ಕುಸಿದ ಕಾಳಿ ಸೇತುವೆಯ ಅವಶೇಷ ತೆರವು ಕಾರ್ಯ ಆರಂಭ

KannadaprabhaNewsNetwork |  
Published : Sep 12, 2024, 01:49 AM IST
ಕಾಳಿ ಸೇತುವೆಯ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. | Kannada Prabha

ಸಾರಾಂಶ

ನದಿಗೆ ಬಿದ್ದಿರುವ ಸೇತುವೆಯ ಅವಶೇಷಗಳನ್ನು ಮೇಲಕ್ಕೆತ್ತಲು ಮುಂಬಯಿಯಿಂದ ಬಾರ್ಜ್‌ ತರಿಸಲಾಗುತ್ತಿದೆ. ಆದರೆ ಬಾರ್ಜ್‌ ಬರಲು ಇನ್ನೂ 4- 5 ದಿನಗಳ ಬೇಕಾಗಲಿದೆ. ನಂತರ ಅವಶೇಷಗಳ ತೆರವು ಕಾರ್ಯ ವೇಗ ಪಡೆಯಲಿದೆ. ಅಲ್ಲಿಯ ತನಕ ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಯಲಿದೆ.

ಕಾರವಾರ: ಕುಸಿದು ಬಿದ್ದಿದ್ದ ಕಾಳಿ ನದಿ ಹಳೆಯ ಸೇತುವೆ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ಆರಂಭವಾಗಿದೆ. ಭಾರಿ ಪ್ರಮಾಣದಲ್ಲಿರುವ ಅವಶೇಷಗಳನ್ನು ಜೆಸಿಬಿ ಬಳಸಿ ತೆರವುಗೊಳಿಸಲಾಗುತ್ತಿದೆ.

ಕಳೆದ ಆ. 7ರಂದು ಮಧ್ಯರಾತ್ರಿ ಈ ಸೇತುವೆ ಕುಸಿದು ಬಿದ್ದಿತ್ತು. ಸೇತುವೆಯೊಂದಿಗೆ ಲಾರಿಯೂ ನದಿಗೆ ಬಿದ್ದಿತ್ತು. ತಮಿಳುನಾಡು ಮೂಲದ ಲಾರಿ ಚಾಲಕನನ್ನು ರಕ್ಷಿಸಲಾಗಿತ್ತು. ಹೆಚ್ಚಿದ ಮಳೆ, ಕಾಳಿ ನದಿಯಲ್ಲಿ ಏರಿದ ನೀರಿನ ಮಟ್ಟದಿಂದಾಗಿ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ಒಂದು ತಿಂಗಳ ಬಳಿಕ ಶುರುವಾಗಿದೆ.

ಸೇತುವೆಯ ಪಿಲ್ಲರ್‌ಗಳು ಕುಸಿದಿಲ್ಲ. ಜತೆಗೆ ಕೆಲ ಭಾಗ ಕೂಡ ಕುಸಿದಿಲ್ಲ. ಅರ್ಧಭಾಗದಷ್ಟು ಮಾತ್ರ ಕುಸಿದಿದೆ. ನಾಲ್ಕು ಕಂಬಗಳ ನಡುವಣ ಕಾಂಕ್ರೀಟ್ ಸ್ಲ್ಯಾಬ್ ಕುಸಿದುಬಿದ್ದಿದೆ. ಸೇತುವೆಯ ಕಂಬಗಳು ಹಾಗೂ ಕುಸಿದು ಬಿದ್ದ ಕಾಂಕ್ರಿಟ್ ಸ್ಲ್ಯಾಬ್‌ಗಳನ್ನು ತೆರವುಗೊಳಿಸುವುದು ಸವಾಲಾಗಿದೆ. ಏಕೆಂದರೆ ಪಕ್ಕದಲ್ಲೇ ಹೊಸ ಸೇತುವೆ ಇದೆ. ಹೊಸ ಸೇತುವೆಗೆ ಯಾವುದೆ ಹಾನಿಯಾಗದಂತೆ ಅವಶೇಷಗಳನ್ನು ಹೊರತೆಗೆಯಬೇಕಾಗಿದೆ.

ನದಿಗೆ ಬಿದ್ದಿರುವ ಸೇತುವೆಯ ಅವಶೇಷಗಳನ್ನು ಮೇಲಕ್ಕೆತ್ತಲು ಮುಂಬಯಿಯಿಂದ ಬಾರ್ಜ್‌ ತರಿಸಲಾಗುತ್ತಿದೆ. ಆದರೆ ಬಾರ್ಜ್‌ ಬರಲು ಇನ್ನೂ 4- 5 ದಿನಗಳ ಬೇಕಾಗಲಿದೆ. ನಂತರ ಅವಶೇಷಗಳ ತೆರವು ಕಾರ್ಯ ವೇಗ ಪಡೆಯಲಿದೆ. ಅಲ್ಲಿಯ ತನಕ ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಯಲಿದೆ.

ಕಾಂಕ್ರಿಟ್ ಅವಶೇಷಗಳನ್ನು ಜೆಟ್ಟಿಗೆ ತಂದು ಕಾಂಕ್ರಿಟ್ ಒಡೆದು ಅದರಲ್ಲಿ ಇರುವ ಕಬ್ಬಿಣದ ಸರಳುಗಳನ್ನು ಬೇರ್ಪಡಿಸಲಾಗುವುದು ಹಾಗೂ ಹೊಸ ಸೇತುವೆಗೆ ಹಾನಿ ಆಗದಂತೆ ಎಚ್ಚರಿಕೆಯಿಂದ ಅವಶೇಷಗಳನ್ನು ತೆಗೆಯುವ ಕಾರ್ಯ ನಡೆಸಲಾಗುವುದು ಎಂದು ಗುತ್ತಿಗೆ ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಹೊಸ ಸೇತುವೆಯ ಮೇಲೆ ಎರಡೂ ಕಡೆಯಿಂದ ಅಂದರೆ ಕಾರವಾರದಿಂದ ಗೋವಾಕ್ಕೆ ತೆರಳುವ ಹಾಗೂ ಗೋವಾದಿಂದ ಕಾರವಾರಕ್ಕೆ ಬರುವ ವಾಹನಗಳು ಚಲಿಸುತ್ತಿವೆ. ಹೊಸ ಸೇತುವೆಯ ಮೇಲೆ ಅಧಿಕ ಒತ್ತಡ ಬೀಳುತ್ತಿದೆ. ಹೀಗಾಗಿ ಕಾಳಿ ನದಿಯ ಹಳೆಯ ಸೇತುವೆಯ ಅವಶೇಷಗಳನ್ನು ಆದಷ್ಟು ಶೀಘ್ರದಲ್ಲಿ ತೆರವುಗೊಳಿಸಿ, ಹೊಸ ಸೇತುವೆ ನಿರ್ಮಿಸುವ ಅಗತ್ಯತೆ ಇದೆ. ಹೊಸ ಸೇತುವೆಯನ್ನು ಆದಷ್ಟು ಶೀಘ್ರದಲ್ಲಿ ನಿರ್ಮಾಣ ಮಾಡಬೇಕೆಂಬ ಕೂಗು ಸಹ ಕೇಳಿಬಂದಿದೆ.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು