ಬಡ ಮಕ್ಕಳಿಗೆ ಆಶ್ರಯ ನೀಡಿ ಬೆಳೆಸುವ ಕಾರ್ಯದಲ್ಲಿ ಗವಿಶ್ರೀಗಳ ಕಾರ್ಯ ಹಿರಿದು

KannadaprabhaNewsNetwork |  
Published : Jan 16, 2025, 12:47 AM IST
15ಕೆಪಿಎಲ್25:ಕೊಪ್ಪಳ ನಗರದಲ್ಲಿ ಜರುಗಿದ ಗವಿಸಿದ್ದೇಶ್ವರ ರಥೋತ್ಸವ ಉದ್ಘಾಟನಾ ಸಮಾರಂಭವನ್ನೂದ್ದೇಶಿಸಿ ಧಾರವಾಡದ  ಸುಪ್ರಸಿದ್ದ ಹಿಂದೂಸ್ತಾನಿ ಗಾಯಕ ಪದ್ಮಶ್ರೀ ಎಂ ವೇಂಕಟೇಶ ಮಾತನಾಡಿದರು.    | Kannada Prabha

ಸಾರಾಂಶ

ಬಡ ಮಕ್ಕಳಿಗೆ ಆಶ್ರಯ ನೀಡಿ ಬೆಳೆಸುವ ಕಾರ್ಯದಲ್ಲಿ ಗವಿಶ್ರೀಗಳ ಕಾರ್ಯ ಹಿರಿದು.

ಒಳ್ಳೆಯದು ಆಗಬೇಕು ಎಂಬುದು ಶ್ರೀಗಳ ಆಸೆರಥೋತ್ಸವಕ್ಕೆ ಚಾಲನೆ ನೀಡಿದ ಪದ್ಮಶ್ರೀ ಪಂಡಿತ ಎಂ. ವೆಂಕಟೇಶ ಕುಮಾರ ಅಭಿಮತ

ಕನ್ನಡಪ್ರಭ ವಾರ್ತೆ ಕೊಪ್ಪಳ

ಬಡ ಮಕ್ಕಳಿಗೆ ಆಶ್ರಯ ನೀಡಿ ಬೆಳೆಸುವ ಕಾರ್ಯದಲ್ಲಿ ಗವಿಶ್ರೀಗಳ ಕಾರ್ಯ ಹಿರಿದು ಎಂದು ಹಿರಿಯ ಹಿಂದೂಸ್ತಾನಿ ಸಂಗೀತ ವಿದ್ವಾಂಸ ಪದ್ಮಶ್ರೀ ಪಂಡಿತ ಎಂ. ವೆಂಕಟೇಶ ಕುಮಾರ ಅಭಿಮತ ವ್ಯಕ್ತಪಡಿಸಿದರು.

ನಗರದಲ್ಲಿ ಜರುಗಿದ ಗವಿಸಿದ್ಧೇಶ್ವರ ರಥೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ನಾನು ಚಿಕ್ಕವನಿದ್ದಾಗ ನೋಡಿದ ಮಠಕ್ಕೂ ಈಗ ನೋಡುವ ಮಠಕ್ಕೂ ವ್ಯತ್ಯಾಸ ಇದೆ. ಗವಿಮಠವನ್ನು ನೋಡುವ ಭಾಗ್ಯ ಜಾತ್ರೆಗೆ ಸೇರಿರುವ ಜನಕ್ಕಿದೆ. ಗವಿಮಠದ ಜಾತ್ರೆ ಕಾರ್ಯ ಇತಿಹಾಸದಲ್ಲಿ ಉಳಿಯುವ ಕಾರ್ಯ ಆಗಿದೆ. ಗವಿಶ್ರೀಗಳು ಮಠಕ್ಕೆ ಬಂದ ಮೇಲೆ ಹಲವಾರು ಅಭಿವೃದ್ಧಿ ಕಾರ್ಯ ಆಗಿವೆ. ಬಸವಣ್ಣನವರ ವಚನದಂತೆ ಇವನಾರವ, ಇವನಾರವ ಎಂದೆನಿಸದೆ, ಇವ ನಮ್ಮವ ಎಂದೆನಿಸಯ್ಯಾ ಎಂಬ ವಿರಕ್ತರಾಗಿ ಗವಿಶ್ರೀಗಳು ಕಾರ್ಯ ಮಾಡುತ್ತಿದ್ದಾರೆ. ಅವರಿಗೆ ನಾವು ಏನೂ ಕೊಡುವುದು ಬೇಕಿಲ್ಲ. ಅವರಿಗೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುವ ಕಾರ್ಯ ಮಾತ್ರ ಆಗಬೇಕು. ಸಾಧಕರನ್ನು ಸಮಾಜಮುಖಿ ಆಗಿ ತೋರಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು.

ಪುಟ್ಟರಾಜ ಗವಾಯಿಗಳ ಆಶ್ರಮಕ್ಕೆ ಸೇರಬೇಕಾದರೆ ಐದು ಎಕರೆ ಹೊಲವನ್ನು ಆರು ವರ್ಷಕ್ಕೆ ₹300 ಗೆ ಬರೆದುಕೊಟ್ಟು ಬಂದು ಆಶ್ರಮ ಸೇರಿದೆ. ಅಷ್ಟು ಬಡತನ ಇತ್ತು. ನಾನು ಆಶ್ರಮದಲ್ಲಿ ಸಂಗೀತ ಅಭ್ಯಾಸ ಮಾಡಿದೆ. ಪುರಾಣದಲ್ಲಿ ಹಾಡಿದಾಗ ನೀಡುತ್ತಿದ್ದ ದೇಣಿಗೆಯಲ್ಲಿ ಕುಟುಂಬ ನಿರ್ವಹಣೆ ಮಾಡುತ್ತಿದ್ದೆ. ಬಡತನಕ್ಕೆ ಬೇಸತ್ತು ಪುಟ್ಟರಾಜ ಗವಾಯಿಗಳ ಬಳಿ ಹೋಗಿ ಗುರುಗಳೆ ನಾನು ಸಂಗೀತ ಸೇವೆ ಮಾಡುವ ಬದಲು ಹಮಾಲಿ ಮಾಡಬೇಕಿತ್ತು ಎಂದೆ. ಆಗ ಅವರು ಹೇಯ್ ಸುಮ್ಮನೀರು ನಿನಗೆ ನೌಕರಿ ಸಿಗುತ್ತದೆ ಎಂದರು. ನನಗೆ ಆರು ತಿಂಗಳಲ್ಲಿ ನೌಕರಿ ಸಿಕ್ಕಿತು. ಗುರುಗಳ ನದರು ನಮ್ಮಗಳ ಮೇಲೆ ಬಿತ್ತು. ಗುರುಗಳ ಸಾಕ್ಷಾತ್ಕಾರ ನನಗೆ ಸಿಕ್ಕಿತು. ಇವತ್ತು ನಾನು ಗುರುಗಳ ನದರಿನಿಂದ ಸಂಗೀತ ಕ್ಷೇತ್ರದಲ್ಲಿ ನನ್ನ ಹೆಸರು ಪ್ರಥಮದಲ್ಲಿದೆ. ಇದು ಅಹಂಕಾರದ ಮಾತಲ್ಲ. ಇದು ಗುರುಗಳ ನೀಡಿದ ಆಶೀರ್ವಾದ ಎಂದು ಹೇಳುತ್ತೇನೆ ಎಂದರು.

ಒಮ್ಮೆ ಪುಟ್ಟರಾಜ ಆಶ್ರಮ ಬಿಟ್ಟು ಮನೆಗೆ ಹೋಗಿದ್ದೆ, ಆಗ ಪುಟ್ಟರಾಜ ಗುರುಗಳು ನನ್ನನ್ನು ಮರಳಿ ಕರೆಯಿಸಿಕೊಂಡು ಸಂಗೀತದ ವಿದ್ಯೆ ನೀಡಿದರು.

ಗವಿಸಿದ್ಧೇಶ್ವರ ಸ್ವಾಮೀಜಿ ಅವರು ಮಾತನಾಡುವುದಿಲ್ಲ. ಅವರ ಕೆಲಸ ಹೆಚ್ಚಿದೆ. ಗವಿಶ್ರೀಗಳು ಹಾಗಿರುವುದಕ್ಕೆ ಅಪಾರ ಪ್ರಮಾಣದಲ್ಲಿ ಭಕ್ತರು ಸೇರಿದ್ದಾರೆ. ಪುಟ್ಟರಾಜ ಗವಾಯಿಗಳ ಆಶೀರ್ವಾದದಿಂದ ನಾನು ಇಲ್ಲಿಗೆ ಬಂದಿದ್ದೇನೆ. ಪುಟ್ಟರಾಜ ಗವಾಯಿಗಳ ಆಶೀರ್ವಾದ ಗವಿಶ್ರೀಗಳು ಕಂಡು ಹಿಡಿದು ನನ್ನನ್ನು ಇಲ್ಲಿಗೆ ಕರೆಸಿದ್ದಾರೆ. ಅವರದು ಮೂರ್ತಿ ಚಿಕ್ಕದು, ಕೀರ್ತಿ ದೊಡ್ಡದು. ಹಿಂದಿನ ಗವಿಮಠದ ಶ್ರೀಗಳ ತಪೋಬಲದಿಂದ ಗವಿಶ್ರೀಗಳು ನಮಗೆ ಸಿಕ್ಕಿದ್ದಾರೆ. ಗವಿಮಠದಲ್ಲಿ ಬಡ ಮಕ್ಕಳು ಬೆಳೆಯಬೇಕು, ತಯಾರಾಗಬೇಕು ಎಂಬುದು ಗವಿಶ್ರೀಗಳ ಆಶಯ. ಒಳ್ಳೆಯದನ್ನು ಕಲಿಯಿರಿ, ನೋಡಿರಿ, ಮಾಡಿರಿ ಎಂಬುದು ಮಠದ ಆಶಯ. ಒಳ್ಳೆ ಆಸೆ ಇಟ್ಟುಕೊಂಡು ಗವಿಶ್ರೀಗಳ ಕಾರ್ಯ. ಗವಿಶ್ರೀಗಳಿಗೆ 101 ವರ್ಷ ಆಯಸ್ಸು ಸಿಗಲಿ ಎಂದು ಆಶಿಸಿದರು.

PREV

Recommended Stories

ಸೆಂಚುರಿ ಕ್ಲಬ್‌ ಸೇರಿಯೇ ಬಿಟ್ಟಿತು ಸು ಫ್ರಂ ಸೋ
ಶ್ರೀಕೃಷ್ಣನೆಂಬ ನಿತ್ಯ ಸತ್ಯನಿಗೆ ಜನ್ಮಾಷ್ಟಮೀ