ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸಚಿವ ಸ್ಥಾನದಿಂದ ಸಮಾಜ ಉದ್ಧಾರ ಆಗಿಲ್ಲ ಎಂಬ ಬಸವಜಯ ಮೃತ್ಯುಂಜಯ ಶ್ರೀಗಳ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ, ಯಾರ ಗುರುಗಳು, ಆಕಾಶದಿಂದ ಇಳಿದು ಬಂದಿದ್ದಾರಾ? ಆಕಾಶದಿಂದ ಉದಿರಿದ್ದಾರಾ ? ಎಂದು ಪ್ರಶ್ನೆ ಮಾಡಿದ್ದಾರೆ.ಜಿಲ್ಲೆಯ ಕೂಡಲಸಂಗಮದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೆಲ್ಲ ತಾಯಿ ಹೊಟ್ಟೆಯಿಂದಲೇ ಜನಿಸಿದ್ದೀವಲ್ವಾ? ನಾವು ರಾಜಕಾರಣಿಗಳು ತಾಯಿ ಹೊಟ್ಟೆಯಲ್ಲೇ ಹುಟ್ಟಿದ್ದು, 50 ವರ್ಷ ನಮ್ಮಪ್ಪ ಆದಿಯಾಗಿ ನಮ್ಮ ತಾಯಿ, ನಾನು, ಏನು ಇವರು (ಮೃತ್ಯುಂಜಯ ಶ್ರಿ) ಬಂದ್ಮೇಲೆ ಹುಟ್ಟಿದ್ದೇವಾ? ಇವರು ಬಂದ್ಮೇಲೆ ಹುಟ್ಟಿ ರಾಜಕಾರಣಕ್ಕೆ ಬಂದಿದ್ದೇವಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕರಾಗಿ ಬಿಟ್ರು, ಶಾಸಕರಾಗಿಬಿಟ್ರು ಎಂದು ಹೇಳುವ ಇವರು ಅದನ್ನ ನಮ್ಮ ಕ್ಷೇತ್ರದ ಜನ ನಿರ್ಧಾರ ಮಾಡಿದ್ದಾರೆ. ಇವರ್ಯಾರು ಕೇಳೋದಕ್ಕೆ ಎಂದು ಕಾಶಪ್ಪನವರ ಖಾರವಾಗಿ ಪ್ರತಿಕ್ರಿಯಿಸಿದರು.ಸಿ.ಸಿ. ಪಾಟೀಲಗೆ ಸಚಿವ ಸ್ಥಾನ ಕೊಡಿಸಿಲ್ವಾ?:
ಹಿಂದೆ ಬಿ.ಎಸ್. ಯಡಿಯೂರಪ್ಪ ಮನೆಗೆ ಬೆಳಗ್ಗೆ 5 ಗಂಟೆಗೆ ಹೋಗಿ ಸಚಿವ ಸ್ಥಾನ ಕೊಡಿಸಿಲ್ವಾ? ನನಗೆ ಹೇಳ್ತಾನ ಅವ, ಸಿ.ಸಿ.ಪಾಟೀಲಗೆ ಎಂಪಿ ಟಿಕೆಟ್ ಕೊಡಿಸೋಕೆ ಡೆಲ್ಲಿಗೆ ಹೋಗಿದ್ದ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ ಕಾಶಪ್ಪನವರ, ಇವ (ಮೃತ್ಯುಂಜಯ ಶ್ರೀ) ಸಿ.ಸಿ. ಪಾಟೀಲಗೆ ಸಚಿವ ಸ್ಥಾನ ಕೊಡಿಸಿಲ್ವಾ, ಕರ್ಕೊಂಡು ಹೋದವರ ಹೆಸರು ಹೇಳಲಾ ಇಲ್ಲೇ ಇದ್ದಾರೆ. ಯಾರು ಕರಕೊಂಡು ಹೋಗಿದ್ದರು? ಎಷ್ಟೊತ್ತಿಗೆ ಕರಕೊಂಡ ಹೋಗಿದ್ರು ಎಂದು. ನಿರಾಣಿ ಅವರನ್ನು ಎಷ್ಟು ಬಾರಿ ಕರಕೊಂಡ ಹೋಗ್ಯಾರ? ಎಷ್ಟೆಷ್ಟು ಮಂದಿ ಹೋಗಿಲ್ಲಾ ಮಂತ್ರಿ ಆಗಾಕ? ಅದು ಹಂಗ ಬ್ಯಾಡದ ಜಗತ್ತು, ಬೇಕಾದಾಗ ಒಂದು, ಬೇಡಾದಾಗ ಇನ್ನೊಂದು ಅಷ್ಟ ಅದು. ಇವರು ಹೇಳಿದ್ರೆ ಮಂತ್ರಿ ಆಗ್ತಿವಾ? ನಮ್ಮ ಸಿಎಂ, ನಮ್ಮ ಡಿಸಿಎಂ ಇದ್ದಾರೆಯ ನಮ್ಮ ಹೈಕಮಾಂಡ್ ಇದೆ. ಅವರ ಮೇಲೆ ವಿಶ್ವಾಸ ಇದೆ. ವಿಶ್ವಾಸದ ಮೇಲೆ ನಡೆಯುತ್ತೇವೆ. ಒಂದು ಪಕ್ಷದ ತತ್ವ ಸಿದ್ಧಾಂತದ ಮೇಲೆ ನಡೆಯುತ್ತೇವೆ. ಈ ಖಾವಿಧಾರಿ ಮಾತಿಗೆ ನಾವು ಕ್ಯಾರೇ ಅನ್ನೋದಿಲ್ಲ, ಕೇರ್ ಸಹ ಮಾಡೋದಿಲ್ಲ ಎಂದು ಕಾಶಪ್ಪನವರ ಹೇಳಿದರು.ಸಚಿವ ಸ್ಥಾನಕ್ಕೆ ನಾನೂ ಪ್ರಬಲ ಆಕಾಂಕ್ಷಿ: ನಾನು ಸಹ ಸಚಿವ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿ ಆಗಿದ್ದೀನಿ ಎಂದಿರುವ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಅವರು ನಿಮ್ಮ ಬಾಯಿ ಹರಕೆಯಿಂದ ಆಗಲಿ ಬಹಳ ಸಂತೋಷ ಎಂದು ಹೇಳಿದರು.
ನಾನು ಮಂತ್ರಿ ಆಗಬಹುದು ಎಂದು ನಿರೀಕ್ಷೆ ಇದೆ. ನಮ್ಮ ನಾಯಕರಲ್ಲಿ ವಿನಂತಿ ಮಾಡಿದ್ದೇನೆ. ಅದಕ್ಕೆ ಹೈಕಮಾಂಡ್ ಇದೆ. ಸಿಎಂ ಇದಾರೆ, ಅವರು ನಿರ್ಧಾರ ಮಾಡುತ್ತಾರೆ. ನಾನು ಈಗಾಗಲೇ ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದೇನೆ.ಸಿಎಂ ಅವರೇ ಹೈಕಮಾಂಡ್ ಅನುಮತಿ ಪಡೆದು ಸಂಪುಟ ಪುನಾರಚನೆ ಮಾಡೋದಾಗಿ ಹೇಳಿದ್ದಾರೆ. ಅದು ನನ್ನ ಲೆವೆಲ್ ನಲ್ಲಿ ಅಲ್ಲ. ಆ ಬಗ್ಗೆ ನಾ ಮಾತಾಡೋದಿಲ್ಲ. ಅದು ಹೈಕಮಾಂಡ್ ಲೆವೆಲ್. ನನ್ನ ಲೆವೆಲ್ ಇರೋದನ್ನು ಮಾತ್ರ ನಾ ಮಾತಾಡ್ತೀನಿ ಎಂದು ಕಾಶಪ್ಪನವರ ಜಾರಿಕೊಂಡರು.ಯಾವ ಧರ್ಮದಲ್ಲಿ ಹುಟ್ಟಿದ್ದಾರಂತ ಅವರಿಗೆ ಗೊತ್ತಿಲ್ಲ: 8ನೇ ಹಂತದ ಹೋರಾಟ ಮಾಡುತ್ತೇವೆ. ಈ ಬಾರಿ ಸಿಎಂ ಬಳಿ ಹೋಗಲ್ಲ ಎಂಬ ಕೂಡಲಸಂಗಮ ಶ್ರೀಗಳ ಹೇಳಿಕೆಗೆ ಕೂಡಲಸಂಗಮದಲ್ಲಿ ಕಾಶಪ್ಪನವರ ಮಾತನಾಡಿ, 8 ಅಲ್ಲ 101ನೇ ಹಂತದ ಹೋರಾಟ ಮಾಡಿಕೊಳ್ಳಲಿ, ಅವರ ನಿಲುವು, ತತ್ವ ಏನಿದೆ? ಅವರಿಗೆ ಗೊತ್ತಿಲ್ಲ, ಅವರು ಯಾವ ಧರ್ಮದಲ್ಲಿ ಹುಟ್ಟಿದ್ದಾರೆ ಅಂತ ಅವ್ರಿಗೆ ಗೊತ್ತಿಲ್ಲ, ಯಾವ ಧರ್ಮ ಎಂದು ಹೇಳಬೇಕಲ್ವಾ , ಈ ರಾಷ್ಟ್ರದಲ್ಲಿ ಹಿಂದೂ ಧರ್ಮ ಇದೆಯಾ ? ನಾವು ಹಿಂದೂಗಳ ವಿರೋಧಿಯಲ್ಲ, ಹಿಂದುಗಳು ಅನ್ನುವವರಿಗೆ ನಾವು ಗೌರವ ಕೊಡ್ತೀವಿ, ಯಾವುದೇ ಜಾತಿ, ಧರ್ಮ, ಜನಾಂಗದ ವಿರೋಧಿಗಳಲ್ಲ, ಆದರೆ ಇವರಿಗೆ (ಮೃತ್ಯುಂಜಯ ಶ್ರೀ) ಸ್ಪಷ್ಟ ನಿಲುವೇ ಇಲ್ಲ ಎಂದರು.
ಬಸವ ಧರ್ಮಾನಾ ? ಲಿಂಗಾಯತ ನಾ ? ಪಂಚಮಸಾಲಿ ನಾ ? ಮತ್ತೆ ಯಾವರ ಅದಾವಾ ? ಇತ್ತೀಚೆಗೆ ನಡೆದ ಸಮೀಕ್ಷೆ ವೇಳೆ ಯಾರ್ಯಾರು ಏನೇನು ಬರಿಸಿದ್ದಾರೆ ಗೊತ್ತಿದೆ. ನಾವು ಲಿಂಗಾಯತ ಧರ್ಮದಲ್ಲಿ ಹುಟ್ಟಿದ್ದು, ಅದನ್ನೇ ಬರೆಸಿದ್ದೇವೆ. ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಬರೆಸಿದ್ದೇವೆ. ಆದರೆ ಇವರು ಏನ ಹೇಳ್ಯಾರೊ ಗೊತ್ತಿಲ್ಲ. ಅವರ ನಿಲುವು ಸ್ಪಷ್ಟ ಇಲ್ಲ. ಯಾರಿಗೋಷ್ಕರ ಹೋರಾಟ ಮಾಡ್ತಾರೋ ಗೊತ್ತಿಲ್ಲ. ಲಿಂಗಾಯತ, ಪಂಚಮಸಾಲಿ ಅಥವಾ ಇತರರಿಗಾಗಿ ಹೊರಾಟ ಮಾಡ್ತಾರೋ ಗೊತ್ತಿಲ್ಲ. ಒಂದು ವೇದಿಕೆಯಲ್ಲಿ ಲಿಂಗಾಯತ, ಮತ್ತೊಂದು ವೇದಿಕೆಯಲ್ಲಿ ಹಿಂದೂ ಅಂತಾರೆ. ಇವರು ಹೋರಾಟ ಹೆಂಗ ಮಾಡ್ತಾರೋ ? ಯಾರನ್ನ ಕರಕೊಂಡ ಮಾಡ್ತಾರೋ ? ಗೊತ್ತಿಲ್ಲ. ನಮ್ಮ ಹೋರಾಟ ಸಹ ಕಾನೂನು ಮತ್ತು ಸೈದ್ಧಾಂತಿಕವಾಗಿ ಇದೆ. ನಮ್ಮ ಸಮುದಾಯಕ್ಕೆ ಮೀಸಲಾತಿ ಕೊಡಿಸುತ್ತೇವೆ ಎಂದು ಕಾಶಪ್ಪನವರ ತಿಳಿಸಿದರು.