ಮಹೇಂದ್ರ ದೇವನೂರುಕನ್ನಡಪ್ರಭ ವಾರ್ತೆ ಮೈಸೂರುಮುಗ್ಧ ಮಕ್ಕಳ ಭವಿಷ್ಯವನ್ನು ಮೊಳಗೆಯಲ್ಲೇ ಮೊಟಕಿಸಲು ಹವಣಿಸುತ್ತಿರುವ ಮೊಬೈಲ್, ಪಬ್ಜಿ, ವೀಡಿಯೋ ಗೇಮಿಂಗ್‌ನ ಕರಾಳ ಯುಗದಾಚೆಗೊಂದು ಬಣ್ಣದ ಲೋಕ ಸೃಷ್ಟಿಸುವ ಕೆಲಸವನ್ನು ಜೆಎಸ್‌ಎಸ್ ಸಂಸ್ಥೆ ಮಾಡುತ್ತಿದೆ.ಕಳೆದ ಹದಿನೇಳು ವರ್ಷಗಳಿಂದ ಗನ್‌ಹೌಸ್ ಬಳಿಯ ಜೆ.ಎಸ್.ಎಸ್. ಬಾಲಜಗತ್ ಆವರಣದಲ್ಲಿ ಈ ವಿಸ್ಮಯಕಾರಿ ಬಣ್ಣದ ಲೋಕ ತೆರೆದುಕೊಂಡಿದೆ. ಬೆಳೆವ ಸಿರಿ ಮೊಳಕೆಯಲ್ಲಿ ಎಂಬಂತೆ ಮಕ್ಕಳಲ್ಲಿನ ಸುಪ್ತ ಪ್ರತಿಭೆಗೆ ಬೆಳಕು ನೀಡುವ, ಅವರ ಕಲ್ಪನಾ ಲೋಕವನ್ನು ಬಣ್ಣದಿಂದ ಬೆರಗುಗೊಳಿಸುವ ಕೆಲಸವನ್ನು ಎಸ್.ಎಂ. ಜಂಬುಕೇಶ್ವರ್ ನೇತೃತ್ವದ ಕಲಾ ಶಿಕ್ಷಕರ ತಂಡ ಮಾಡುತ್ತಿದೆ.ಸಿದ್ಧಾರ್ಥಲೇಔಟ್‌ನ ನಿವಾಸಿ ವಿದಿತ್ ಈಗ ಪೊಲೀಸ್ ಪಬ್ಲಿಕ್ ಶಾಲೆಯ 4ನೇ ತರಗತಿ ಪುಟ್ಟ ಹುಡುಗ. ವಯಸ್ಸು ಒಂಬತ್ತರ ಆಸುಪಾಸು ಇರಬೇಕು. ಆದರೆ ಆತನ ಕಲಾಪ್ರೌಢಿಮೆಯನ್ನು ನೋಡಿದರೆ ಆತನೊಳಗೊಬ್ಬ ಅತ್ಯದ್ಭುತ ಚಿತ್ರಕಲಾವಿದ ಅಡಗಿದ್ದಾನೆ ಎಂಬುದನ್ನು ತೋರಿಸುತ್ತದೆ. ಇದೇ ಮೊದಲ ಬಾರಿ ಈ ಶಿಬಿರದಲ್ಲಿ ಪಾಲ್ಗೊಳ್ಳುತ್ತಿರುವ ವಿದಿತ್‌ಗೆ ಗುರಿ ಈಗಲೇ ಸ್ಪಷ್ಟವಿದೆ.ಇನ್ನು ಆಕಾಶ್, ಮರಿಮಲ್ಲಪ್ಪ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ. ಕಳೆದ ಆರು ವರ್ಷಗಳಿಂದ ಸತತವಾಗಿ ಈ ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದಾನೆ. ಆತ ಬಿಡಿಸಿದ ಯುವತಿಯೊಬ್ಬಳ ಪೆನ್ಸಿಲ್‌ಸ್ಕೆಚ್ ಅದ್ಭುತವಾಗಿದೆ. ಪಿಯುಸಿಗೆ ಬಂದರೂ ಚಿತ್ರಕಲಾ ಶಿಬಿರದಲ್ಲಿ ಪಾಲ್ಗೊಳ್ಳುತ್ತಿರುವುದಕ್ಕೆ ಆತನ ಕಲೆಯ ಸೆಳೆತ ಕಾರಣ. ಈ ಶಿಬಿರ ನನಗೆ ಜೀವಕೋಶ, ಡಯಾಗ್ರಾಮ್ಸ್‌ಬರೆಯಲು ನೆರವಾಗಿದೆ. ಮುಂದೆ ಎಂಜಿನಿಯರಿಂಗ್‌ಮಾಡಿದರೂ ಈ ಚಿತ್ರಗಳೇ ಹೆಚ್ಚು ಅನುಕೂಲವಾಗುತ್ತದೆ. ಗ್ಲಾಸ್‌ಪೇಟಿಂಗ್‌ಕೂಡ ಮಾಡುತ್ತಿದ್ದೇನೆ ಎನ್ನುತ್ತಾನೆ ಆಕಾಶ್.ಈ ಶಿಬಿರಕ್ಕೆ ವಿದಿತ್ ಮತ್ತು ಆಕಾಶ್ ಒಂದು ಉದಾಹರಣೆ ಅಷ್ಟೆ. ಇಂತಹ ಒಟ್ಟು 89 ಮಕ್ಕಳು ಶಿಬಿರದಲ್ಲಿವೆ. ಎಲ್ಲರೂ ಉತ್ತಮ ಚಿತ್ರಕಲಾವಿದರಾಗಬೇಕು ಎಂಬ ಉತ್ಕಟತೆಯಿಂದಲೇ ಬಂದವರು. ಏ. 3 ರಂದು ಆರಂಭವಾದ ಈ ಶಿಬಿರವು 25 ರಂದು ಕೊನೆಗೊಳ್ಳಲಿದೆ. ಈ ಶಿಬಿರವು ಹೊಸ ಬಗೆಯ ಕಲಾವಿದರನ್ನು ಹುಟ್ಟುಹಾಕುವುದರಲ್ಲಿ ಸಂಶಯವಿಲ್ಲ. ಕಲಾವಿದರಾಗಬೇಕು ಎಂಬ ಮಕ್ಕಳ ಜೀವನಕ್ಕೆ ಹೊಸ ರೂಪ ಕೊಡುವ ಈ ಶಿಬಿರ ಕೇವಲ ಚಿತ್ರಕಲೆಗಾಗಿಯೇ ಮೀಸಲು. ಇಲ್ಲಿ ಸಂಯೋಜನಾ ಚಿತ್ರ, ರೇಖಾ ಚಿತ್ರ, ಸರಳ ವಿಧಾನ ಚಿತ್ರ, ವರ್ಲಿ ಕಲೆ, ಅಲಂಕಾರಿಕ ನಕ್ಷೆ, ಪಕ್ಷಿ ಚಿತ್ರ ರಚನೆ, ಹೂವುಗಳು, ತರಕಾರಿ, ಸರಳಗೈಚಿತ್ರಣ, ಗ್ರೀಟಿಂಗ್‌ಕಾರ್ಡ್‌ತಯಾರಿಕೆ, ದೃಶ್ಯಕಲೆ, ಪ್ರಕೃತಿ ಚಿತ್ರ, ಮಂಡಲ ಆರ್ಟ್, ಕ್ಯಾನ್‌ವಾಸ್‌ಪೇಟಿಂಗ್, ಕಡ್ಡಿ ಚಿತ್ರ, ಚಿಕ್ಕಿಚಿತ್ರ, ತರಕಾರಿಗಳಿಗೆ ಬಣ್ಣ, ಅಚ್ಚು ಕಲೆ, ಮಾದರಿ ತಯಾರಿಕೆ ಹೀಗೆ ಹಲವು ಬಗೆಯ ಕಲೆಯನ್ನು ಕಲಿಸಿಕೊಡಲಾಗುತ್ತದೆ.1 ರಿಂದ 4ನೇ ತರಗತಿಯ ವಿಭಾಗ, 5 ರಿಂದ 7ನೇ ತರಗತಿ ಮತ್ತು 8 ರಿಂದ ದ್ವಿತೀಯ ಪಿಯುವರೆಗಿನ ಮತ್ತೊಂದು ವಿಭಾಗ ಸೇರಿ ಒಟ್ಟು ಮೂರು ವಿಭಾಗವಿದೆ. ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆವರೆಗೆ ಈ ಶಿಬಿರ ನಡೆಯುತ್ತಿದೆ. ಮಕ್ಕಳಿಗೆ 11 ಗಂಟೆ ಸುಮಾರಿಗೆ ಸ್ನ್ಯಾಕ್ಸ್‌ನೀಡಲಾಗುತ್ತದೆ. ಮಧ್ಯಾಹ್ನ 1 ಗಂಟೆಗೆ ಹಿಂದಿರುಗುತ್ತಾರೆ.ಶಿಬಿರದಲ್ಲಿ ಒಂದು ದಿನ ಪ್ರವಾಸ ಇರುತ್ತದೆ. ಈ ಬಾರಿ ಸೋಮನಾಥಪುರ ಮತ್ತು ಮುಡುಕುತೊರೆಗೆ ಪ್ರವಾಸವಿದೆ. ಮಧ್ಯಾಹ್ನ ಸುತ್ತೂರಿಗೆ ಹೋಗಿ ಸಂಜೆ ವೇಳೆಗೆ ಹಿಂದಿರುಗುತ್ತಾರೆ.ಸಮಾರೋಪದ ವೇಳೆಗೆ ಮಕ್ಕಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿ ವಿಭಾಗಕ್ಕೂ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಕ್ಕೆ ನಗದು ಸಹಿತ ಬಹುಮಾನ ಇರುತ್ತದೆ. ಹಾಗೆಯೇ ಎಲ್ಲಾ ಮಕ್ಕಳ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ.ಶಿಬಿರವನ್ನು ಜಂಬುಕೇಶ್ವರ್‌ಅವರ ನೇತೃತ್ವದಲ್ಲಿ ಪ್ರಭಾಕರ ಸಿದ್ದಪ್ಪ ಸಲಬಣ್ಣವರ, ಡಿ.ಎಸ್. ನಾಗರಾಜಪ್ಪ, ಅಲ್ಲಾಸಾಬ್ ಗಡಾದ್, ಎಂ. ನಾಗೇಂದ್ರ, ಬಿ.ಎಂ. ಕೆರುರ್, ಸಂಗೀತಾ ಮತ್ತು ಪಲ್ಲವಿ ಅವರು ಮುನ್ನಡೆಸುತ್ತಿದ್ದಾರೆ.---ಕೋಟ್17ಎಂವೈಎಸ್ 34ನಾನು ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದೇನೆ. ಸಿದ್ಧಾರ್ಥ ಲೇಔಟ್‌ನಿಂದ ಬರುತ್ತಿದ್ದೇನೆ. ಇದೇ ಮೊದಲ ಬಾರಿಗೆ ಈ ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ನಾನು ಮುಂದೆ ಆರ್ಟಿಸ್ಟ್ ಆಗಬೇಕು.- ವಿದಿತ್.---17ಎಂವೈಎಸ್ 35ನಾನು ಆರನೇ ತರಗತಿ ಓದುತ್ತಿದ್ದೇನೆ. ಇದೇ ಮೊದಲ ಬಾರಿಗೆ ಚಿತ್ರಕಲಾ ಶಿಬಿರದಲ್ಲಿ ಭಾಗವಹಿಸುತ್ತಿದ್ದೇನೆ. ತುಂಬಾ ಇಷ್ಟ ಆಯಿತು. ಮುಂದಿನ ವರ್ಷವೂ ಬರಬೇಕು. ನಾನು ಮನೆಯಲ್ಲಿ ಎಲ್ಲರ ಚಿತ್ರ ಬಿಡಿಸುತ್ತಿದ್ದೆ. ಈಗ ಗ್ಲಾಸ್‌ಪೇಟಿಂಗ್‌ಕೂಡ ಮಾಡಿದ್ದೇನೆ.- ಶರಣ್ಯ, 6ನೇ ತರಗತಿ, ವಿದ್ಯಾರಣ್ಯಪುರಂ.---17ಎಂವೈಎಸ್ 36ಇದು 17ನೇ ಶಿಬಿರ. ಯಾವುದೇ ಲಾಭದ ಉದ್ದೇಶವಿಲ್ಲದೆ ಈ ಶಿಬಿರವನ್ನು ನಡೆಸಿಕೊಂಡು ಬರುತ್ತಿದ್ದೇವೆ. ಅನೇಕ ಮಕ್ಕಳಲ್ಲಿ ಚಿತ್ರಕಲೆಯ ಬಗ್ಗೆ ಆಸಕ್ತಿ ಇರುತ್ತದೆ. ಅದನ್ನು ಗುರುತಿಸುವಲ್ಲಿ ನಾವು ವಿಫಲರಾಗುತ್ತಿದ್ದೇವೆ. ಇಂತಹ ಶಿಬಿರ ಅವರಿಗೆ ಒಂದು ವೇದಿಕೆ ಕಲ್ಪಿಸುತ್ತದೆ.- ಎಸ್.ಎಂ. ಜಂಬುಕೇಶ್ವರ್, ಶಿಬಿರದ ಸಂಚಾಲಕರು.