ಶರಣರು ನುಡಿದಂತೆ ನಡೆದ ಧೀಮಂತರು: ಡಾ. ಚಂದ್ರಪ್ಪ ಸೊಬಟಿ

KannadaprabhaNewsNetwork |  
Published : Aug 11, 2025, 12:40 AM ISTUpdated : Aug 11, 2025, 12:41 AM IST
ಶಿಗ್ಗಾಂವಿಯ ಚನ್ನಪ್ಪ ಕುನ್ನೂರ ಕಾಲೇಜಿನಲ್ಲಿ ಸಂಕಲ್ಪ ಗುರಿ- ೨ ಸರಣಿ ಕಾರ್ಯಕ್ರಮದಲ್ಲಿ ವಚನ ನಿರ್ವಚನ ಗೋಷ್ಠಿಯನ್ನು ಪ್ರಾಧ್ಯಾಪಕ ಡಾ. ಚಂದ್ರಪ್ಪ ಸೊಬಟಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಶರಣರದು ನಡೆ, ನುಡಿ, ಸಿದ್ಧಾಂತ ಶ್ರೇಷ್ಠವಾದುದು. ಅವರು ನುಡಿದಂತೆ ನಡೆದು ತೋರಿದ ಸಾತ್ವಿಕ ಧೀಮಂತರು. ಅವರದು ದಯಾಮೂಲ ಧರ್ಮವಾಗಿತ್ತು.

ಶಿಗ್ಗಾಂವಿ: ಬಸವಾದಿ ಶರಣರ ಎಲ್ಲ ವಚನಗಳಲ್ಲಿ ಜೀವನ ಮೌಲ್ಯಗಳ ತುಡಿತ ಅಡಗಿದೆ. ಪ್ರತಿಯೊಂದು ವಚನ ಅನುಭಾವದ ರಸಘಟ್ಟಿಗಳಾಗಿವೆ ಎಂದು ಜಾನಪದ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಚಂದ್ರಪ್ಪ ಸೊಬಟಿ ತಿಳಿಸಿದರು.

ಪಟ್ಟಣದ ಚನ್ನಪ್ಪ ಕುನ್ನೂರ ಕಾಲೇಜಿನಲ್ಲಿ ಸಂಕಲ್ಪ ಗುರಿ- ೨ ಸರಣಿ ಕಾರ್ಯಕ್ರಮದಲ್ಲಿ ವಚನ ನಿರ್ವಚನ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿ, ಶರಣರದು ನಡೆ, ನುಡಿ, ಸಿದ್ಧಾಂತ ಶ್ರೇಷ್ಠವಾದುದು. ಅವರು ನುಡಿದಂತೆ ನಡೆದು ತೋರಿದ ಸಾತ್ವಿಕ ಧೀಮಂತರು. ಅವರದು ದಯಾಮೂಲ ಧರ್ಮವಾಗಿತ್ತು ಎಂದರು.

ಪೂಜೆಗಿಂತಲೂ ಹೆಚ್ಚಿನ ಮಹತ್ವವನ್ನು ದುಡಿಮೆಗೆ ಕೊಟ್ಟಿದ್ದರು. ಕಾಯಕ ಎಂಬುದು ಅವರಿಗೆ ಪಂಚಪ್ರಾಣವಾಗಿತ್ತು. ಕಾಯಕ ಮಾಡದವರಿಗೆ ಜಗದಲ್ಲಿ ಸ್ಥಳವಿಲ್ಲ ಎಂದು ಸಾರಿದರು. ಹಾಗಾಗಿ ೧೨ನೇ ಶತಮಾನದ ಶರಣರನ್ನು ಅವರ ಕಾಯಕದಿಂದಲೇ ಗುರುತಿಸಲಾಗುತ್ತದೆ ಎಂದರು.

ಈಗಿನವರು ಕಾಯಕ ಮಾಡುವುದೆಂದರೆ ಅವಮಾನಕರವೆಂದು ಭಾವಿಸುತ್ತಾರೆ. ಎಲ್ಲರೂ ಸೋಮಾರಿಗಳಾಗುತ್ತಿದ್ದಾರೆ ಎಂದ ಚಂದ್ರಪ್ಪ ಸೊಬಟಿ ಅವರು, ಶರಣರ ಕಾಯಕ ತತ್ವ ಅಂದಿಗಿಂತ ಇಂದಿಗೆ ಹೆಚ್ಚು ಅವಶ್ಯಕವಾಗಿದೆ ಎಂದರು.

ಕನ್ನಡ ಸಂಘದ ಕಾರ್ಯಾಧ್ಯಕ್ಷ ಮಂಜುನಾಥ ಕಾಳೆ ಮಾತನಾಡಿ, ವಿದ್ಯಾರ್ಥಿಗಳ ಜೀವನದ ಗುರಿಯನ್ನು ಗಟ್ಟಿಗೊಳಿಸುವ ಸಂಕಲ್ಪ ಗುರಿ ಕಾರ್ಯಕ್ರಮ ಸರಣಿ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಲಿದೆ ಎಂದರು.

ಕಾಲೇಜಿನ ಪ್ರಾಚಾರ್ಯ ಡಾ. ನಾಗರಾಜ ಜಿ. ದ್ಯಾಮನಕೊಪ್ಪ ಅಧ್ಯಕ್ಷತೆ ವಹಿಸಿದ್ದರು. ಹಣಕಾಸು ವ್ಯಾಪಾರ ಹಾಗೂ ಬ್ಯಾಂಕಿಂಗ್ ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ದ್ವಿತೀಯ ಪಿಯುಸಿಯ ಲಕ್ಷ್ಮಿ ಬಸನಾಳ ಪ್ರಬಂಧ ವಾಚನ ಮಾಡಿದರು. ಕೆ. ಬಸಣ್ಣ, ಕೆ.ಎಸ್. ಬರದೆಲಿ, ಮಹೇಶ ಲಕ್ಷ್ಮೇಶ್ವರ, ಗೀತಾ ಸಾಲ್ಮನಿ ಹಾಗೂ ಅನ್ನಪೂರ್ಣಾ ಅಂಕಲಕೋಟಿ ಇತರರು ಇದ್ದರು.

ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಮಾಣಪತ್ರ ವಿತರಿಸಲಾಯಿತು. ವಿದ್ಯಾರ್ಥಿಗಳ ವಚನ ಗಾಯನದಿಂದ ಕಾರ್ಯಕ್ರಮ ಪ್ರಾರಂಭವಾಯಿತು. ಅನುಷಾ ಬೆಟದೂರ ಸ್ವಾಗತಿಸಿದರು. ಭಾಗ್ಯಲಕ್ಷ್ಮಿ ಪಚ್ಚಿ ವಂದಿಸಿದರು. ಸಂಜನಾ ಆರೇರ ಕಾರ್ಯಕ್ರಮ ನಿರೂಪಿಸಿದರು.

PREV

Recommended Stories

ಸಂಪುಟ ಪುನರ್‌ ರಚನೆ ಸುಳಿವು : ದಲಿತ ಸಚಿವರ ಸಭೆ!
ಶೂದ್ರ ಶ್ರೀನಿವಾಸ್‌ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ