬೆಳಗಿನ ಜಾವದ ತನಕ ಕಲ್ಲು ಪುಡಿ ಮಾಡುತ್ತಿವೆ ಎಂದು ದೂರುದಾರ ಚಂದ್ರಶೇಖರ್‌ ಹಾಗೂ ಮಂಜು ಹೇಳಿದ್ದಾರೆ.

ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಮಧ್ಯ ರಾತ್ರಿಯೆಲ್ಲ ಸದ್ದು ಮಾಡುವ ಕ್ರಷರ್‌ಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಹಿರೀಕಾಟಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.ಹಿರೀಕಾಟಿ ಗೇಟ್‌ ಬಳಿಯ ಕ್ರಷರ್‌ ರಾತ್ರಿ, ಬೆಳಗಿನ ಜಾವದ ತನಕ ಸದ್ದು ಮಾಡುತ್ತಿದೆ. ಬೇಗೂರು ಪೊಲೀಸರಿಗೆ ಗುರುವಾರ ರಾತ್ರಿ ತಿಳಿಸಿದರೂ ಹಗಲು ರಾತ್ರಿ ಕ್ರಷ್ಷಿಂಗ್‌ ಮಾಡಬಹುದು ಎಂದು ಹೇಳಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿಗೆ ಮೊಬೈಲ್‌ ಮೂಲಕ ಸಂಪರ್ಕಿಸಿದರೆ ಕರೆ ಸ್ವೀಕರಿಸುತ್ತಿಲ್ಲ. ಕಿರಿಯ ಭೂ ವಿಜ್ಞಾನಿ ಪುಷ್ಪ ಶಾಮೀಲಾಗಿರುವುದೇ ಈ ಅವಾಂತರಕ್ಕೆಲ್ಲ ಕಾರಣರಾಗಿದ್ದಾರೆ. ಕ್ವಾರಿಯಿಂದ ಬೆಳಗ್ಗೆಯೇ ಕಲ್ಲು ಕ್ರಷರ್‌ ಸಾಗಿಸುತ್ತಿದ್ದಾರೆ.

-ಚಂದ್ರಶೇಖರ್‌, ಹಿರೀಕಾಟಿ ಗ್ರಾಮಸ್ಥ

PREV

Recommended Stories

ಮದ್ದೂರು ಗಣೇಶ ಗಲಾಟೆಗೆ ಪೂರ್ಣ ಮುಸ್ಲಿಮರೇ ಕಾರಣ: ಸಚಿವ ಚಲುವ
ಬುರುಡೆ ಕೇಸ್‌ : ಸಾಕ್ಷಿದಾರರ ಬಂಧನ..? ಮಟ್ಟಣ್ಣವರ್‌, ಜಯಂತ್‌, ಅಭಿಷೇಕ್, ಮನಾಫಾ ವಿಠಲಗೆ ಗ್ರಿಲ್