ಹುಬ್ಬಳ್ಳಿಯಲ್ಲಿ ಜಯದೇವ ಆಸ್ಪತ್ರೆಯ ಕಾಮಗಾರಿಗೆ ವೇಗ

KannadaprabhaNewsNetwork |  
Published : Jan 25, 2025, 01:02 AM IST
ಜಯದೇವ ಆಸ್ಪತ್ರೆ | Kannada Prabha

ಸಾರಾಂಶ

₹ 230 ಕೋಟಿ ವೆಚ್ಚದಲ್ಲಿ ಜಯದೇವ ಆಸ್ಪತ್ರೆಯ ಐದು ಮಹಡಿ ಕಟ್ಟಡ ನಿರ್ಮಾಣವಾಗುತ್ತಿದ್ದು 437 ಬೆಡ್‌ಗಳ ಆಸ್ಪತ್ರೆ ಇದಾಗಲಿದೆ. ಅರ್ಧದಷ್ಟು ಕಾಮಗಾರಿ ಮುಗಿದಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಂಜಿನಿಯರಿಂಗ್‌ ವಿಭಾಗ ಈ ಕಾಮಗಾರಿ ಉಸ್ತುವಾರಿ ವಹಿಸಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಬಹುವರ್ಷಗಳ ಬೇಡಿಕೆಯಾದ ಜಯದೇವ ಹೃದ್ರೋಗ ಆಸ್ಪತ್ರೆಯ ಕಟ್ಟಡ ಕಾಮಗಾರಿ ಭರದಿಂದ ಸಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ, ಈ ವರ್ಷಾಂತ್ಯದಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಹೃದ್ರೋಗಕ್ಕೆ ಬೆಂಗಳೂರಿನ ಜಯದೇವ ಆಸ್ಪತ್ರೆ ಅತ್ಯಂತ ಫೇಮಸ್‌. ಅದರ ಶಾಖೆ ಉತ್ತರ ಕರ್ನಾಟಕ ಭಾಗದಲ್ಲಿ ನಿರ್ಮಿಸಬೇಕು. ಇದರಿಂದ ಬಡ ರೋಗಿಗಳಿಗೆ ಸಾಕಷ್ಟು ಅನುಕೂಲವಾಗುತ್ತದೆ ಎಂಬ ಬೇಡಿಕೆ ವರ್ಷ ದಶಕಗಳದ್ದು. ಉತ್ತರ ಕರ್ನಾಟಕದ 13 ಜಿಲ್ಲೆಗಳ ಹೃದ್ರೋಗಿಗಳು ಶಸ್ತ್ರಚಿಕಿತ್ಸೆ ಸೇರಿದಂತೆ ಹೃದಯ ಸಂಬಂಧಿ ಕಾಯಿಲೆಗಳಿಗೆ ಪರೀಕ್ಷಿಸಲು ಜಯದೇವಕ್ಕೆ ಹೋಗಬೇಕಾಗುತ್ತದೆ. ಹಾಗಂತ ಇಲ್ಲಿ ಆಸ್ಪತ್ರೆಗಳಿಲ್ಲ ಅಂತೇನೂ ಇಲ್ಲ. ಇವೆ. ಆದರೆ, ಎಲ್ಲವೂ ಖಾಸಗಿ ಆಸ್ಪತ್ರೆಗಳು. ಇನ್ನು ಕೆಎಂಸಿ ಆರ್‌ಐನಲ್ಲಿ ಹೃದ್ರೋಗದ ವಿಭಾಗವೇನೋ ಇದೆ. ಆದರೆ, ಜಯದೇವ ಆಸ್ಪತ್ರೆಯಷ್ಟು ಸೌಲಭ್ಯಗಳು ಅಲ್ಲಿಲ್ಲ ಎಂಬುದು ಅಷ್ಟೇ ಸ್ಪಷ್ಟ. ಆದಕಾರಣ ಜಯದೇವ ಆಸ್ಪತ್ರೆ ತೆರೆಯಬೇಕು ಎಂಬ ಬೇಡಿಕೆ ಬಹು ದಶಕಗಳಿಂದಲೇ ಇದೆ.

ಇದಕ್ಕೆ ತಕ್ಕಂತೆ ಜನಪ್ರತಿನಿಧಿಗಳು ಕೂಡ ಆಗಾಗ ಜಯದೇವ ಆಸ್ಪತ್ರೆ ನಿರ್ಮಿಸುತ್ತೇವೆ ಎಂದು ಹೇಳುತ್ತಿದ್ದರೆ ವಿನಃ ಇದಕ್ಕೆ ಚಾಲನೆ ಮಾತ್ರ ಸಿಗುತ್ತಿರಲಿಲ್ಲ.

ಒಂದು ಸಲವಂತೂ ಜಯದೇವ ಹೃದ್ರೋಗ ಆಸ್ಪತ್ರೆಗೆ ಇಲ್ಲಿನ ಕೆಎಂಸಿಆರ್‌ಐ (ಕಿಮ್ಸ್‌) ನಲ್ಲಿನ ಒಂದು ಭಾಗ ಬಿಟ್ಟುಕೊಡಲು ಮುಂದಾಗಿತ್ತು. ಆದರೆ, ಇದಕ್ಕೆ ಜಯದೇವ ಆಸ್ಪತ್ರೆ ಆಡಳಿತ ಮಂಡಳಿ ಒಪ್ಪಿರಲಿಲ್ಲ. ಬೇಕಾದಂಥ ಸೌಲಭ್ಯ ಕಲ್ಪಿಸಲು ಸಾಧ್ಯವಿಲ್ಲ ಎಂದು ಹೇಳಿ ಏನೇನು ಮಾನದಂಡಗಳಿರಬೇಕು ಎಂಬುದನ್ನು ತಿಳಿಸಿತ್ತು. ಬಳಿಕ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಜಯದೇವ ಆಸ್ಪತ್ರೆ ಸ್ಥಾಪಿಸುವ ಕುರಿತು ಬಜೆಟ್‌ನಲ್ಲೇ ಘೋಷಣೆ ಮಾಡಿದ್ದರು. ತದನಂತರ ಮತ್ತೆ ಇದು ಕೆಲ ದಿನಗಳ ಕಾಲ ನನೆಗುದಿಗೆ ಬಿದ್ದಿತ್ತು. ಕೊನೆಗೆ 2023ರ ಮಾರ್ಚ್‌ನಲ್ಲಿ ಆನಂದನಗರ ಸಮೀಪ ಇದಕ್ಕಾಗಿ ಪ್ರತ್ಯೇಕ ಜಾಗ ಗುರುತಿಸಿ ಆಸ್ಪತ್ರೆ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.

ಡಿಸೆಂಬರ್‌ ಅಂತ್ಯಕ್ಕೆ ಪೂರ್ಣ:

₹ 230 ಕೋಟಿ ವೆಚ್ಚದಲ್ಲಿ ಐದು ಮಹಡಿ ಕಟ್ಟಡ ನಿರ್ಮಾಣವಾಗುತ್ತಿದ್ದು 437 ಬೆಡ್‌ಗಳ ಆಸ್ಪತ್ರೆ ಇದಾಗಲಿದೆ. ಅರ್ಧದಷ್ಟು ಕಾಮಗಾರಿ ಮುಗಿದಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಂಜಿನಿಯರಿಂಗ್‌ ವಿಭಾಗ ಈ ಕಾಮಗಾರಿ ಉಸ್ತುವಾರಿ ವಹಿಸಿದೆ. ಡಿಸೆಂಬರ್‌ ಅಂತ್ಯಕ್ಕೆ ಈ ಕಾಮಗಾರಿ ಪೂರ್ಣವಾಗುವ ಸಾಧ್ಯತೆ ಇದೆ. ಒಂದು ವೇಳೆ ಡಿಸೆಂಬರ್‌ನೊಳಗೆ ಆಗದಿದ್ದರೂ 2026ರ ಮಾರ್ಚ್‌ನೊಳಗಂತೂ ಮುಗಿಯುವುದು ಗ್ಯಾರಂಟಿ ಎಂದು ಇಲಾಖೆಯ ಮೂಲಗಳು ತಿಳಿಸುತ್ತವೆ.

ಇದರಿಂದ ಹುಬ್ಬಳ್ಳಿ-ಧಾರವಾಡ ಅಷ್ಟೇ ಅಲ್ಲ. ಉತ್ತರ ಕರ್ನಾಟಕದ 13 ಜಿಲ್ಲೆಗಳ ಬಡ ರೋಗಿಗಳಿಗೆ ಜಯದೇವ ಹೃದ್ರೋಗ ಆಸ್ಪತ್ರೆ ವರದಾನವಾಗಲಿದೆ. ಈಗಾಗಲೇ ಕಲ್ಯಾಣ ಕರ್ನಾಟಕದಲ್ಲಿ ಜಯದೇವ ಆಸ್ಪತ್ರೆ ಶಾಖೆ ಆರಂಭವಾಗಿದೆ. ಆದಷ್ಟು ಬೇಗನೆ ಈ ಆಸ್ಪತ್ರೆ ಕಾಮಗಾರಿ ಪೂರ್ಣಗೊಳಿಸಿ ಜನರಿಗೆ ಅನುಕೂಲ ಮಾಡಬೇಕು ಎಂಬ ಆಗ್ರಹ ಸಾರ್ವಜನಿಕರದ್ದು.

ಒಟ್ಟಿನಲ್ಲಿ ಜಯದೇವ ಆಸ್ಪತ್ರೆಯ ಕನಸು ನನಸಾಗುವ ಕಾಲ ಸನ್ನಿಹಿತವಾಗಿರುವುದಂತೂ ಸತ್ಯ.ಹುಬ್ಬಳ್ಳಿಯಲ್ಲಿ ನಿರ್ಮಿಸುತ್ತಿರುವ ಜಯದೇವ ಆಸ್ಪತ್ರೆಯ 437 ಬೆಡ್‌ಗಳ ಆಸ್ಪತ್ರೆ ಆಗಲಿದೆ. ಕಾಮಗಾರಿ ಭರದಿಂದ ಸಾಗಿದೆ. ಡಿಸೆಂಬರ್‌ ಅಂತ್ಯಕ್ಕೆ ಪೂರ್ಣವಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಂಜಿನಿಯರಿಂಗ್‌ ವಿಭಾಗದ ಅಭಿಯಂತರ ಅರುಣಕುಮಾರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!