ಸಂವಿಧಾನದ ತಿರುಳನ್ನೇ ಬುಡಮೇಲುಗೊಳಿಸುವ ಕೆಲಸ: ಗೋವಿಂದರಾಜು

KannadaprabhaNewsNetwork | Updated : Feb 27 2024, 01:35 AM IST

ಸಾರಾಂಶ

ಸಂವಿಧಾನದ ತಿರುಳನ್ನೇ ಬುಡಮೇಲುಗೊಳಿಸಿ ಅದರ ಮೂಲ ಆಶಯಗಳಿಗೆ ಧಕ್ಕೆ ತರಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಹಾನಗಲ್ಲ

ಸಂವಿಧಾನದ ಮೂಲಕ ಸಾಮಾನ್ಯರಿಗೆ ದೇಶದ ಭವಿಷ್ಯ ನಿರ್ಧರಿಸುವ ಅವಕಾಶ ಅಂಬೇಡ್ಕರ್ ಕಲ್ಪಿಸಿದ್ದಾರೆ. ಇದೀಗ ಅಂಥ ಸಂವಿಧಾನದ ತಿರುಳನ್ನೇ ಬುಡಮೇಲುಗೊಳಿಸಿ ಅದರ ಮೂಲ ಆಶಯಗಳಿಗೆ ಧಕ್ಕೆ ತರಲಾಗುತ್ತಿದೆ ಎಂದು ಡಿಎಸ್‌ಎಸ್‌ನ (ಪರಿವರ್ತನಾವಾದ) ರಾಜ್ಯಾಧ್ಯಕ್ಷ ಗೋವಿಂದರಾಜು ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣದ ಜೈಭೀಮ್ ಜನಪದ ಕಲಾಸಂಘದ ಆಶ್ರಯದಲ್ಲಿ ನಡೆದಿರುವ ಭೀಮೋತ್ಸವ-೨೦೨೪ ಸಮಾರಂಭವನ್ನು ಸಂವಿಧಾನದ ಪ್ರತಿ ಓದುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಇನ್ನೊಬ್ಬರನ್ನು ಹಿಂಸಿಸಿ ಸುಖ ಅನುಭವಿಸಿದರೆ ಭಗವಂತ ಕೂಡ ಮೆಚ್ಚುವುದಿಲ್ಲ. ನಾನೊಬ್ಬ ಮಾತ್ರ ಚೆನ್ನಾಗಿ ಬದುಕಿ, ಉಳಿದವರು ಸಂಕಷ್ಟದಲ್ಲಿದ್ದರೆ ಏನು ಪ್ರಯೋಜನ. ಧರ್ಮದ ಹೆಸರಿನಲ್ಲಿ ನಮ್ಮನ್ನೆಲ್ಲ ಒಡೆದು ಆಳಲಾಗುತ್ತಿದ್ದು, ಇಡೀ ಒಕ್ಕೂಟ ವ್ಯವಸ್ಥೆಗೆ ಕೊಡಲಿಪೆಟ್ಟು ನೀಡಲಾಗುತ್ತಿದೆ. ಜನಜಾಗೃತಿಯೊಂದೇ ಇಂದಿನ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿದೆ ಎಂದು ಅಭಿಪ್ರಾಯಪಟ್ಟ ಅವರು, ಪಕ್ಷ, ಪಂಗಡ, ಜಾತಿ ಎಲ್ಲವನ್ನೂ ತೊರೆದು ಒಂದು ಕ್ಷಣ ಮನುಷ್ಯರಾಗಿ ನಾವೆಲ್ಲರೂ ವರ್ತಿಸಬೇಕಿದೆ. ಅಂಬೇಡ್ಕರ್ ಅವರನ್ನು ಹೊಗಳುವುದು ಇಂದು ಉದ್ಯೋಗ ಆಗಿಬಿಟ್ಟಿದೆ. ಅವರನ್ನು ಅಧ್ಯಯನ ಮಾಡಿ, ಅರ್ಥ ಮಾಡಿಕೊಳ್ಳುವ ಪ್ರಯತ್ನ ನಮ್ಮಿಂದ ನಡೆದಿದೆಯೇ? ಎಂದು ನಾವೆಲ್ಲ ಪ್ರಶ್ನೆ ಮಾಡಿಕೊಳ್ಳಬೇಕಿದೆ. ಅಂಬೇಡ್ಕರ್ ಅವರನ್ನು ದಲಿತರಿಗೆ ಸೀಮಿತಗೊಳಿಸುವ ಮನಸ್ಥಿತಿ ಮೊದಲಿಗೆ ಬದಲಾಗಬೇಕಿದೆ ಎಂದರು.

ಡಿಎಸ್‌ಎಸ್ ಜಿಲ್ಲಾಧ್ಯಕ್ಷ ಸುನೀಲ ಬೆಟಗೇರಿ ಮಾತನಾಡಿ, ಅಂಬೇಡ್ಕರ್‌ರವರು ಮಹಾ ಮಾನವತಾವಾದಿ ಎನ್ನುವುದನ್ನು ತಿಳಿಯಬೇಕಿದೆ. ದೇಶದಲ್ಲಿಂದು ನಾವಿರುವ ಸ್ಥಿತಿಯನ್ನೊಮ್ಮೆ ಅವಲೋಕಿಸಿದರೆ ಅಂಬೇಡ್ಕರ್ ನೆನಪಾಗುತ್ತಿದ್ದಾರೆ. ಭಯದ ವಾತಾವರಣದಲ್ಲಿ ಪ್ರತಿಯೊಬ್ಬರೂ ಬದುಕುತ್ತಿದ್ದೇವೆ ಎಂದರು.

ಭೀಮ ಪುರಸ್ಕಾರ ಸ್ವೀಕರಿಸಿದ ಸಾಹಿತಿ ಎನ್.ಎಸ್. ಮುಶೆಪ್ಪನವರ ಮಾತನಾಡಿ, ಮಾರ್ಗದರ್ಶನ ನೀಡಬೇಕಾದವರೂ ಕೂಡ ವಿವೇಚನಾ ರಹಿತ ನಿಲುವು ತಾಳಿದರೆ ದುರಂತ ಕಾದಿದೆ. ಒಬ್ಬರಿಗೊಬ್ಬರು ಅರಿತು ಹೆಜ್ಜೆ ಇಟ್ಟರೆ ಎಲ್ಲರ ಬದುಕು ಕೂಡ ಹಸನಾಗಲಿದೆ. ಅಂಬೇಡ್ಕರ್ ಸಂವಿಧಾನ ರಚಿಸದೇ ಇದ್ದರೆ ದೇಶದಲ್ಲಿ ನೆಮ್ಮದಿಯೇ ಇರುತ್ತಿರಲಿಲ್ಲ ಎಂದರು.

ಶಿಕ್ಷಕ ಶ್ರೀಕಾಂತ ಹುಲ್ಮನಿ ಅವರಿಗೆ ಭೀಮ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಂಘದ ನಿರ್ದೇಶಕ ಸಂತೋಷ ದೊಡ್ಡಮನಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ನಿರ್ದೇಶಕ ರಾಘವೇಂದ್ರ ಸೈದಣ್ಣನವರ, ಸತೀಶ ಕಾಟೇನಹಳ್ಳಿ, ಎಸ್.ಕೆ. ದೊಡ್ಡಮನಿ, ಬಿ.ವಿ. ಬಿರಾದಾರ, ಮಾರುತಿ ಪುರ್ಲಿ, ಜಗದೀಶ ಶಿಡ್ಲಾಪುರ, ಮಲ್ಲೇಶಪ್ಪ ಮಡ್ಲೇರ, ಸಂಘದ ಅಧ್ಯಕ್ಷ ಮಂಜುನಾಥ ಕರ್ಜಗಿ, ಉಪಾಧ್ಯಕ್ಷ ಮಾರುತಿ ಹಂಜಗಿ, ಎಸ್.ಎಂ. ಕೋತಂಬ್ರಿ, ಶಿವಾನಂದ ಮಾರನಬೀಡ, ವಿದ್ಯಾ ಚೌಡಣ್ಣನವರ, ನವೀನ ಪಾಟೀಲ ಸೇರಿದಂತೆ ಪ್ರಮುಖರಿದ್ದರು.

Share this article