ಅಧಿಕಾರಿಗಳ ನಿರ್ಲಕ್ಷ್ಯದಿಂದ ಆಮೆಗತಿಯಲ್ಲಿ ಸಾಗಿದ ಗೌರಿಬಿದನೂರು ವಿವಿಧ ರಸ್ತೆಗಳ ಅಗಲೀಕರಣ

KannadaprabhaNewsNetwork |  
Published : Jan 31, 2026, 02:00 AM IST
ಗುತ್ತಿಗೆದಾರನ ಬೇಜವಾಬ್ದಾರಿತನ, ಧೂಳು ತುಂಬಿದ ರಸ್ತೆಯಿಂದ ಮಂಕಾಗುತ್ತಿದೆ ಜನ ಜೀವನ. | Kannada Prabha

ಸಾರಾಂಶ

ರಸ್ತೆಯಲ್ಲಿ ಪಾದಚಾರಿಗಳು, ಬೈಕ್ ಸವಾರರು ಧೂಳಿಗೆ ಬೇಸತ್ತು ಹೋಗುತ್ತಿದ್ದಾರೆ, ವಾಹನಗಳು ಸಂಚರಿಸಿದಾಗ, ಜೋರಾಗಿ ಗಾಳಿ ಬೀಸಿದಾಗ ಅನೇಕ ಜನರು ಕಣ್ಣುಜ್ಜಿಕೊಂಡು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ನಗರದ ವಿವಿಧೆಡೆ ರಸ್ತೆ ಅಗಲೀಕರಣ ಕಾಮಗಾರಿಗಳಿಂದ ಉಂಟಾಗುವ ಧೂಳು ಸಾರ್ವಜನಿಕರ ಆರೋಗ್ಯ ಮತ್ತು ದೈನಂದಿನ ಜೀವನದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ನಗರದ ಎಂಜಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಆಮೆಗತಿಯ ಅಗಲೀಕರಣ ಕಾಮಗಾರಿಗಳಿಂದಾಗಿ ಧೂಳಿನಿಂದ ಉಸಿರಾಟದ ಸಮಸ್ಯೆ ಮತ್ತು ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆಯಲ್ಲಿ ಪಾದಚಾರಿಗಳು, ಬೈಕ್ ಸವಾರರು ಧೂಳಿಗೆ ಬೇಸತ್ತು ಹೋಗುತ್ತಿದ್ದಾರೆ, ವಾಹನಗಳು ಸಂಚರಿಸಿದಾಗ, ಜೋರಾಗಿ ಗಾಳಿ ಬೀಸಿದಾಗ ಅನೇಕ ಜನರು ಕಣ್ಣುಜ್ಜಿಕೊಂಡು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾಮಗಾರಿ ಸ್ಥಗಿತ: ನಗರದ ಎಂ.ಜಿ.ರಸ್ತೆಯ ಅಗಲೀಕರಣ ಕಾಮಗಾರಿ ಪ್ರಾರಂಭವಾಗಿ ಕೆಲವೇ ದಿನಗಳಲ್ಲಿ ಸ್ಥಗಿತಗೊಂಡಿದೆ. ಕಾಮಗಾರಿಗಳು ಯಾವಾಗ ಪೂರ್ಣಗೊಂಡು, ಧೂಳಿನಿಂದ ಮುಕ್ತಿ ದೊರೆಯುತ್ತದೆಯೋ ಎಂದು ಜನತೆ ಕಾಯ್ದು ಕುಳಿತಿದ್ದಾರೆ. ರಸ್ತೆಗಳ ವಿನ್ಯಾಸ ಸರಿ ಇಲ್ಲ, ಅಲ್ಲಲ್ಲಿ ರಸ್ತೆಯನ್ನು ಅಗೆದು ಹಾಗೇ ಬಿಟ್ಟಿದ್ದು, ಚರಂಡಿಗಳೂ ಸಹ ತುಂಬಿ ರಸ್ತೆಯಲ್ಲಿ ಹರಿಯುತ್ತಿವೆ, ಗುಂಡಿಗಳು ವಿಸ್ತರಣೆಯಾಗುತ್ತಲೇ ಹೋಗುವುದರಿಂದ, ಆ ಗುಂಡಿಗೆ ಮತ್ತೆ ಮಣ್ಣು, ಕಲ್ಲು ಹಾಕಿ ಕಾಟಾಚಾರದ ತೇಪೆ ಹಚ್ಚುತ್ತಿದ್ದು, ಹೀಗೆ ಹತ್ತಾರು ಕಾರಣಗಳಿಂದ ನಗರದಲ್ಲಿ ಧೂಳು ಕಾಯಂ ಅತಿಥಿಯಂತಾಗಿ ಆವರಿಸಿಕೊಳ್ಳುತ್ತಿದೆ.

ಭಾರೀ ವಾಹನಗಳು ಸಂಚರಿಸಿದಾಗ ದಟ್ಟ ಅಲೆಯಾಗಿ ಚದುರುವ ಧೂಳಿನ ಕಣಗಳ ಸಿಂಚನಕ್ಕೆ ಪಾದಚಾರಿಗಳು, ದ್ವಿಚಕ್ರ- ತ್ರಿಚಕ್ರ ವಾಹನ ಸವಾರರು, ರಸ್ತೆ ಬದಿ ಅಂಗಡಿ ವ್ಯಾಪಾರಿಗಳು ಗುರಿಯಾಗುತ್ತಿದ್ದಾರೆ. ಕಣ್ಣು, ಮೂಗು, ಕಿವಿಯೊಳಗೆ ಸೇರುವ ಧೂಳು ವಿವಿಧ ರೋಗಕ್ಕೆ ಕಾರಣವಾಗುತ್ತಿದೆ. ಇದ್ಯಾವುದನ್ನು ಲೆಕ್ಕಿಸದೆ ನಾಲ್ಕೈದು ದಿನ ಧೂಳಿನ ನಡುವೆ ತಿರುಗಿದವರು ಏಕಾಏಕಿ ದೊಡ್ಡದಾಗಿ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ಅಲೆಯುವಂತಾಗಿದೆ.

ತಾಲೂಕು ಆರೋಗ್ಯಾಧಿಕಾರಿ ಮತ್ತು ನಗರಸಭೆ ಕಚೇರಿ ಪಕ್ಕದ ರಸ್ತೆಯಲ್ಲಂತೂ ರಸ್ತೆಯ ಅರ್ಧಭಾಗದಷ್ಟು ಮರಳು, ಧೂಳು ಆವರಿಸಿಕೊಂಡರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಅತ್ತ ತಿರುಗಿಯೂ ನೋಡುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ