ಕನ್ನಡಪ್ರಭ ವಾರ್ತೆ ಕೊಪ್ಪಳ
ನಗರದ ಹೊಸಪೇಟೆ ರೋಡಿನ ಬೆಳವಿನಾಳ ಹೈವೇ ರಸ್ತೆ (ಅಂಡರ್ ಗ್ರೌಂಡ್ ಬ್ರಿಡ್ಜ್) ಯಲ್ಲಿ ನಿರ್ಗತಿಕ, ಮಾನಸಿಕ ಅಸ್ವಸ್ಥ ಮಹಿಳೆ ಒಬ್ಬರು ಸುಮಾರು ಎರಡು ತಿಂಗಳಿಂದ ಅಲ್ಲೇ ವಾಸವಾಗಿದ್ದ ಮಹಿಳೆಯನ್ನು ಕೊಪ್ಪಳ ಸಹಾಯ ಹಸ್ತ ತಂಡರವರು ರಕ್ಷಿಸಿ ಆಕೆಯನ್ನು ಸಖಿ ಒನ್ ಸ್ಟಾಪ್ ಸೆಂಟರಿಗೆ ಸೇರಿಸಿದ್ದಾರೆ.ಮಹಿಳೆ ಸುಮಾರು 2 ತಿಂಗಳಿನಿಂದ ಅಲ್ಲೆ ವಾಸವಾಗಿದ್ದಳು. ಅದನ್ನು ಗಮನಿಸಿದ ತಂಡದವರು ಆಕೆಯ ರಕ್ಷಣೆಗೆ ಮುಂದಾದರು. ಆ ಮಹಿಳೆಯ ಮೇಲೆ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯ ಸಹ ಜರುಗಿದೆ. ಮಹಿಳೆಯನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ.
ಕೊಪ್ಪಳ ಸಹಾಯ ಹಸ್ತ ತಂಡದ ಪರಶುರಾಮ ಕೆರೆಹಳ್ಳಿ, ಸಲೀಮ್ ಖಾದ್ರಿ, ನಿಜಾಮುದ್ದಿನ್, ಆರ್ಷದ ಶೈಖ್, ಆಸೀಫ್ ಗದಗ, ಮೀನಾಜ್ ಇತರರಿದ್ದರು.ಕಾರ್ಮಿಕ ಅಧಿಕಾರಿಗಳ ದಾಳಿ, ಇಬ್ಬರು ಕಿಶೋರ ಕಾರ್ಮಿಕರ ರಕ್ಷಣೆ:
ಮಕ್ಕಳ ಸಹಾಯವಾಣಿ-1098ಗೆ ಬಂದ ದೂರನ್ನಾಧರಿಸಿ ಕಾರ್ಮಿಕ ಅಧಿಕಾರಿಗಳು ಕೊಪ್ಪಳ ನಗರದ ಆರ್‌ಟಿಒ ಕಚೇರಿ ಹತ್ತಿರ ನಡೆಸಿದ ತಪಾಸಣೆಯಲ್ಲಿ ಇಬ್ಬರು ಕಿಶೋರ ಕಾರ್ಮಿಕರು ಪತ್ತೆಯಾಗಿದ್ದು, ಅವರನ್ನು ರಕ್ಷಿಸಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರು ಪಡಿಸಲಾಗಿದೆ. ಮಕ್ಕಳ ಸಹಾಯವಾಣಿಗೆ ಬಂದ ದೂರನ್ನಾಧರಿಸಿ ದಾಳಿ ನಡೆಸಿದ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮಮದಾಪೂರ ಗ್ರಾಮದ ಜಡಿಯಪ್ಪ ಬೀರಪ್ಪ ಸುಣದಾಳ ಹಾಗೂ ಅಡಿವೆಪ್ಪ ನಿಂಗಪ್ಪ ಸಿಂದೊಳ್ಳಿ ಎಂಬುವವರ ಕುರಿ ಹಿಂಡಿನಲ್ಲಿ ಇಬ್ಬರು ಕಿಶೋರ ಕಾರ್ಮಿಕರು ಪತ್ತೆಯಾಗಿದ್ದು, ಅವರನ್ನು ಕೆಲಸದಿಂದ ಬಿಡುಗಡೆಗೊಳಿಸಿ 112 ಪೊಲೀಸ್ ಸಿಬ್ಬಂದಿಗಳ ಸಹಕಾರದಿಂದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಲಾಗಿದೆ. ಸಮಿತಿಯ ನಿರ್ದೇಶನ ಹಾಗೂ ದಾಖಲಾತಿಗಳ ಆಧಾರದ ಮೇಲೆ ಮುಂದಿನ ಕ್ರಮ ವಹಿಸಲಾಗುವುದು.ತಪಾಸಣಾ ತಂಡದಲ್ಲಿ ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕರಾದ ಬಸವರಾಜ ಹಿರೇಗೌಡ್ರ, ಮಕ್ಕಳ ಸಹಾಯವಾಣಿಯ ಸಂಯೋಜಕರಾದ ಶರಣಪ್ಪ ಸಿಂಗನಾಳ, ವಿಷಯ ನಿರ್ವಾಹಕರಾದ ರಾಘವೇಂದ್ರರಾವ್ ಕುಲಕರ್ಣಿ, 112 ಸಹಾಯವಾಣಿ ಸಿಬ್ಬಂದಿ ಗವಿಸಿದ್ದಪ್ಪ ಕಾಳಿ ಸೇರಿದಂತೆ ಕಾರ್ಮಿಕ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಇತರೆ ಸಿಬ್ಬಂದಿ ಇದ್ದರು.