ಸುಂದರ ನಗರವಾಗಿಸುವ ಪೌರಕಾರ್ಮಿಕರ ಕಾರ್ಯ ಶ್ಲಾಘನೀಯ: ಕೆ.ಎಂ.ಉದಯ್

KannadaprabhaNewsNetwork |  
Published : Jul 11, 2026, 12:30 AM IST
10ಕೆಎಂಎನ್ ಡಿ17 | Kannada Prabha

ಸಾರಾಂಶ

ಪ್ರಸ್ತುತ ನಗರ ವ್ಯಾಪ್ತಿ ವಿಸ್ತಾರಗೊಳ್ಳುತ್ತಿದೆ. ಅದಕ್ಕೆ ತಕ್ಕಂತೆ ಶುಚಿತ್ವಕ್ಕೂ ಹೆಚ್ಚಿನ ಒತ್ತು ನೀಡಬೇಕು. ದಿನನಿತ್ಯ ನಗರದ ಸ್ವಚ್ಛತೆಗೆ ಶ್ರಮಿಸುತ್ತಿರುವ ತಾವುಗಳು ಅಗತ್ಯ ಸಮಯದಲ್ಲಿ ವಿಶ್ರಾಂತಿ ಪಡೆಯುವ ಜತೆಗೆ ಇಲಾಖೆಯಿಂದ ಸಿಗುವ ಹಲವು ಸವಲತ್ತುಗಳನ್ನು ಪಡೆದುಕೊಳ್ಳಬೇಕೆಂದರು.

ಕನ್ನಡಪ್ರಭ ವಾರ್ತೆ ಮದ್ದೂರು

ನಗರವನ್ನು ಸುಂದರವನ್ನಾಗಿಸಲು ಹಗಲಿರುಳು ಶ್ರಮಿಸುತ್ತಿರುವ ಪೌರಕಾರ್ಮಿಕರ ಕಾರ್ಯ ಶ್ಲಾಘನೀಯ. ಪ್ರತಿಯೊಬ್ಬ ಕಾರ್ಮಿಕರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಿ ನಗರಕ್ಕೆ ಮತ್ತಷ್ಟು ಸೇವೆ ಸಲ್ಲಿಸಲು ಮುಂದಾಗಬೇಕು ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.

ನಗರದ ನಗರಸಭೆ ಕಚೇರಿ ಆವರಣದಲ್ಲಿ ನಗರೊತ್ಥಾನ ಹಂತ- 4 ಯೋಜನೆಯ ₹19.50 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಪೌರಕಾರ್ಮಿಕರ ವಿಶ್ರಾಂತಿ ಗೃಹ ಲೋಕಾರ್ಪಣೆ ಹಾಗೂ ಸುರಕ್ಷತಾ ಪರಿಕರಗಳನ್ನು ವಿತರಿಸಿ ಮಾತನಾಡಿದರು.

ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಜತೆಗೆ ಸುಂದರ ನಗರವನ್ನಾಗಿಸಲು ಹಗಲಿರುಳು ಶ್ರಮಿಸುತ್ತಿರುವ ಸ್ವಚ್ಛತಾ ಸೇನಾನಿಗಳಿಗೆ ಎಲ್ಲರಂತೆ ಬದುಕುವ ಹಕ್ಕಿದೆ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಪ್ರಸ್ತುತ ನಗರ ವ್ಯಾಪ್ತಿ ವಿಸ್ತಾರಗೊಳ್ಳುತ್ತಿದೆ. ಅದಕ್ಕೆ ತಕ್ಕಂತೆ ಶುಚಿತ್ವಕ್ಕೂ ಹೆಚ್ಚಿನ ಒತ್ತು ನೀಡಬೇಕು. ದಿನನಿತ್ಯ ನಗರದ ಸ್ವಚ್ಛತೆಗೆ ಶ್ರಮಿಸುತ್ತಿರುವ ತಾವುಗಳು ಅಗತ್ಯ ಸಮಯದಲ್ಲಿ ವಿಶ್ರಾಂತಿ ಪಡೆಯುವ ಜತೆಗೆ ಇಲಾಖೆಯಿಂದ ಸಿಗುವ ಹಲವು ಸವಲತ್ತುಗಳನ್ನು ಪಡೆದುಕೊಳ್ಳಬೇಕೆಂದರು.

ಪೌರಕಾರ್ಮಿಕರಿಗೆ ಎಲ್ಲಾ ಸವಲತ್ತುಗಳನ್ನು ಒದಗಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಕಾರ್ಮಿಕರು ಕಾಲಕಾಲಕ್ಕೆ ತಮ್ಮ ಆರೋಗ್ಯ ತಪಾಸಣೆ ಜತೆಗೆ ಇಲಾಖೆ ಹಲವು ಸುರಕ್ಷಾ ಪರಿಕರಗಳನ್ನು ವಿತರಿಸುವ ಮೂಲಕ ತಮ್ಮ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಿದೆ. ಅವುಗಳನ್ನು ಸದ್ಬಳಕೆ ಮಾಡಿಕೊಂಡು ಕರ್ತವ್ಯದ ಮುನ್ನಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ತಿಳಿಸಿದರು.

ನಗರಸಭೆ ಆಯುಕ್ತೆ ರಾಧಿಕಾ ಮಾತನಾಡಿ, ನಗರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುವ ಮೂಲಕ ಒತ್ತಡದ ನಡವೆ ಬದುಕು ಸಾಗಿಸುತ್ತಿರುವ ಪೌರಕಾರ್ಮಿಕರಿಗೂ ಮನೋರಂಜನೆ, ವಿಶ್ರಾಂತಿ ಮತ್ತು ಕುಟುಂಬ ಸದಸ್ಯರೊಡನೆ ಕಾಲಕಳೆಯಲೆಂಬ ನಿಟ್ಟಿನಲ್ಲಿ ಮುಂಬರುವ ಪೌರಕಾರ್ಮಿಕರ ದಿನವನ್ನು ವಿಶೇಷ ಮತ್ತು ಅರ್ಥಪೂರ್ಣವಾಗಿ ಆಚರಿಸಲು ಶಾಸಕರೊಟ್ಟಿಗೆ ಚರ್ಚೆ ನಡೆಸಿರುವುದಾಗಿ ತಿಳಿಸಿದರು.

ಇದೇ ವೇಳೆ ಪೌರಕಾಮಿಕರಿಗೆ ಮಾಸ್ಕ್, ಗ್ಲೌಸ್, ಶೂ, ಟೋಪಿ ಸೇರಿ ಇನ್ನಿತರ ಸುರಕ್ಷತಾ ಪರಿಕರಗಳನ್ನು ಶಾಸಕ ಕೆ.ಎಂ.ಉದಯ್ ವಿತರಿಸಿದರು. ಈ ವೇಳೆ ನಗರಸಭೆ ವ್ಯವಸ್ಥಾಪಕ ಶ್ರೀಧರ್, ಪರಿಸರ ಅಭಿಯಂತರೆ ಅರ್ಚನಾ, ಎಇಇ ರಾಜೇಶ್, ಆರೋಗ್ಯ ನಿರೀಕ್ಷಕರಾದ ಕೀರ್ತಿಕುಮಾರ, ಭರತ್, ಶಿವಕುಮಾರ್ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತನ್ನದೇ ಪುಸ್ತಕ ಲೋಕಾರ್ಪಣೆ ಮಾಡಿ ಮದುವೆಯಾದ ಯುವಕ
ಶೈಕ್ಷಣಿಕ ಕ್ರಾಂತಿಯ ಹರಿಕಾರ ಡಾ. ಬಿ.ಎಫ್‌ ದಂಡಿನ